ADVERTISEMENT

ವ್ಯಸನ ಮುಕ್ತ ಭಾರತ ಇಂದಿನ ತುರ್ತು: ಸಚಿವ ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 5:20 IST
Last Updated 16 ಫೆಬ್ರುವರಿ 2026, 5:20 IST
ಕಲಬುರಗಿಯ ಸೇಡಂ ರಸ್ತೆಯ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ನಲ್ಲಿ ಶಿವರಾತ್ರಿ ಅಂಗವಾಗಿ ಭಾನುವಾರ ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಸೇಡಂ ರಸ್ತೆಯ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ನಲ್ಲಿ ಶಿವರಾತ್ರಿ ಅಂಗವಾಗಿ ಭಾನುವಾರ ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ದಿನೇ ದಿನೆ ಯುವ ಪೀಳಿಗೆ ವ್ಯಸನಕ್ಕೆ ಒಳಗಾಗುತ್ತಿದೆ. ಇದರಿಂದ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ‌ ಹಾನಿಯಾಗುತ್ತಿದೆ. ಇದನ್ನು ನಿಯಂತ್ರಿಸುವುದು ಸರ್ಕಾರಗಳಿಗೂ ಸವಾಲಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಸೇಡಂ ರಸ್ತೆಯ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ನಲ್ಲಿ ಶಿವರಾತ್ರಿ ಅಂಗವಾಗಿ ಭಾನುವಾರ ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚೆಗೆ ಸಣ್ಣ ಮಕ್ಕಳೆಲ್ಲ ಮೊಬೈಲ್‌ ವ್ಯಸನಕ್ಕೆ ಅಂಟಿಕೊಳ್ಳುತ್ತಿದ್ದಾರೆ. 16ರಿಂದ 18 ವರ್ಷದ ಹದಿಹರೆಯದವರೆಲ್ಲ ತಂಬಾಕು, ಮದ್ಯ, ಮಾದಕ ವಸ್ತುಗಳಂಥ ವ್ಯಸನಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಎರಡರ ವಿರುದ್ಧವೂ ದೊಡ್ಡ ಅಭಿಯಾನ ನಡೆಸುವ ಅಗತ್ಯವಿದೆ’ ಎಂದರು.

ADVERTISEMENT

‘ನಮ್ಮ ಯುವಜನರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮ ದೇಶದ ಸಂಸ್ಕೃತಿಗೆ ವಿರುದ್ಧವಾಗಿ ನಶೆಗೆ ಅಂಟಿಕೊಳ್ಳುತ್ತಿದ್ದಾರೆ. ಇದನ್ನು ಸರ್ಕಾರವೇ ಮಾತ್ರವೇ ನಿಯಂತ್ರಿಸಲು ಸಾಧ್ಯವಿಲ್ಲ. ಜನರ ನಡುವೆ ಆಪ್ತವಾಗಿ ಕೆಲಸ ಮಾಡುವ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಇದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರ ಸರ್ಕಾರ ದೊಡ್ಡ ಅಭಿಯಾನ ನಡೆಸುತ್ತಿದೆ. ಹಳ್ಳಿ ಹಳ್ಳಿಗೆ ಹೋಗಿ ಧ್ಯಾನ, ಅಧ್ಯಾತ್ಮದ ಮೂಲಕ ಯುವಜನರನ್ನು ವ್ಯಸನದಿಂದ ಹೊರತರುತ್ತಿದೆ. ಈ ಮನಪರಿವರ್ತಿಸುವ ಕೆಲಸ ಶ್ಲಾಘನೀಯ’ ಎಂದರು.

ಅಭಿಯಾನದ ಸಂಚಾಲಕ ಬನಾರಸಿಲಾಲ್‌ ಶಾಹ ಮಾತನಾಡಿ, ‘ಭಾರತವನ್ನು ವ್ಯಸನ ಮುಕ್ತವಾಗಿಸಲು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಶೇ 97ರಷ್ಟು ಫಲಿತಾಂಶ ಸಿಗುತ್ತಿದೆ. ಅಭಿಯಾನದಡಿ ನಾಲ್ಕು ಕೋಟಿಗಳಷ್ಟು ಜನರನ್ನು ತಲುಪಿದ್ದು, ಮೂರೂವರೆ ಕೋಟಿಗಳಷ್ಟು ಜನರು ವ್ಯಸನ ಬಿಡುವ ವಾಗ್ದಾನ ಮಾಡಿದ್ದಾರೆ’ ಎಂದರು.

