ಕಲಬುರಗಿ: ‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ. ರಾಗಿ ತಿಂದವ ನಿರೋಗಿ. ರೊಟ್ಟಿ ತಿಂದವನ ರಟ್ಟೆಗಳು ಬಲು ಗಟ್ಟಿ’ ಇವೆಲ್ಲಾ ಕರುನಾಡಿನ ಜನತೆಯ ನಾಲಗೆಯಲ್ಲಿ ಹರಿದಾಡುವ ಮಾತುಗಳು. ಇಂಥ ಬಿಳಿ ಜೋಳದ ರೊಟ್ಟಿ ಇದೀಗ ಪ್ರಧಾನಿಯ ಪ್ರಶಂಸೆಗೆ ಪಾತ್ರವಾಗಿದೆ.
ದಕ್ಷಿಣ ಕರ್ನಾಟಕದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸಿದರೆ, ಉತ್ತರ ಕರ್ನಾಟಕದವರು ಊಟದಲ್ಲಿ ಜೋಳದ ರೊಟ್ಟಿಯನ್ನು ಹೆಚ್ಚಾಗಿ ಬಳಸುತ್ತಾರೆ. ‘ಜೋಳದ ರೊಟ್ಟಿ ಉತ್ತರ ಕರ್ನಾಟಕದವರ ಆರೋಗ್ಯದ ಗುಟ್ಟು’ ಅಂತೇನೂ ಬೇರೆ ಹೇಳಬೇಕಿಲ್ಲ.
‘ತೊಗರಿ ಕಣಜ’ ಎಂದೇ ಹೆಸರು ಮಾಡಿದ ಕಲಬುರಗಿ ಜಿಲ್ಲೆ ಇದೀಗ ಜೋಳದ ರೊಟ್ಟಿಯನ್ನೂ ಬ್ರ್ಯಾಂಡ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮಾತಲ್ಲೂ ಮಾರ್ಧ್ವನಿಸಿದೆ. ತಮ್ಮ ‘ಮನ್ ಕಿ ಬಾತ್’ನ 123ನೇ ಸರಣಿಯಲ್ಲಿ ಮಾತನಾಡಿದ ಪ್ರಧಾನಿ ಕಲಬುರಗಿ ಮಹಿಳೆಯರ ಪರಿಶ್ರಮವನ್ನು ಪ್ರಶಂಸಿದ್ದಾರೆ.
‘ಕಲಬುರಗಿ ಜಿಲ್ಲೆಯಲ್ಲಿ ರೊಟ್ಟಿ ತಟ್ಟಿಯೇ ಬದುಕು ಕಟ್ಟಿಕೊಂಡ ಹಲವು ಗಟ್ಟಿಗಿತ್ತಿಯರು ಇದ್ದು, ನಿತ್ಯ ಸಾವಿರಾರು ರೊಟ್ಟಿ ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ಸುಮಾರು 35 ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ರೊಟ್ಟಿ ಮಷಿನ್‌ಗಳನ್ನು ಖರೀದಿಸಿದ್ದಾರೆ. ನಿತ್ಯ ಸಾವಿರಾರು ರೊಟ್ಟಿ ಮಾಡಿ ₹5ಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ವೈಯಕ್ತಿಕವಾಗಿಯೂ ಮಹಿಳೆಯರಿಗೆ ರೊಟ್ಟಿ ಮಷಿನ್‌ಗಳನ್ನು ನೀಡಲಾಗಿದ್ದು, ಒಂದು ಯಂತ್ರ ಸುಮಾರು 10 ಮಹಿಳೆಯರಿಗೆ ಕೆಲಸ ನೀಡುತ್ತದೆ. ಕೃಷಿ ಇಲಾಖೆಯೂ ಶೇ 50ರಷ್ಟು ಸಬ್ಸಿಡಿಯಲ್ಲಿ ರೊಟ್ಟಿ ಮಷಿನ್‌ಗಳನ್ನು ನೀಡುತ್ತಿದೆ’ ಎಂದು ವಿವರಿಸುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್.
