
ಕಲಬುರಗಿ: ‘ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮೇಯರ್ ನೇತೃತ್ವದಲ್ಲಿ ಪಾಲಿಕೆಯ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಆಡಳಿತ ವ್ಯವಸ್ಥೆ ಹದಗೆಟ್ಟಿದೆ’ ಎಂದು ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.
ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ‘ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ₹ 300 ಕೋಟಿಗೂ ಅಧಿಕ ಪರಿಹಾರ ಮೊತ್ತವನ್ನು ಪಾವತಿಸಬೇಕಾದ ಪರಿಸ್ಥಿತಿ ಪಾಲಿಕೆಗೆ ಬಂದಿತ್ತು. ಮೊತ್ತ ಪಾವತಿಸಲು ವಿಫಲವಾದ ಕಾರಣ ಪಾಲಿಕೆಯ ಅಧೀನದಲ್ಲಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಆಡಳಿತ ಹದಗೆಟ್ಟಿರುವುದಕ್ಕೆ ಇದೊಂದು ಪ್ರಮುಖ ಸಾಕ್ಷಿ’ ಎಂದರು.
‘ಆಯುಕ್ತರು ಕಚೇರಿಗೆ ಬರುತ್ತಿಲ್ಲ ಎಂಬ ಮಾಹಿತಿಯೂ ಇದೆ. ಅನೇಕ ಅಧಿಕಾರಿಗಳ ಪರಿಸ್ಥಿಯೂ ಇದೇ ಆಗಿದೆ. ಇದರಿಂದ ಸಾರ್ವಜನಿಕ ಸೇವೆಗಳು ಕುಂಠಿತವಾಗಿವೆ’ ಎಂದರು.
‘ನಗರದಲ್ಲಿ 10 ದಿನಗಳಿಂದ ಕುಡಿಯುವ ನೀರಿನ ತೊಂದರೆ ಉಲ್ಭಣಗೊಂಡಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೂರು ತಿಂಗಳಿನಿಂದ ನೀರು ಸರಬರಾಜು ಘಟಕವನ್ನು ನಿರ್ವಹಿಸುತ್ತಿರುವ ಏಜೆನ್ಸಿಗೆ ಬಿಲ್ ಪಾವತಿ ಮಾಡದಿರುವ ಮಾಹಿತಿ ಇದ್ದು, ಸಮರ್ಪಕ ನಿರ್ವಹಣೆಯ ಕೊರತೆಯಿಂದ ಯಂತ್ರೋಪಕರಣಗಳು ಸಂಪೂರ್ಣ ಹಾಳಾಗಿವೆ’ ಎಂದು ಆರೋಪಿಸಿದರು.
‘ಮೇಯರ್ ಹಾಗೂ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ಕ್ರಮ ಕೈಗೊಂಡಿಲ್ಲ. ಆಡಳಿತ ಪಕ್ಷದ ಶಾಸಕರೂ ಜನರ ಸಮಸ್ಯೆಗಳನ್ನು ಆಲಿಸಲು ಮುಂದೆ ಬರುತ್ತಿಲ್ಲ. ನೀರು ಸರಬರಾಜು ಯಂತ್ರೋಪಕರಣಗಳನ್ನು ತುರ್ತಾಗಿ ದುರಸ್ತಿ ಮಾಡಿಸಬೇಕು, ಏಜೆನ್ಸಿಗೆ ಬಿಲ್ ಪಾವತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರಾರಂಭವಾಗದ ಕಾಮಗಾರಿಗಳು: ‘ಈಗಾಗಲೇ ಮಹಾನಗರ ಪಾಲಿಕೆಯಲ್ಲಿ 15ನೇ ಹಣಕಾಸು ಯೋಜನೆ, ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ ಸೇರಿದಂತೆ ಅನೇಕ ಯೋಜನೆಗಳಡಿ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳು ಮಂಜೂರಾಗಿ, ಟೆಂಡರ್ ಪ್ರಕ್ರಿಯೆಗಳೂ ಮುಕ್ತಾಯಗೊಂಡಿವೆ. ಆದರೆ ಕಾಮಗಾರಿ ಪ್ರಾರಂಭವಾಗಿಲ್ಲ. ಪ್ರತಿ ಬಾರಿ ಅನುದಾನದ ಕೊರತೆಯ ನೆಪ ಹೇಳಲಾಗುತ್ತದೆ. ಗುತ್ತಿಗೆ ನೌಕರರು , ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ತಲುಪುತ್ತಿಲ್ಲ. ‘ಪಾಲಿಕೆ ಆರ್ಥಿವಾಗಿ ದಿವಾಳಿಯಾಗಿದೆ’ ಎಂದು ಬೋರ್ಡ್ ಹಾಕಲಿ’ ಎಂದು ಕಿಡಿಕಾರಿದರು.
‘ರಸ್ತೆ ದುರವಸ್ಥೆ, ವಿರೋಧ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ ಅನುದಾನ ನೀಡುತ್ತಿಲ್ಲ ಎಂಬುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳಿದ್ದು, ಇವು ಪರಿಹಾರವಾಗದಿದ್ದಲ್ಲಿ ಪಾಲಿಕೆ ಎದುರು ಹಾಗೂ ಕಲಬುರಗಿ ಉತ್ತರ, ದಕ್ಷಿಣ ಕ್ಷೇತ್ರದ ಶಾಸಕರ ಮನೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ವಿಶಾಲ ದರ್ಗಿ, ಶಿವಾನಂದ ಪಿಸ್ತಿ, ವಿಜಯಕುಮಾರ ಸೇವಾಲಾನಿ, ಸಚಿನ ಕಡಗಂಚಿ, ವೀರಣ್ಣ ಹೊನ್ನಳ್ಳಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.