ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಸೀಮೆಯ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ‘ಖರ್ಗೆ ಸಾಬ್ (ಸಾಹೇಬ)’ ಎಂದೇ ಕರೆಯಿಸಿಕೊಳ್ಳುವ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂವಿಧಾನದ ಕಲಂ 371 (ಜೆ) ಜಾರಿಗೊಳಿಸಿದ್ದಕ್ಕಾಗಿ ಈ ನಾಡಿನ ಜನರು ಎಂದಿಗೂ ಮರೆಯಲಾರರು.
ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಿತ್ರ ಪಕ್ಷಗಳ ಸಹಕಾರದೊಂದಿಗೆ ಅಧಿಕಾರದಲ್ಲಿದ್ದ ಸಂದರ್ಭ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಡಿಸಲು ಸಂವಿಧಾನ ತಿದ್ದುಪಡಿ ಮಾಡಬೇಕಿತ್ತು. ಅದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕಿತ್ತು. ತಮ್ಮ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತಲು ಪಣ ತೊಟ್ಟಿದ್ದ ಖರ್ಗೆ ಅವರು ಪ್ರತಿಯೊಬ್ಬ ಸಂಸದರು, ಮಿತ್ರ ಪಕ್ಷ, ವಿರೋಧ ಪಕ್ಷಗಳ ಕಚೇರಿಗಳಿಗೆ ತೆರಳಿ 371 (ಜೆ) ಕಲಂ ಜಾರಿಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದರು. ಅದರ ಪರಿಣಾಮವಾಗಿಯೇ ಸಂಸತ್ತು ಬಹುಮತದ ಮೂಲಕ ಅನುಮೋದನೆ ನೀಡಿತು. ಅದರ ಪ್ರತಿಫಲ ನಮ್ಮೆಲ್ಲರ ಮುಂದೆಯೇ ಇದೆ.
ಪ್ರತಿ ವರ್ಷ ಸಾವಿರಾರು ಎಂಬಿಬಿಎಸ್, ಎಂಜಿನಿಯರಿಂಗ್, ಫಾರ್ಮಸಿ ಸೇರಿದಂತೆ ವೃತ್ತಿಪರ ಶಿಕ್ಷಣ ಹಾಗೂ ಉನ್ನತ ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಸಿಗುತ್ತಿದೆ. ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಇದೆಲ್ಲದರ ಶ್ರೇಯ ನಿಸ್ಸಂದೇಹವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಸಲ್ಲಬೇಕು.
ಭಗವಾನ್ ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಲ್ಲಿ ನಂಬಿಕೆಯಿಟ್ಟಿರುವ ಖರ್ಗೆ ಅವರು ಕಲಬುರಗಿಯಲ್ಲಿ ಬುದ್ಧ ವಿಹಾರವನ್ನು ಆರಂಭಿಸುವ ಮೂಲಕ ಬುದ್ಧನ ಚಿಂತನೆಗಳನ್ನು ಹರಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಬುದ್ಧ ಪೂರ್ಣಿಮೆಯಂದು ದೇಶದ ಯಾವುದೇ ಭಾಗದಲ್ಲಿದ್ದರೂ ಕಲಬುರಗಿಗೆ ಧಾವಿಸುವ ಅವರು ಅಂದು ವಿಹಾರದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ತಪ್ಪದೇ ಭಾಗವಹಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.