‘ಕೃಷಿ ಇಲಾಖೆಯಿಂದ ರೊಟ್ಟಿ ಮಷಿನ್ ಖರೀದಿಸುವ ಮಹಿಳೆಯರು ರೊಟ್ಟಿ ಮಾಡಿ ವಿದೇಶಗಳಿಗೂ ಕಳುಹಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ರೊಟ್ಟಿ ಮಾರಾಟ ಮತ್ತು ಬ್ರ್ಯಾಂಡಿಂಗ್‌ಗೂ ಸಹಕಾರ ನೀಡಿದ್ದು, ಸಾಗರದಾಚೆಗೆ ಕಲಬುರಗಿ ಜಿಲ್ಲೆಯ ಖಡಕ್ ರೊಟ್ಟಿ ಸದ್ದು ಮಾಡುತ್ತಿದೆ. ಇದು ಮಹಿಳೆಯರ ಸ್ವಾವಲಂಬಿ ಬದುಕಿಗೂ ನೆರವಾಗಿದ್ದು, ನಾರಿಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಪ್ರಧಾನಿಯವರ ಮಾತಿನಿಂದ ಇನ್ನಷ್ಟು ಸ್ಫೂರ್ತಿ ಬಂದಿದ್ದು, ಉದ್ಯಮವನ್ನು ಇನ್ನಷ್ಟು ವಿಸ್ತರಿಸುತ್ತೇವೆ’ ಎನ್ನುತ್ತಾರೆ ರೊಟ್ಟಿ ಕೇಂದ್ರದ ನಾರಿಯರು.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ಕೆಲಸ ಬಿಟ್ಟಾಗ ನಮಗೆ ದಿಕ್ಕೇ ತೋಚದಂತಾಯ್ತು. ನಾನು ರೊಟ್ಟಿ ಮಾಡಿ ಮಾರಲು ಶುರುಮಾಡಿದೆ. ಇದೀಗ ಅದೇ ಆಧಾರವಾಗಿದೆ.– ಅಯ್ಯಮ್ಮ ಕುಂಬಾರ, ರೊಟ್ಟಿ ಉತ್ಪಾದಕರ ಸಂಘದ ಸದಸ್ಯೆ
‘ಜಾಗತಿಕ ಮಟ್ಟದಲ್ಲಿ ಬೇಡಿಕೆ ಸೃಷ್ಟಿ’
‘ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ‘ಕಲಬುರಗಿ ಜೋಳದ ರೊಟ್ಟಿ’ ಕುರಿತು ಪ್ರಸ್ತಾಪಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ರೊಟ್ಟಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.
‘ಕಲಬುರಗಿ ಜಿಲ್ಲೆಯ ಮಹಿಳೆಯರು ಸ್ವ–ಸಹಾಯ ಸಂಘಗಳನ್ನು ರಚಿಸಿಕೊಂಡು ಜೋಳದ ರೊಟ್ಟಿ ತಯಾರಿಸಿ ಬೆಂಗಳೂರಿನಲ್ಲಿ ಮಾರುಕಟ್ಟೆ ಸೃಷ್ಟಿಕೊಂಡಿರುವ ಬಗೆಗೆ ಪ್ರಧಾನಿ ಮೋದಿ ಉಲ್ಲೇಖಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ತ್ರೀ ಸಬಲೀಕರಣದ ಕುರಿತು ಹೆಚ್ಚು ಕಾಳಜಿ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ರೊಟ್ಟಿ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿರುವುದು ಇಡೀ ರಾಜ್ಯವೇ ಹೆಮ್ಮೆಪಡುವ ಸಂಗತಿ. ಜಿಲ್ಲೆಯಲ್ಲಿ 100ಕ್ಕೂ ಅಧಿಕ ರೊಟ್ಟಿ ಯಂತ್ರಗಳನ್ನು ನೀಡಲಾಗಿದ್ದು, ಮಹಿಳೆಯರು ಮಾಸಿಕ ಸುಮಾರು ₹ 15 ಸಾವಿರ ಆದಾಯ ಗಳಿಸುತ್ತಿದ್ದಾರೆಬಿ.– ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
