
ಕಲಬುರಗಿ: ‘ರೈತ ಮಣ್ಣಿನಲ್ಲಿ ಅನ್ನ ಬೆಳೆಯುವ ಮಾಂತ್ರಿಕ’ ಎಂಬ ಮಾತಿದೆ. ಈ ಸಾಲು ದೇಶದ ಹಸಿವು ನೀಗಿಸುವ ಅನ್ನದಾತನ ಗರಿಮೆ ಸಾರುತ್ತದೆ.
ದೇಶದ ಮಾಜಿ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಎಂದು ಅನ್ನದಾತರನ್ನು ಕೊಂಡಾಡಿದರೆ, ‘ದೇಶದ ಸಮೃದ್ಧಿಯ ಪಥವು ಹಳ್ಳಿಗಳ ಹೊಲಗಳು ಹಾಗೂ ರಾಶಿ ಕಣಜಗಳ ಮೂಲಕ ಕ್ರಮಿಸುತ್ತದೆ’ ಎಂಬುದು ಮಾಜಿ ಪ್ರಧಾನಿ ಚೌದರಿ ಚರಣಸಿಂಗ್ ನಿಲುವಾಗಿತ್ತು. ಇವೆಲ್ಲವೂ ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರದ ಮಹತ್ವ ಸಾರುತ್ತವೆ.
ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯ ಹೊರತಾಗಿಯೂ ಭಾರತ ಈಗಲೂ ಕೃಷಿ ಪ್ರಧಾನ ದೇಶವೇ. ಕೃಷಿಯೇ ಬದುಕಿನ ಪ್ರಧಾನ ಕಸುಬು. ಇಲ್ಲಿನ ರೈತ ವರ್ಗ ದೇಶದ 140 ಕೋಟಿಗಳಷ್ಟು ನಾಗರಿಕರಿಗೆ ಆಹಾರ ಉಣಬಡಿಸಿ ಹೊಟ್ಟೆ ತುಂಬಿಸುತ್ತಿದೆ.
ಕೃಷಿ ಬದಲಿಸಿದ ತಂತ್ರಜ್ಞಾನ:
ಕೃಷಿ ಇತರ ಕೆಲಸಗಳಿಂತಲೂ ಬಹು ಭಿನ್ನ. ತಂತ್ರಜ್ಞಾನ ಬೆಳೆದಂತೆ ಕೃಷಿಯ ಸ್ವರೂಪವೂ ಬದಲಾಗುತ್ತಿದೆ. ಆದರೆ, ರೈತ ಬವಣೆ ಮಾತ್ರ ಇನ್ನೂ ಉಳಿದಿದೆ. ದೇಶದ ಅನ್ನದಾತರು ನಿತ್ಯವೂ ನವನವೀನ ಬಗೆಯ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ.
ಆರಂಭದಲ್ಲಿ ಕೃಷಿಯು ಸ್ವಯಂ ಆಹಾರ ಉತ್ಪಾದನೆಯ ಉದ್ದೇಶ ಹೊಂದಿತ್ತು. ಹೆಚ್ಚುತ್ತಿರುವ ಜನಸಂಖ್ಯೆಯ ಫಲವಾಗಿ ಕೃಷಿ ಉದ್ದೇಶವು ವಹಿವಾಟಿಗೂ ವಿಸ್ತರಿಸಿತು. ತಂತ್ರಜ್ಞಾನದ ಬೆಳೆದಂತೆಲ್ಲ ಅದು ಉದ್ಯಮವಾಗಿ ಬದಲಾಗುತ್ತ ತ್ರಿಶಂಕು ಸ್ಥಿತಿಯ ಲಾಭ–ನಷ್ಟದ ನಾಗಾಲೋಟಕ್ಕೆ ಸಿಲುಕಿದೆ. ರೈತರ ಸಹವರ್ತಿಗಳಾಗಿದ್ದ ಎತ್ತುಗಳು ಕಣ್ಮರೆಯಾಗುತ್ತಿವೆ.
ಇದೆಲ್ಲರ ಪರಿಣಾಮವಾಗಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಅನಿವಾರ್ಯ ಎಂಬ ಸ್ಥಿತಿಗೆ ಅನ್ನದಾತರು ಸಿಲುಕಿದ್ದಾರೆ. ಒಂದೆಡೆ ಕೃಷಿ ಪರಿಕರ, ಬಿತ್ತನೆ ಬೀಜ, ರಸಗೊಬ್ಬರಗಳ ದರಗಳು ಏರುಗತಿಯಲ್ಲಿವೆ. ಮತ್ತೊಂದೆಡೆ ಕೃಷಿ ಉತ್ಪನ್ನಗಳನ್ನು ‘ಮಾರುಕಟ್ಟೆ’ಯ ತಕ್ಕಡಿಯಲ್ಲಿ ‘ಬಿಡಿಗಾಸಿ’ಗೆ ತೂಗುತ್ತಿವೆ. ಇದು ರೈತರ ಬವಣೆ ಹೆಚ್ಚಿಸಿದೆ. ಅನ್ನದಾತರ ಈ ಸಂಕಟವನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಬಣ್ಣಿಸಿದ್ದು ಹೀಗೆ: ‘ಎಲ್ಲವನ್ನೂ ಚಿಲ್ಲರೆ ಮಾರುಕಟ್ಟೆ ದರದಲ್ಲಿ ಕೊಳ್ಳುವ, ಎಲ್ಲವನ್ನೂ ಸಗಟು ದರದಲ್ಲಿ ಮಾರುವ ಹಾಗೂ ಇವೆರಡಕ್ಕೂ ಎರಡೂ ವಹಿವಾಟಿಗೂ ತೆರಿಗೆ ಪಾವತಿಸುವ ನಮ್ಮ ಆರ್ಥಿಕತೆಯಲ್ಲಿ ಏಕೈಕ ವ್ಯಕ್ತಿ ಅನ್ನದಾತ’.
