ADVERTISEMENT

ಕಲಬುರ್ಗಿ: ಗ್ರಂಥಾಲಯಗಳ ತೆರೆದ ಬಾಗಿಲು, ಸುರಕ್ಷತೆಯೇ ಸವಾಲು

ಕೊರೊನಾ ಭೀತಿ: ಮೊದಲ ದಿನ ಬಾರದ ಓದುಗರು

ಭೀಮಣ್ಣ ಬಾಲಯ್ಯ
Published 13 ಸೆಪ್ಟೆಂಬರ್ 2020, 8:16 IST
Last Updated 13 ಸೆಪ್ಟೆಂಬರ್ 2020, 8:16 IST
ಕಲಬುರ್ಗಿ ನಗರದ ಕೇಂದ್ರ ಗ್ರಂಥಾಲಯದಲ್ಲಿ ಸಿಬ್ಬಂದಿ ಪುಸ್ತಕ ಜೋಡಿಸುತ್ತಿರುವುದು
ಕಲಬುರ್ಗಿ ನಗರದ ಕೇಂದ್ರ ಗ್ರಂಥಾಲಯದಲ್ಲಿ ಸಿಬ್ಬಂದಿ ಪುಸ್ತಕ ಜೋಡಿಸುತ್ತಿರುವುದು   

ಕಲಬುರ್ಗಿ: ಮೌನವೇ ಹೊದ್ದು ಮಲಗಿದ ಕಟ್ಟಡ, ಪುಸ್ತಕಗಳಿಗೆ ಮೆತ್ತಿದ ದೂಳು ಬಡಿದು ಒಪ್ಪ ಓರಣ ಮಾಡುತ್ತಿರುವ ಮಹಿಳಾ ಸಿಬ್ಬಂದಿ, ಓದೆಂಬ ಧ್ಯಾನದಲ್ಲಿ ತಲ್ಲೀನರಾಗಿರುವ ಬೆರಳೆಣಿಕೆಯ ಯುವಕರು.....

ಓದಿನ ಸಂಸ್ಕೃತಿ ಪಸರಿಸುವ ಜಿಲ್ಲೆಯ ಜ್ಞಾನ ದೇಗುಲಗಳಲ್ಲಿ ಶನಿವಾರ ಕಂಡುಬಂದ ಚಿತ್ರಣ ಇದು.

ರಾಜ್ಯದ ಎಲ್ಲ ಸಾರ್ವಜನಿಕ ಗ್ರಂಥಾಲಗಳನ್ನು ತೆರೆಯಲು ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ಮಾರ್ಚ್‌ 15 ರಂದು ಬಂದ್‌ ಆಗಿದ್ದ ಜಿಲ್ಲೆಯ ಗ್ರಂಥಾಲಯಗಳು ಶನಿವಾರ ಓದುಗರಿಗೆ ಮುಕ್ತವಾದವು. ಆದರೆ ಮಾಹಿತಿ ಕೊರತೆ ಹಾಗೂ ಕೊರೊನಾ ಭೀತಿಯ ಕಾರಣ ಓದುಗರ ಸಂಖ್ಯೆ ಈ ಹಿಂದಿನಂತಿರಲಿಲ್ಲ!

ADVERTISEMENT

ಬೆರಳಣಿಕೆಯಷ್ಟು ಓದುಗರು ಮಾತ್ರ ಕಂಡುಬಂದರು. ಕೆಲ ಗ್ರಂಥಾಲಯಗಳಲ್ಲಿ ಸಿಬ್ಬಂದಿ ಮಾತ್ರ ಇದ್ದರು.

ನಗರದ ದೊಡ್ಡ ಗ್ರಂಥಾಲಯವಾದ ನಗರದ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ) ಬಳಿ ಇರುವ ಕೇಂದ್ರ ಗ್ರಂಥಾಲಯ ಸಾಮಾನ್ಯ ದಿನಗಳಲ್ಲಿ ಓದುಗರಿಂದ ಗಿಜಿಗುಡುತ್ತಿತ್ತು. ಆದರೆ, ಶನಿವಾರ ಓದುಗರಿಗಿಂತ ಅಲ್ಲಿ ಸಿಬ್ಬಂದಿ ಸಂಖ್ಯೆಯೇ ಹೆಚ್ಚಾಗಿತ್ತು.