‘ನಮ್ಮ ಕಾಮ್ ಕಿ ಬಾತ್‌ನ ಯಶಸ್ಸು ಮನ್ ಕಿ ಬಾತ್‌ನಲ್ಲಿ’
‘ಜಿಲ್ಲೆಯ ಮಹಿಳೆಯರ ಕೌಶಲಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿ ಜೋಳದ ರೊಟ್ಟಿಯ ಮೌಲ್ಯವರ್ಧನೆಗೆ ಸಹಾಯಕವಾಗಿ ನಿಂತಿದ್ದು ಕಲಬುರಗಿ ಜಿಲ್ಲಾಡಳಿತ. ಕಲಬುರಗಿ ರೊಟ್ಟಿ ಘಮ ಪ್ರಧಾನಿಯವರಿಗೂ ತಲುಪಿದೆ! ನಮ್ಮ ‘ಕಾಮ್ ಕಿ ಬಾತ್’ನ ಯಶಸ್ಸನ್ನು ಪ್ರಧಾನಿಯವರು ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬ್ರ್ಯಾಂಡಿಂಗ್‌ಗಾಗಿ ರಾಜ್ಯ ಸರ್ಕಾರ ಸೀಡ್ ಫಂಡ್ ಒದಗಿಸಿದೆ. ಸ್ವಸಹಾಯ ಸಂಘಗಳು ಹಾಗೂ ಇತರ ಉತ್ಸಾಹಿ ಮಹಿಳೆಯರಿಗೆ ಸಬ್ಸಿಡಿಯಲ್ಲಿ ಸುಮಾರು 150 ರೊಟ್ಟಿ ಯಂತ್ರಗಳನ್ನು ಒದಗಿಸಲಾಗಿದೆ. ಸಿಎಸ್ಆರ್ ನಿಧಿಯ ಮೂಲಕ ₹ 6.5 ಲಕ್ಷ ಒದಗಿಸಲಾಗಿದೆ.
ಪ್ಯಾಕಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ನಲ್ಲಿ ನೆರವು ನೀಡಲಾಗುತ್ತಿದೆ - ಹೊರ ರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಿಸಲಾಗುತ್ತಿದೆ - ವಿದೇಶಗಳಿಗೆ ರಫ್ತ್ತು ಮಾಡುವ ಸಾಧ್ಯತೆಗಳ ಬಗ್ಗೆ ಪ್ರಯತ್ನ ಮಾಡಲಾಗುತ್ತಿದೆ .
ಸ್ವಿಗ್ಗಿ, ಜೋಮ್ಯಾಟೊ, ಅಮೇಜಾನ್ ಸೇರಿದಂತೆ ಹಲವು ಪ್ರಸಿದ್ಧ ವೇದಿಕೆಗಳಲ್ಲೂ ಮಾರುಕಟ್ಟೆ ಸೃಷ್ಟಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ‘ಕಾಮ್ ಕಿ ಬಾತ್’! ‘ರಿಪಬ್ಲಿಕ್ ಆಫ್ ಕಲಬುರಗಿ’ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸ್ವತಃ ಪ್ರಧಾನಿಗಳೇ ಸಕ್ಸಸ್ ಸ್ಟೋರಿಸ್ ಆಫ್ ಕಲಬುರಗಿ’ ಎಂಬ ಉತ್ತರ ನೀಡಿದ್ದಾರೆ ಎಂದು ಸಚಿವರು ತಮ್ಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಧಾನಿ ಮನ್ ಕಿ ಬಾತ್‌ನಿಂದ ಕಲಬುರಗಿ ರೊಟ್ಟಿ ಇಡೀ ದೇಶಕ್ಕೆ ಪರಿಚಯವಾಗಿದೆ. ಮನ್ ಕಿ ಬಾತ್ ಬಳಿಕ ಅಮೇಜಾನ್‌ನಲ್ಲಿ 60 ಮಂದಿ ರೊಟ್ಟಿಗೆ ಆರ್ಡರ್ ಮಾಡಿದ್ದಾರೆಶರಣು– ಆರ್. ಪಾಟೀಲ, ರೊಟ್ಟಿ ಉತ್ಪಾದಕರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.