ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ ದತ್ತಾತ್ರೇಯ ಅವತಾರಿ ಪುರುಷರಾದ ನರಸಿಂಹ ಸರಸ್ವತಿ ಮಹಾರಾಜರ ಜನ್ಮೋತ್ಸವ ಕಾರ್ಯಕ್ರಮ ಜರುಗಿತು.
ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಸಹಸ್ರಾರು ಭಕ್ತರ ಮಧ್ಯೆ ದತ್ತ ದೇವಸ್ಥಾನದಲ್ಲಿ ಸೋಮವಾರ ದತ್ತಾತ್ರೇಯ ಅವತಾರಿ ಪುರುಷರಾದ ನರಸಿಂಹ ಸರಸ್ವತಿ ಮಹಾರಾಜರ ಜನ್ಮೋತ್ಸವ ಹಾಗೂ ತೊಟ್ಟಿಲ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ನರಸಿಂಹ ಸರಸ್ವತಿ ಮಹಾರಾಜ ಜನ್ಮೋತ್ಸವ ನಿಮಿತ್ತವಾಗಿ ದತ್ತ ಮೂರ್ತಿ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಕಡ ಆರತಿ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನರಸಿಂಹ ಸರಸ್ವತಿ ಮಹಾರಾಜರ ಬಾಲಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು. ನರಸಿಂಹ ಸರಸ್ವತಿ ಮಹಾರಾಜರ ಜನ್ಮೋತ್ಸವ ಅಂಗವಾಗಿ ದತ್ತ ಮಹಾರಾಜರ ಇಡೀ ದೇವಸ್ಥಾನವನ್ನು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೂ ಹಣ್ಣುಗಳನ್ನು ಅರ್ಪಿಸಿ ಪುನೀತರಾದರು.
ಇದಕ್ಕೂ ಮೊದಲು ಭಕ್ತರು ಭೀಮಾನದಿಯ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಈ ವರ್ಷ ಭೀಮಾ ನದಿಯಲ್ಲಿ ನೀರು ಸಾಕಷ್ಟಿರುವುದರಿಂದ ಭಕ್ತರಿಗೆ ಅನುಕೂಲವಾಯಿತು. ಗುರುಗಳ ಪಾದುಕಾ ದರ್ಶನಕ್ಕೆ ತೆರಳುವ ಮುನ್ನ ಯಾತ್ರಿಕರು ಸಂಗಮ (ಭೀಮಾ ಹಾಗೂ ಅಮರ್ಜಾ) ಸ್ನಾನ ಮಾಡಿದರು. ನಂತರ ನಿರ್ಗುಣ ಮಠ (ದತ್ತ ಮಂದಿರ), ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ದೇಗುಲವನ್ನು ದರ್ಶನ ಪಡೆದರು. ದೇವಸ್ಥಾನದಲ್ಲಿ ನಿರ್ಗುಣ ಪಾದುಕೆ ಮತ್ತು ಅಶ್ವತ್ಥಕಟ್ಟೆಯನ್ನು ದರ್ಶನ ಪಡೆದರು. ಆಲಯದ ಪ್ರಾಂಗಣದಲ್ಲಿ ಪಾದುಕಾ ಪೂಜೆ, ರುದ್ರಾಭಿಷೇಕ, ದೀಪಾರಾಧನೆಯಲ್ಲಿ ಪಾಲ್ಗೊಂಡಿದ್ದರು.
ನರಸಿಂಹ ಸರಸ್ವತಿ ಮಹಾರಾಜರ ಜನ್ಮಸ್ಥಳ ಕಾರ್ಯಕ್ರಮದಲ್ಲಿ ಅರ್ಚಕ ಸಂಘದ ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್ ಭಟ್ ಪೂಜಾರಿ ಹಾಗೂ ಉದಯ ಭಟ್ ಪೂಜಾರಿ ಮತ್ತು ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಹಾಗೂ ವ್ಯವಸ್ಥಾಪಕರಾದ ದತ್ತುಂಬರಿಗಿ ಸೇರಿದಂತೆ ಅರ್ಚಕರ ಮಂಡಳಿಯವರು ಹಾಗೂ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಪಾಲ್ಗೊಂಡಿದ್ದರು. ಜನ್ಮೋತ್ಸವ ಕಾರ್ಯಕ್ರಮ ಮುಗಿದ ನಂತರ ಕರ್ನಾಟಕ ರಾಜ್ಯದ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಸಂಗೀತ ಪಂಡಿತರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.