ADVERTISEMENT

‘ಬಸವಣ್ಣ, ನಾರಾಯಣಗುರುಗಳ ಚಿಂತನೆ ಒಂದೇ’

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವದ ಪ್ರಯುಕ್ತ ಬೃಹತ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 16:32 IST
Last Updated 10 ಸೆಪ್ಟೆಂಬರ್ 2022, 16:32 IST
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಕಲಬುರಗಿ‌ಯಲ್ಲಿ ವಿವಿಧ ಕಲಾ ತಂಡಗಳ ಮೆರವಣಿಗೆ ಹಾಗೂ ನಾರಾಯಣಗುರುಗಳ ಭಾವಚಿತ್ರದ ಮೆರವಣಿಗೆ ನಡೆಯಿತು
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಕಲಬುರಗಿ‌ಯಲ್ಲಿ ವಿವಿಧ ಕಲಾ ತಂಡಗಳ ಮೆರವಣಿಗೆ ಹಾಗೂ ನಾರಾಯಣಗುರುಗಳ ಭಾವಚಿತ್ರದ ಮೆರವಣಿಗೆ ನಡೆಯಿತು   

ಕಲಬುರಗಿ: ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣ ಮತ್ತು ಸಮಾನತೆಯ ಸಮಾಜಕ್ಕೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಒಂದೆ ಯಾಗಿವೆ. ಶೋಷಿತರು, ದಲಿತರು, ಹಿಂದುಳಿದವರ ಏಳ್ಗೆಗೆ ಇಬ್ಬರೂ ಒತ್ತು ನೀಡಿದರು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇತ ಪಾಟೀಲ ರೇವೂರ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಬುರಗಿಯ ರಾಜಾಪೂರ ಕ್ರಾಸ್ ವೃತ್ತಕ್ಕೆ ನಾರಾಯಣ ಗುರುಗಳ ವೃತ್ತವೆಂದು ಘೋಷಿಸಲಾಗುವುದು. ಅಪ್ಪನ ಕೆರೆ ಸುತ್ತಮುತ್ತ ಬಸವಾದಿ ಶರಣರ ಮೂರ್ತಿಗಳ ಜೊತೆಗೆ ನಾರಾಯಣ ಗುರುಗಳ ಪುತ್ಥಳಿಯೂ ಸ್ಥಾಪಿಸಲಾಗುವುದು. ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೂ ಎಲ್ಲಾ ರೀತಿಯ ನೆರವು ನೀಡಲಾಗುವುದು’ ಎಂದರು.

ADVERTISEMENT

ಕಲಬುರಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ನಾರಾಯಣ ಗುರು ಕುರಿತು ಉಪನ್ಯಾಸ ನೀಡಿದರು. ಜನರಲ್ಲಿ ವಿಚಾರ ಮೂಡಿಸಿ, ಜಾಗೃತಿಗೆ ಕಾರಣರಾದರು ಎಂಬ ವಿವರವಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ನಾರಾಯಣ ಗುರುಗಳ ಜಯಂತ್ಯುತ್ಸವ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ಗುತ್ತೇದಾರ ಮಾತನಾಡಿದರು.

ಚಿತ್ತಾಪುರ ತಾಲ್ಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಮತ್ತು ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಿಣಿ ಅವರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಂಸದ ಡಾ.ಉಮೇಶ ಜಾಧವ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪಾಲಿಕೆ ಸದಸ್ಯರಾದ ಪ್ರಭು ಹಾದಿಮನಿ, ವಿಜಯಕುಮಾರ ಸೇವಲಾನಿ, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಮಹಾಂತೇಶ ಮುಡಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಇದ್ದರು.

ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಮಹಾದೇವ ಗುತ್ತೇದಾರ, ವೆಂಕಟೇಶ ಕಡೆಚೂರ, ಕುಪೇಂದ್ರ ಗುತ್ತೇದಾರ, ಬಾಲರಾಜ ಗುತ್ತೇದಾರ,ಅರವಿಂದ ಚವ್ಹಾಣ, ವಿನೋದ ಗುತ್ತೇದಾರ ಮತ್ತು ಕಾಶಿನಾಥ ಗುತ್ತೇದಾರ ಇದ್ದರು.

‘ನಾರಾಯಣಗುರುವಿಗೆ ಮುಖ್ಯಮಂತ್ರಿ ಅಪಮಾನ’

‘ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸದೆ ಅಪಮಾನಿಸಿದ್ದಾರೆ’ ಎಂದು ಚಿತ್ತಾಪುರ ತಾಲ್ಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು

‘ವಿಧಾನಸಭೆಯಲ್ಲಿ ಎಲ್ಲಾ ಶರಣರ ಭಾವಚಿತ್ರಕ್ಕೆ ಅವರ ಜಯಂತಿಯ ದಿನದಂದು ಪುಷ್ಪ ನಮನ ಸಲ್ಲಿಸಿ, ಪೂಜೆ ಮಾಡುವ ಪದ್ಧತಿ ಹಲವು ವರ್ಷಗಳಿಂದ ನಡೆದು ಬಂದಿದೆ. ಮುಖ್ಯಮಂತ್ರಿಯವರು ಶನಿವಾರ ನಾರಾಯಣಗುರುಗಳಿಗೆ ಪೂಜೆ ಸಲ್ಲಿಸಲಿಲ್ಲ. ಜಯಂತಿಯ ಯಾವುದೇ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಳ್ಳದೆ, ಈಡಿಗ ಬಿಲ್ಲವ ನಾಮಧಾರಿ ಸಮಾಜಕ್ಕೆ ಅಗೌರವ ತೋರಿದ್ದಾರೆ’ ಎಂದರು.

ವಿದ್ಯಾರ್ಥಿಗಳು, ಸಾಧಕರಿಗೆ ಸತ್ಕಾರ

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚಿನ ಅಂಕ ಪಡೆದ ಆರ್ಯ ಈಡಿಗ ಸಮಾಜದ ವಿದ್ಯಾರ್ಥಿಗಳನ್ನು ಮತ್ತು ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಯರಗೋಳ ಗ್ರಾಮದ ರಾಕೇಶ ಕಾಶಿನಾಥ ಕಲಾಲ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದೇವಯ್ಯ ಗುತ್ತೇದಾರ, ಕಲಾ ಸೇವೆಯಲ್ಲಿನ ಸಾಧನೆಗೆ ಮೀನಾಕ್ಷಿ ಅಂಬಯ್ಯ ಗುತ್ತೇದಾರ, ಕರದಾಳದಲ್ಲಿ ನಾರಾಯಣ ಗುರುಗಳ ಶಕ್ತಿ ಪೀಠಕ್ಕೆ ಜಮೀನು ದಾನ ಮಾಡಿದ ಸುರೇಶ ಕರದಾಳ, ಸಿಸಿಬಿ ಕಚೇರಿಯ ಸುಧಾಕರ ಅವರಿಗೆ ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.