ADVERTISEMENT

ಸಿದ್ಧಸಿರಿಯಿಂದ ಪರಿಸರ ಹಾನಿ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ: ಈಶ್ವರ್ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 13:17 IST
Last Updated 4 ಫೆಬ್ರುವರಿ 2024, 13:17 IST
ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ   

ಚಿಂಚೋಳಿ (ಕಲಬುರಗಿ ಜಿಲ್ಲೆ): 'ಸಿದ್ಧಸಿರಿ ಎಥೆನಾಲ್ ಮತ್ತು ವಿದ್ಯುತ್ ಘಟಕದ ವಾಸ್ತವ ಸ್ಥಿತಿಗತಿ ಕುರಿತು ಹೈಕೋರ್ಟ್‌ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮನವರಿಕೆ ಮಾಡಿಕೊಡುವರು' ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕಾಯ್ದೆ, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆಯದ ಕಾರಣಕ್ಕೆ ಸಿದ್ಧಸಿರಿ ಕಂಪನಿ ₹1.5 ಕೋಟಿ ದಂಡ ಪಾವತಿಸಿದೆ. ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆಯದೆ ಕರ್ನಾಟಕ‌ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ನೀಡಲು ಬರುವುದಿಲ್ಲ. ಹೀಗಾಗಿ, ನನ್ನ ಸೂಚನೆ ಮೇರೆಗೆ ಅಧಿಕಾರಿಗಳು ಕಂಪನಿಗೆ ನೋಟಿಸ್‌ ನೀಡಿದ್ದರು' ಎಂದರು.

'ನೋಟಿಸ್‌ ಹಿಂದೆ ರಾಜಕೀಯ ದ್ವೇಷ, ಹಗೆತನ, ಭಯ ಹುಟ್ಟಿಸುವ ಉದ್ದೇಶವಾಗಲಿ ಇಲ್ಲ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಅತಿ ಕಡಿಮೆ ಇದೆ. ಹೀಗಾಗಿ, ಅರಣ್ಯ ವಿಸ್ತರಣೆ ಮತ್ತು ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ' ಎಂದರು.

ADVERTISEMENT

'ಈ ಭಾಗದಲ್ಲಿ ಅರಣ್ಯಾಭಿವೃದ್ಧಿಗೆ ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅಡಿಯಲ್ಲಿ ಕೈಗಾರಿಕೆಗಳಿಂದ ಅನುದಾನ ಪಡೆಯಲು ಜಿಲ್ಲೆಯ ಕೈಗಾರಿಕೊದ್ಯಮಿಗಳ ಸಭೆ ನಡೆಸುತ್ತೇನೆ' ಎಂದು ಭರವಸೆ ನೀಡಿದರು.

‘ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಆಗಬೇಕೆಂಬುದು ಬಹುದಿನಗಳ ಬೇಡಿಕೆಯಿದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಚಿಂಚೋಳಿ ಅರಣ್ಯ ಒತ್ತುವರಿ ಹಾಗೂ ತೆಲಂಗಾಣ ರಾಜ್ಯದ ಜನರಿಂದ ಕರ್ನಾಟಕದ ಅರಣ್ಯ ಒತ್ತುವರಿ ತೆರವಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುವುದು’ ಎಂದು ಹೇಳಿದರು.

ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ತಡೆ ಹಿಡಿದ ಟ್ರೀ ಪಾರ್ಕ್‌ ಮತ್ತು ಜಂಗಲ್ ಲಾಡ್ಜ್‌ ನಿರ್ಮಾಣ ಕುರಿತು ಅಧಿಕಾರಿಗಳಿಂದ ವರದಿ ಪಡೆಯುತ್ತೇನೆ. ಮಾನವೀಯತೆ ದೃಷ್ಟಿಯಿಂದ 3 ಎಕರೆಗೂ ಕಡಿಮೆ ಪ್ರದೇಶದ ಅರಣ್ಯ ಜಮೀನಿನಲ್ಲಿ ಸಾಗುವಳಿ‌ ಮಾಡುತ್ತಿದ್ದರೆ, ಅವರಿಗೆ ತೆರವುಗೊಳಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಕಳೆದ ವರ್ಷ (2022-23) 5.7 ಕೋಟಿ ಸಸಿ ನೆಡಲಾಗಿದೆ. ಪ್ರಸಕ್ತ ವರ್ಷ 7 ಕೋಟಿ ಸಸಿ ನೆಡಲು ಗುರಿ ಹಾಕಿಕೊಳ್ಳಲಾಗಿದೆ’ ಎಂದು ಹೇಳಿದರು.

ಮುಖಂಡ ಸುಭಾಷ ರಾಠೋಡ, ಲಕ್ಷ್ಮಿದೇವಿ ‌ಮಂಜುನಾಥ ಕೊರವಿ, ಬಸವರಾಜ ಮಾಲಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವರ್, ಜಿಲ್ಲಾ ಅರಣ್ಯಾಧಿಕಾರಿ ಸುಮೀತಕುಮಾರ ಪಾಟೀಲ, ಎಂ.ಎಲ್ ಬಾವಿಕಟ್ಟಿ, ಮುನೀರ್ ಅಹಮದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.