ಕಲಬುರಗಿ: ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ಅವರು ಖರ್ಗೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಬೀಗರ ಮನೆಯಲ್ಲಿ ಹೋಳಿಗೆ–ತುಪ್ಪ ತಿನ್ನಲು ಕಲಬುರಗಿಗೆ ಬರುತ್ತಿದ್ದರು. ಡಾ.ಉಮೇಶ ಜಾಧವ ಅವರನ್ನು ಸೋಲಿಸಿದರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಸೇಡಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಪಕ್ಷ ಮತ್ತು ದೇಶಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಬೇರೆಯವರಂತೆ ರೊಕ್ಕ ತಿಂದು ದುಬೈನಲ್ಲಿ ಆಸ್ತಿ ಮಾಡಿಲ್ಲ’ ಎಂದರು.
‘ಕಾಂಗ್ರೆಸ್‌ಗೆ ಹಿಂದುಳಿದ ಚಿಂಚೋಳಿಯ ಅಭಿವೃದ್ಧಿ ಬೇಕಾಗಿಲ್ಲ. ಕಾರಣ ಸಿದ್ಧಸಿರಿ ಎಥೆನಾಲ್ ಘಟಕದ ಬೆನ್ನು ಬಿದ್ದಿದ್ದಾರೆ. ಹೆಚ್ಚು ಪರಿಶಿಷ್ಟರನ್ನು ಹೊಂದಿರುವ ಈ ತಾಲ್ಲೂಕಿನ ಜನ ಕೆಲಸವಿಲ್ಲದೆ ಗುಳೆ ಹೋಗುತ್ತಾರೆ. ಕಾರ್ಖಾನೆ ಆರಂಭಿಸಿದ್ದರಿಂದ 1,500 ಜನಕ್ಕೆ ಕೆಲಸ ಸಿಕ್ಕಿದೆ. ಕಬ್ಬಿಗೆ ಬೇರೆ ಕಾರ್ಖಾನೆಗಳಿಗಿಂತ ಹೆಚ್ಚು ದರ ನೀಡುತ್ತೇವೆ. ಕಬ್ಬಿನ ಹಣ ಬೇಗ ರೈತರ ಖಾತೆಗೆ ಜಮಾ ಮಾಡುತ್ತೇವೆ. ಇದನ್ನು ಸಹಿಸದೆ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಸುಳ್ಳು ಹೇಳಿ ಕಾರ್ಖಾನೆ ಬಂದ್ ಮಾಡಿಸಿದ್ದಾರೆ. ಖಂಡ್ರೆಯವರದ್ದು ಕಬ್ಬಿನ ಕಾರ್ಖಾನೆ ಇದೆ. ಅವರ ಹಾಗೂ ನಮ್ಮ ಕಾರ್ಖಾನೆ ನಡುವೆ ದರ ಸ್ಪರ್ಧೆ ಇದೆ. ಆದ್ದರಿಂದ ಈಶ್ವರ ಖಂಡ್ರೆ ಸಿದ್ದರಾಮಯ್ಯನವರ ಮಾತನ್ನೂ ಕೇಳುತ್ತಿಲ್ಲ’ ಎಂದು ದೂರಿದರು.
‘ಗಿಡ ನೆಟ್ಟಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಚಿಂಚೋಳಿಯಲ್ಲಿ 17 ಸಾವಿರ ಗಿಡ ನೆಡಲಾಗಿದೆ. ಸಣ್ಣ–ಪುಟ್ಟ ಕಾರಣಗಳಿಗಾಗಿ ಕಾರ್ಖಾನೆ ಬಂದ್ ಮಾಡಿಸಿದ್ದಾರೆ. ಅಧಿಕಾರಿಗಳು ಹೈಕೋರ್ಟ್ ಆದೇಶವನ್ನೂ ಪಾಲಿಸುತ್ತಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಜಿಲ್ಲೆಯಲ್ಲಿ ಸಿಮೆಂಟ್ ಕಂಪನಿಗಳು ನಿಯಮ ಉಲ್ಲಂಘಿಸುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈ ಕಂಪನಿಗಳ ವಿರುದ್ಧ ರೈತರೂ ಪ್ರತಿಭಟನೆ ನಡೆಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.