
ಚಿಂಚೋಳಿ: ತಾಲ್ಲೂಕಿನಲ್ಲಿ ಮಹಾಶಿವರಾತ್ರಿಯನ್ನು ಭಕ್ತಿಶ್ರದ್ಧೆಯಿಂದ ಭಾನುವಾರ ಎಲ್ಲೆಡೆ ಆಚರಿಸಲಾಯಿತು.
ಮಹಾಶಿವರಾತ್ರಿ ಅಂಗವಾಗಿ ದೇವಾಲಯಗಳಿಗೆ ಭಕ್ತರ ದಂಡೆ ಲಗ್ಗೆ ಇರಿಸಿದರೆ, ಹೋಮ ಹವನ, ಇಷ್ಟಲಿಂಗ ಪೂಜೆ, ಶಿವ ಭಜನೆ, ಪಾರಾಯಣದೊಂದಿಗೆ ದೇವರ ದರ್ಶನ ಮಾಡಿ ಮಹಾಶಿವರಾತ್ರಿಗೆ ತೆರೆ ಎಳೆದರು.
ಹಬ್ಬದ ಪ್ರಯುಕ್ತ ಬೆಳಿಗ್ಗೆಯಿಂದಲೇ ಉಪವಾಸ ಆಚರಿಸಿದ ಭಕ್ತರು, ಸಂಜೆಗೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರೆ ಲಿಂಗಾಯತರು ಮನೆಗಳಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ಉಪವಾಸಕ್ಕೆ ತೆರೆ ಎಳೆದರು. ಬಹುತೇಕ ದೇವಾಲಯಗಳಲ್ಲಿ ರಾತ್ರಿ ಜಾಗರಣ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಹೊರ ವಲಯದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಯಲ್ಲಿ ಸಾವಿರಾರು ಮಹಿಳೆಯರು ಪಂಚಲಿಂಗಗಳ ದರ್ಶನ ಪಡೆದು ನೈವೇದ್ಯ ಅರ್ಪಿಸಿ ಕೃತಾರ್ಥರಾದರು. ಬಂದ ಭಕ್ತರಿಗೆ ಅಲ್ಪೋಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂತ ನಿರಹಂಕಾರ ಸತ್ಸಂಗ ಕೂಟದಲ್ಲಿ ಸುನೀತಾ ವಿಜಯಕುಮಾರ ನಾರಾ ಅವರಿಂದ ಅನುಭಾವ ನಡೆಯಿತು. ಬ್ರಹ್ಮ ಈಶ್ವರೀಯ ವಿವಿಯ ಶಾಖೆಯಿಂದ ಬಿಕೆ ವಿಜಯಲಕ್ಷ್ಮಿ ನೇತೃತ್ವದಲ್ಲಿ ಆತ್ಮ ಪರಮಾತ್ಮನ ಕುರಿತಾದ ಚಿತ್ರಪಟಗಳ ಪ್ರದರ್ಶನ ನಡೆಯಿತು.
ಡಾ. ಕಿಶನರಾವ್ ಕಾಟಾಪುರ, ಗೌತಮ ಪಾಟೀಲ, ರೇವಣಸಿದ್ದಪ್ಪ ದಾದಾಪುರ, ಉಮಾ ಪಾಟೀಲ, ನರಸಣ್ಣ ನಾಟಿಕಾರ, ಮಲ್ಲಿಕಾರ್ಜುನ ಚಿಂಚೋಳಿ, ವಸಂತ ಇಟಗಿ, ಜಗನ್ನಾಥ ಅಗ್ನಿಹೋತ್ರಿ, ಅನಂತ ಪುರಾಣಿಕ, ವಾಸುದೇವ ಸೊಂಡೂರು, ಪ್ರಾಣೇಶ, ಶ್ರೀಕಾಂತ ನಾಟಿಕಾರ, ಜಗನ್ನಾಥ ಪೂಜಾರಿ ಶಾಂತವೀರ ಹೀರಾಪುರ ಸೇರಿದಂತೆ ಅನೇಕರು ಇದ್ದರು.
ಮಿರಿಯಾಣ ವರದಿ: ತಾಲ್ಲೂಕಿನ ಗಡಿಗ್ರಾಮದ ಮಿರಿಯಾಣದ ಪಾಪನಾಶ ಮಂದಿರದಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಭಕ್ತರು ಪಲ್ಲಕ್ಕಿ ಸೇವೆ, ಜ್ಯೋತಿ ಯಾತ್ರೆ ನಡೆಸಿ ಶಿವ ಚರಿತ್ರೆ ಪಾರಾಯಣ ಮತ್ತು ಭಜನೆ ನಡೆಸಿ ಭಕ್ತಿಯಲ್ಲಿ ಮಿಂದೆದ್ದರು.
ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಸೂರ್ಯಾಸ್ತದವರೆಗೆ ದೇವಾಲಯದಲ್ಲಿ ಧ್ಯಾನ, ಪೂಜೆ, ಭಜನೆಯಲ್ಲಿ ತೊಡಗಿ ಸಂಜೆಗೆ ಹೂವಿನತೋಟದ ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿ ಇಡಿ ರಾತ್ರಿ ಜಾಗರಣೆ ನಡೆಸಿದರು.
ವಿಕಾರಾಬಾದನ ವಕೀಲ ಗೋಪಾಲರೆಡ್ಡಿ, ಚನ್ನಬಸಯ್ಯ ಸ್ವಾಮಿ, ಷಡಕ್ಷರಿ ಸ್ವಾಮಿ, ಪಚಾಕ್ಷರಿ ಸ್ವಾಮಿ, ಜಗಜೀವನರೆಡ್ಡಿ ಪಾಟೀಲ, ನಾರಾಯಣ ಗೌಡ, ಸಿದ್ದಯ್ಯ ಗೌಡ, ರಾಚಪ್ಪ ಸೋಮನೋರ್, ಶ್ರೀಕಾಂತ ಪೂಜಾರಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಕಿಷ್ಟಾಪುರ, ವೀರೇಂದ್ರ, ಸಂಜೀವ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.