ನವದೆಹಲಿಯ ಸಂಪನ್ಮೂಲ ವ್ಯಕ್ತಿ ಬಿ.ಕೆ ಪಿಯೂಶ್‌ ಮಾತನಾಡಿ, ‘ನಶೆ ನಮ್ಮ ಸಂಸ್ಕೃತಿಯ ಭಾಗವೇ ಅಲ್ಲ; ನಮ್ಮದು ದೈವಿಕ ಸಂಸ್ಕೃತಿ. ಮದ್ಯ, ಮಾದಕ ವಸ್ತುಗಳ ವ್ಯಸನಗಳು ಭಾರತದ ಸಂಸ್ಕೃತಿ ಮೇಲಿನ ದೊಡ್ಡ ಹೊಡೆತ. ನಾವೆಲ್ಲ ಮಕ್ಕಳಿಗೆ ಸಂಪತ್ತಿನೊಂದಿಗೆ ಸಂಸ್ಕಾರವನ್ನೂ ಕೊಡಬೇಕಿದೆ. ಇದಕ್ಕೆ ದೃಢ ಸಂಕಲ್ಪ ಅಗತ್ಯ’ ಎಂದರು.

ಬಿ.ಕೆ ವಿಜಯಾದೀದಿ ‍ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಕೆ ಪ್ರೇಮ, ಶಾಸಕ ಎಂ.ವೈ.ಪಾಟೀಲ, ಮೇಯರ್‌ ವರ್ಷಾ ಜಾನೆ, ಉಪಮೇಯರ್‌ ತೃಪ್ತಿ ಲಾಖೆ, ಸಮಾಜ ಸೇವಕಿ ಜಯಶ್ರೀ ಮತ್ತಿಮಡು, 

ಶರಣಬಸವ ವಿವಿ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಪ್ರೊ.ಶುಭಾಂಗಿ ಟಿ.ಸಿ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಎಸ್‌ಬಿಐ ಪ್ರಾದೇಶಿಕ ಮ್ಯಾನೇಜರ್‌ ದೇವಕಿ ನಂದನ, ಅನಿರುದ್ಧ ಶೆಟ್ಟಿ, ಗುಲಬರ್ಗಾ ವಕೀಲರ ಸಂಘದ ಹೈಕೋರ್ಟ್ ಘಟಕದ ಪ್ರಧಾನ ಕಾರ್ಯದರ್ಶಿ ಗೌರೀಶ ಎಸ್.ಕೆ. ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಮಕ್ಕಳಿಗೆ ಸಂಪತ್ತಿಗಿಂತಲೂ ಸಂಸ್ಕಾರ ಕೊಡುವುದು ಮುಖ್ಯ ಎಂದು ಶ್ರೀಕೃಷ್ಣ ಹೇಳುತ್ತಾನೆ. ಆದರೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯು ಈ ಕೊರತೆ ಎದುರಿಸುತ್ತಿದೆ
ಪ್ರೊ.ಬಟ್ಟು ಸತ್ಯನಾರಾಯಣ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ
ಶಿವಲಿಂಗಗಳ ದರ್ಶನಕ್ಕೆ ಭಕ್ತಸಾಗರ
ಮಹಾಶಿವರಾತ್ರಿ ಅಂಗವಾಗಿ ಸಾವಿರು ಶಿವಭಕ್ತರು ತಂಡೋಪತಂಡವಾಗಿ ಗೀತಾನಗರದದ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ಗೆ ಭಾನುವಾರ ಭಕ್ತರು ಹರಿದು ಬಂದರು. ಮೀನಾಕಾರಿ ಕಲೆಯಲ್ಲಿ ಅರಳಿದ್ದ 30 ಅಡಿಯ ಸ್ವರ್ಣಶಿವಲಿಂಗ ದ್ವಾದಶ ಲಿಂಗಗಳ ದರ್ಶನ ಪಡೆದರು. ದಿನವಿಡೀ ಭಕ್ತರ ದಟ್ಟಣೆ ಕಂಡುಬಂತು. ಶಿವರಾತ್ರಿ ಅಂಗವಾಗಿ ಹನ್ನೆರಡು ಜ್ಯೋತಿರ್ಲಿಂಗಗಳನ್ನೂ ವಿಶೇಷವಾಗಿ ಸಿಂಗರಿಸಲಾಗಿತ್ತು. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಿಬ್ಬಂದಿ ಸಾವಿರಾರು ಭಕ್ತರಿಗೆ ಮಹಾಶಿವರಾತ್ರಿ ಸಂದೇಶ ಆಚರಣೆಯ ಮಹತ್ವ ಸಾರಿದರು. ಎಲ್ಲ ಭಕ್ತರಿಗೂ ಮಧ್ಯಾಹ್ನ ಹಣ್ಣು–ಹಂಪಲ ವಿತರಿಸಲಾಯಿತು. ಭಕ್ತರ ಅನುಕೂಲಕ್ಕಾಗಿ ಗೀತಾ ನಗರದ ತನಕ ಕೆಕೆಆರ್‌ಟಿಸಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿತ್ತು.