ಮುಂದುವರಿದ ಸಮಸ್ಯೆ:
ತಾಂತ್ರಿಕ ನಾವೀನ್ಯತೆಯ ಹೊರತಾಗಿಯೂ ಕೃಷಿ ಕ್ಷೇತ್ರ ಸಮಸ್ಯೆಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಉತ್ತಿ–ಬಿತ್ತಿ ಬೆಳೆಯುವಾಗ ‘ಅತಿವೃಷ್ಟಿ’, ‘ಅನಾವೃಷ್ಟಿ’ ಕಾಡಿದರೆ, ಫಸಲು ಕೈಗೆ ಬಂದ ಬಳಿಕ ಮಾರುಕಟ್ಟೆಯಲ್ಲಿನ ದರಗಳ ಏರಿಳಿತ ರೈತ ನಾಡಿ ಮಿಡಿತ ಹೆಚ್ಚಿಸುತ್ತದೆ.
ಒಂದೆಡೆ ಅನ್ನದಾತರು ಬದುಕಿನ ಹೋರಾಟದಲ್ಲಿ ಹಲವು ಉಸಿರು ಚೆಲ್ಲುವುದೂ ನಿಂತಿಲ್ಲ; ಮತ್ತೊಂದೆಡೆ ಕಾದ ಕಾವಲಿಯಂಥ ನೆಲದ ಮೇಲೆ ‘ಮಳೆ’ ಅಪ್ಪಳಿಸಿದ ಬಳಿಕ ‘ಸಮೃದ್ಧ’ ಇಳುವರಿಯ ಕನಸಿನೊಂದಿಗೆ ಬೀಜ ಬಿತ್ತುವುದನ್ನೂ ರೈತರು ಬಿಟ್ಟಿಲ್ಲ.
ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ಪಾತಾಳ ಕಾಣುವ ದರ ಕುಸಿತದ ‘ಬರ ಸಿಡಿಲಿಗೆ’ ಅನ್ನದಾತ ಬೆಚ್ಚಿದಂತೆ ಕಂಡರೂ, ಥರಗುಟ್ಟುವ ಚಳಿಗೆ ನಡುಗಿದಂತೆ ತೋರಿದರೂ ಭೂಮಿ ಬಿಟ್ಟು ಮನೆ ಸೇರಲ್ಲ. ಕೋಟ್ಯಂತರ ದೇಶವಾಸಿಗಳಿಗೆ ನಿತ್ಯ ಅನ್ನ ಉಣಬಡಿಸುವುದನ್ನು ಬಿಟ್ಟಿಲ್ಲ. ಆತ ನಿತ್ಯ ನಮನಕ್ಕೆ ಅರ್ಹ. ನಮ್ಮೆಲ್ಲರ ತಟ್ಟೆಯ ಅನ್ನ ಬೆಳೆಯುವ ನೇಗಿಲಯೋಗಿಗೊಂದು ಸಲಾಂ.
ರೈತ ದಿನಾಚರಣೆ ಮಹತ್ವ
ಡಿಸೆಂಬರ್ 23ರ ದೇಶದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನ. ಅವರು ದೇಶದ ಅನ್ನದಾತರರಿಂದ ‘ಭಾರತೀಯ ರೈತರ ವೀರನಾಯಕ’ ಎಂಬ ವಿಶೇಷಣ ಪಡೆದಿದ್ದರು. ಅವರ ರೈತರ ಪರ ಕಾಳಜಿ ಅಸಾಮಾನ್ಯವಾದದ್ದು. 2001ರಿಂದ ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ಚೌಧರಿ ಚರಣಸಿಂಗ್ ಅವರು ಹುಟ್ಟಿದ ದಿನವನ್ನು ದೇಶದಲ್ಲಿ ರಾಷ್ಟ್ರೀಯ ರೈತರ ದಿನವಾಗಿ ಆಚರಿಸಲಾಗುತ್ತದೆ. ಸಮಾಜಕ್ಕೆ ರೈತರು ನೀಡಿದ ಅನನ್ಯ ಕೊಡುಗೆ ಸ್ಮರಿಸಲು ಹಾಗೂ ಅನ್ನದಾತರನ್ನು ಗೌರವಿಸುವ ಉದ್ದೇಶವನ್ನೂ ಈ ದಿನಾಚರಣೆ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.