ಕಲಬುರಗಿ: ‘ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲೂ ಕಾನೂನು ಸುವ್ಯವಸ್ಥೆ ರಕ್ಷಣೆ ಸಮಸ್ಯೆ ಆಗುತ್ತಿದೆ. ರಾತ್ರಿಯಲ್ಲಿ ನಡೆಯುವ ಗಲಭೆಗಳ ನಿಯಂತ್ರಿಸಲು ಸಿಬ್ಬಂದಿ ಸಜ್ಜುಗೊಳಿಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಅಲೋಕ್ ಕುಮಾರ್ ತಿಳಿಸಿದರು.
‘ಪೂರಕವಾಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ಬಾರಿ ಪ್ರಾಯೋಗಿಕವಾಗಿ ರಾತ್ರಿ ತರಬೇತಿ ಕೊಡಲಾಗುತ್ತಿದೆ’ ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಿಳಿಸಿದರು.
‘ಪ್ರಶಿಕ್ಷಣಾರ್ಥಿಗಳಿಗೆ ಸಾಮಾನ್ಯವಾಗಿ ಹಗಲು ವೇಳೆ ತರಬೇತಿ ಕೊಡಲಾಗುತ್ತದೆ. ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಮಂಡ್ಯದ ನಾಗಮಂಗಲ ಹಾಗೂ ಮೈಸೂರಿನ ಉದಯಗಿರಿಯಲ್ಲಿ ರಾತ್ರಿ ವೇಳೆ ಗಲಭೆಗಳು ನಡೆದಿದ್ದವು. ಭವಿಷ್ಯದಲ್ಲಿ ಇಂತಹ ಗಲಭೆಗಳ ನಿಯಂತ್ರಣ ತರಬೇತಿಯ ಉದ್ದೇಶವಾಗಿದೆ ಎಂದರು.
‘ಪ್ರತಿ ತಿಂಗಳ ಒಂದು ರಾತ್ರಿ 12ರಿಂದ 1ಗಂಟೆಯ ನಡುವೆ ಎಚ್ಚರಿಕೆ ಗಂಟೆ ಬಾರಿಸಲಾಗುತ್ತದೆ. ಮಲಗಿರುವ ಪ್ರಶಿಕ್ಷಣಾರ್ಥಿಗಳು ಬೇಗನೆ ಎದ್ದು, ಸಿದ್ಧರಾಗಿ ತರಬೇತಿ ಸ್ಥಳಕ್ಕೆ ಬರುತ್ತಾರೆ. ಫೈರಿಂಗ್, ಲಾಠಿ ಚಾರ್ಚ್, ಗಲಭೆಕೋರರ ನಿಯಂತ್ರಣ ಕುರಿತು ಮೂರು ಗಂಟೆ ತರಬೇತಿ ಇರಲಿದೆ. ಪ್ರಾಯೋಗಿಕವೂ ಇರುತ್ತದೆ. ಭವಿಷ್ಯದಲ್ಲಿ ಇದರಿಂದ ಹೆಚ್ಚು ಅನುಕೂಲ ಆಗಲಿದೆ’ ಎಂದು ಹೇಳಿದರು.
‘ಗುಂಪುಗಲಭೆಗಳು ನಡೆದಾಗ ಉದ್ರಿಕ್ತರನ್ನು ಕೊಲ್ಲುವುದು ಉದ್ದೇಶ ಆಗಬಾರದು. ಹೀಗಾಗಿ, ಈ ಮುಂಚೆ ಇದ್ದತಂಹ ಸೊಂಟದ ಮೇಲೆ ಗುರಿ ಇರಿಸಿ ಶೂಟ್ ಮಾಡುವುದನ್ನು ನಿಲ್ಲಿಸಲಾಗಿದೆ. ಸೊಂಟದ ಕೆಳಗಡೆ ಗುರಿ ಇಟ್ಟು ಶೂಟ್ ಮಾಡುವುದನ್ನು 2025ರ ಬ್ಯಾಚ್‌ನಿಂದ ಆರಂಭಿಸಲಾಗಿದೆ. ಲಾಠಿ ಚಾರ್ಜ್‌ಗೂ ಇದೇ ನಿಯಮ ಅನ್ವಯವಾಗಲಿದೆ’ ಎಂದು ಮಾಹಿತಿ ನೀಡಿದರು.
ಸೈಬರ್ ಕ್ರೈಮ್ ಡಿಜಿಟಲ್ ಅರೆಸ್ಟ್ ಲೈಂಗಿಕ ದೌರ್ಜನ್ಯ ಡೀಪ್ ಫೇಕ್ ಡಾರ್ಕ್ ನೆಟ್ ಕ್ರಿಪ್ಟೊ ಕರೆನ್ಸಿ ಸಂಬಂಧಿತ ಅಪರಾಧ ತಡೆ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಕೊಡಲಾಗುತ್ತಿದೆಅಲೋಕ್ ಕುಮಾರ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತರಬೇತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.