ಪತ್ರಿಕೆ ಓದುವವರ ಸಂಖ್ಯೆಯೇ ಹೆಚ್ಚು: ಶನಿವಾರ ಇಲ್ಲಿನ ಕೇಂದ್ರ ಗ್ರಂಥಾಲಯಕ್ಕೆ ಬಂದ ಓದುಗರಲ್ಲಿ ಪತ್ರಿಕೆ ಓದುವವರ ಸಂಖ್ಯೆಯೇ ಹೆಚ್ಚಾಗಿತ್ತು. ಹಳ್ಳಿಗಳಿಂದ ಕೆಲಸದ ಮೇಲೆ ನಗರಕ್ಕೆ ಬಂದಿದ್ದ ಗ್ರಾಮೀಣ ಜನರೂ ಗ್ರಂಥಾಲಯಕ್ಕೆ ಬಂದಿದ್ದರು.

ಸುರಕ್ಷತಾ ಕ್ರಮಗಳು: ಗ್ರಂಥಾಲಯಗಳಿಗೆ ಬರುವ ಓದುಗರ ದೇಹದ ತಾಪಮಾನ ಪರೀಕ್ಷೆ ಮಾಡಿ, ಕೈಗಳಿಗೆ ಸ್ಯಾನಿಟೈಸರ್‌ ಹಾಕಿ ಒಳಗೆ ಬಿಡಲಾಗುತ್ತಿದೆ. ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಂತರ ಕಾಯ್ದುಕೊಂಡು ಓಡಾಡುವಂತೆ ತಿಳಿಸಲಾಗುತ್ತಿದೆ. ಎಲ್ಲ ಗ್ರಂಥಾಲಯಗಳಿಗೂ ತಾಪಮಾನ ಪರೀಕ್ಷಾ ಯಂತ್ರ ಹಾಗೂ ಸ್ಯಾನಿಟೈಸರ್‌ ಅನ್ನು ಒದಗಿಸಲಾಗಿದೆ.

ಕುರ್ಚಿಗಳ ನಡುವೆ ಅಂತರ: ಗ್ರಂಥಾಲಯದಲ್ಲಿ ಮೊದಲು ಒಂದು ಟೇಬಲ್‌ಗೆ ನಾಲ್ಕು ಜನ ಕುಳಿತುಕೊಳ್ಳುತ್ತಿದ್ದರು. ಈಗ ಇಬ್ಬರನ್ನು ಮಾತ್ರ ಕೂಡಿಸಲಾಗುತ್ತಿದೆ. ಒಬ್ಬರ ಹತ್ತಿರ ಒಬ್ಬರು ಕುಳಿತುಕೊಳ್ಳುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ಅಂತರ ಇರುವಂತೆ ಕುರ್ಚಿಗಳನ್ನು ಜೋಡಿಸಲಾಗಿದೆ ಎನ್ನುತ್ತಾರೆ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಅಜಯ್‌ಕುಮಾರ.

ಸಿಬ್ಬಂದಿ ಸುರಕ್ಷತೆಗೂ ಆದ್ಯತೆ: ಓದುಗರ ಸುರಕ್ಷತೆ ಮಾತ್ರವಲ್ಲದೆ, ಸಿಬ್ಬಂದಿ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಅವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಹಾಗೂ ಗ್ಲೌಸ್‌ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸುತ್ತಾರೆ.

ಸಮಯ ಬದಲಾವಣೆ ಇಲ್ಲ: ಗ್ರಂಥಾಲಯದ ಸಮಯ ಬದಲಾವಣೆ ಆಗಿಲ್ಲ. ಸಾಮಾನ್ಯ ದಿನಗಳಲ್ಲಿದ್ದಂತೆ ಬೆಳಿಗ್ಗೆ 8.30 ರಿಂದ ರಾತ್ರಿ 8 ರವರೆಗೆ ಓದುಗರಿಗೆ ಮುಕ್ತವಾಗಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.