ADVERTISEMENT

ಮಾಳಿಂಗೇಶ್ವರ ದೇಗುಲದಲ್ಲಿ 16 ಕ್ವಿಂಟಲ್ ಜೋಳ ಬಳಸಿ ಹುಳಿ ಬಾನ ತಯಾರಿಗೆ ಚಾಲನೆ

ವೆಂಕಟೇಶ ಆರ್.ಹರವಾಳ
Published 16 ಅಕ್ಟೋಬರ್ 2019, 18:30 IST
Last Updated 16 ಅಕ್ಟೋಬರ್ 2019, 18:30 IST
ಜೇವರ್ಗಿ ಮಹಾಲಕ್ಷ್ಮಿ ಜಾತ್ರೆ ನಿಮಿತ್ತ ಪಟ್ಟಣದ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಕುರುಬ ಸಮುದಾಯದ ಬಾಂಧವರು ಜೋಳದ ಹುಳಿ ಬಾನ ಸಿದ್ಧಪಡಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿದರು.
ಜೇವರ್ಗಿ ಮಹಾಲಕ್ಷ್ಮಿ ಜಾತ್ರೆ ನಿಮಿತ್ತ ಪಟ್ಟಣದ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಕುರುಬ ಸಮುದಾಯದ ಬಾಂಧವರು ಜೋಳದ ಹುಳಿ ಬಾನ ಸಿದ್ಧಪಡಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿದರು.   

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ (ಕಲ್ಕತ್ತ ದೇವಿ) ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಲಿದೆ.

ಜಾತ್ರಾ ಮಹೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಪಟ್ಟಣದ ಕುರುಬ ಸಮುದಾಯ ಬಾಂಧವರು ಪಟ್ಟಣದ ಮಾಳಿಂಗೇಶ್ವರ ದೇವಸ್ಥಾನದಲ್ಲಿ 16 ಕ್ವಿಂಟಲ್ ಜೋಳದ ಹುಳಿ ಬಾನ ಸಿದ್ಧಪಡಿಸುವ ಕಾರ್ಯಕ್ಕೆ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಇದನ್ನೂ ಓದಿ:ಬಡಿಗೇರರ ಮನೆಗೆ ಭಕ್ತರ ದಂಡು

ADVERTISEMENT

ರಥೋತ್ಸವಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಡೊಳ್ಳಿನ ತಂಡದವರು ಹಾಗೂ ಭಕ್ತರಿಗೆ ನೀಡಲು ಹುಳಿ ಬಾನ ತಯಾರಿಸಲಾಗುತ್ತದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ರಥೋತ್ಸವ ಆರಂಭಕ್ಕೂ ಮುಂಚೆ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಹುಳಿ ಬಾನದೊಂದಿಗೆ ಹಸಿ ಮೆಣಸಿನಕಾಯಿ ಚಟ್ನಿ, ಉಳ್ಳಾಗಡ್ಡಿ ಹಾಗೂ ಸೂರ್ಯಕಾಂತಿ ಎಣ್ಣೆ ನೀಡಲಾಗುತ್ತದೆ.

16 ಕ್ವಿಂಟಲ್ ಜೋಳ ಕುಟ್ಟಿದ ನಂತರ ಒಣಗಿಸಿ ಮಣ್ಣಿನ ಮಡಿಕೆಗಳಲ್ಲಿ ಜೋಳದ ಹುಳಿ ಬಾನ ಸಿದ್ಧಪಡಿಸಲಾಗುತ್ತದೆ. ಬುಧವಾರದಿಂದ ಶುಕ್ರವಾರದವರೆಗೆ 3 ದಿನ ಹಗಲಿರುಳು ಹುಳಿಬಾನದ ಸಿದ್ಧತೆಯಲ್ಲಿ ಸಮಾಜದ ಬಾಂಧವರು ತೊಡಗಿಸಿಕೊಳ್ಳುತ್ತಾರೆ.

ರುಚಿ ಬಲ್ಲವನೇ ಬಲ್ಲ: ಶನಿವಾರ ಬೆಳಿಗ್ಗೆ 8 ಗಂಟೆಗೆ ಹುಳಿ ಬಾನ ಪ್ರಸಾದ ನೀಡಲು ಆರಂಭಿಸುತ್ತಾರೆ. 11 ಗಂಟೆವರೆಗೆ ಮುಂದುವರಿಯುತ್ತದೆ. ಅನೇಕ ಭಕ್ತರು ಮನೆಗೆ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ. ಶತಮಾನದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಇಂದಿಗೂ ಚಾಚು ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ.

ಜೋಳದ ಹುಳಿ ಬಾನ ಸಿದ್ಧಪಡಿಸಲು ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿ ವರ್ಷ 16 ಕ್ವಿಂಟಲ್ ಜೋಳ ನೀಡಲಾಗುತ್ತಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಜೋಳದ ಬಾನ ಸಿದ್ಧಪಡಿಸುವ ಕುರುಬ ಸಮುದಾಯದವರ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂಬುದು ಭಕ್ತರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.