ADVERTISEMENT

ಕಲಬುರಗಿ: ಜನೌಷಧಕ್ಕೆ ಹೆಚ್ಚಿದ ಬೇಡಿಕೆ, ಸುಧಾರಿಸದ ಪೂರೈಕೆ

ನಗರದಲ್ಲಿವೆ ಏಳು ಜನೌಷಧ ಕೇಂದ್ರ: ಮಾತ್ರೆಗಳಿಗಾಗಿ ಕೇಂದ್ರದಿಂದ ಕೇಂದ್ರಕ್ಕೆ ಅಲೆದಾಡುವ ಜನ

ಭೀಮಣ್ಣ ಬಾಲಯ್ಯ
Published 16 ಜುಲೈ 2023, 5:49 IST
Last Updated 16 ಜುಲೈ 2023, 5:49 IST
ಕಲಬುರಗಿ ನಗರದ ಜಗತ್‌ ವೃತ್ತದ ಬಳಿಯ ಜನೌಷಧ ಕೇಂದ್ರದಲ್ಲಿ ಗ್ರಾಹಕರೊಬ್ಬರು ಮಾತ್ರೆ ತೆಗೆದುಕೊಂಡರು
ಕಲಬುರಗಿ ನಗರದ ಜಗತ್‌ ವೃತ್ತದ ಬಳಿಯ ಜನೌಷಧ ಕೇಂದ್ರದಲ್ಲಿ ಗ್ರಾಹಕರೊಬ್ಬರು ಮಾತ್ರೆ ತೆಗೆದುಕೊಂಡರು   

ಕಲಬುರಗಿ: ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗಕ್ಕೆ ಸಂಬಂಧಿಸಿದ ಜನೌಷಧಕ್ಕೆ ಬೇಡಿಕೆ ಹೆಚ್ಚಿದರೂ ಪೂರೈಕೆ ವ್ಯವಸ್ಥೆ ಮಾತ್ರ ಇನ್ನೂ ಬದಲಾವಣೆಗೆ ತೆರೆದುಕೊಂಡಿಲ್ಲ!.

ಪ್ರಧಾನ ಮಂತ್ರಿ ಜನೌಷಧ ಯೋಜನೆ ಪ್ರಾರಂಭವಾದ ಸಂದರ್ಭದಲ್ಲಿ ನಗರದಲ್ಲಿ ಒಟ್ಟು ಎಂಟು ಜನೌಷಧ ಕೇಂದ್ರಗಳನ್ನು ತೆರೆಯಲಾಗಿತ್ತು. ಅಸಮರ್ಪಕ ಪೂರೈಕೆ ಹಾಗೂ ನಿರ್ವಹಣೆ ಕೊರತೆಯಿಂದ ಕೆಲವೇ ದಿನಗಳಲ್ಲಿ ಕೆಲ ಕೇಂದ್ರಗಳು ಬಾಗಿಲು ಮುಚ್ಚಿದವು. ಈಗ ಮತ್ತೆ ಆರಂಭವಾಗಿವೆ. ನಗರದಲ್ಲಿ ಸದ್ಯ ಏಳು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಜನೌಷಧದ ಪಟ್ಟಿಯಲ್ಲಿರುವ ಒಟ್ಟು 1,800 ಔಷಧಗಳಲ್ಲಿ ಸುಮಾರು 1,500 ಔಷಧಗಳನ್ನು ಈ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 250ಕ್ಕೂ ಹೆಚ್ಚು ವೈದ್ಯಕೀಯ ಉಪಕರಣಗಳೂ ಲಭ್ಯ ಇವೆ. ಬೇರೆ ಔಷಧ ಕೇಂದ್ರಗಳಿಗೆ ಹೋಲಿಸಿದರೆ ಇಲ್ಲಿ ಶೇ 80ರಷ್ಟು ಕಡಿಮೆ ಬೆಲೆಗೆ ಔಷಧ ಸಿಗುತ್ತದೆ. ಕೆಲ ಕೇಂದ್ರಗಳಲ್ಲಿ ಪ್ರತಿದಿನ ₹20 ಸಾವಿರದವರೆಗಿನ ಮೌಲ್ಯದ ಔ ಷಧ ಮಾರಾಟ ಮಾಡಲಾಗುತ್ತದೆ.

ADVERTISEMENT

ಈ ಕೇಂದ್ರಗಳಲ್ಲಿ ಒಂದು ಮಾತ್ರೆ ಬೆಲೆ ₹1 ಯಿಂದ ₹150ರವರೆಗೆ ಇದೆ. ನೋವು ನಿವಾರಕ ಮಾತ್ರೆಗಳನ್ನು ₹150ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಮಧುಮೇಹ ಕಾಯಿಲೆ ಮಾತ್ರೆ ₹3ಗೂ ಸಿಗುತ್ತದೆ.

ಕೋವಿಡ್ ಬಳಿಕ ಈ ಕೇಂದ್ರಗಳಲ್ಲಿ ದಿನದಿಂದ ದಿನಕ್ಕೆ ಔಷಧ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಕೇಂದ್ರಗಳ ಮಾಲೀಕರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗಕ್ಕೆ ಸಂಬಂಧಿಸಿದ ಮಾತ್ರೆಗಳು ಬೇಡಿಕೆಗೆ ತಕ್ಕಷ್ಟು ಸಿಗದ ಕಾರಣ ಜನರಿಗೆ ಕೇಂದ್ರದಿಂದ ಕೇಂದ್ರಕ್ಕೆ ಅಲೆದಾಡುವುದು ಇನ್ನೂ ತಪ್ಪಿಲ್ಲ.

ಯೋಜನೆ ಪ್ರಾರಂಭವಾದ ಸಂದರ್ಭಕ್ಕೆ ಹೋಲಿಸಿದರೆ ಕೇಂದ್ರಗಳ ಸಮಸ್ಯೆಗಳ ಸುರಳಿ ಈಗ ಸಣ್ಣದಾಗಿದೆ. ಆದರೆ, ಔಷಧ ಉಗ್ರಾಣ ನಿರ್ಮಿಸಬೇಕು ಎನ್ನುವ ಕೇಂದ್ರಗಳ ಮಾಲೀಕರ ಬೇಡಿಕೆ ಇನ್ನೂ ಈಡೇರಿಲ್ಲ. ಔಷಧ ಉಗ್ರಾಣ ತಮಿಳುನಾಡಿನ ಚೆನ್ನೈನಲ್ಲಿದೆ.

ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಿಂದ ಕೇಂದ್ರಗಳಿಗೆ ಔಷಧ ವಿತರಿಸಲಾಗುತ್ತದೆ. ಇಲ್ಲಿಂದ ಈ ನಗರಗಳು ದೂರದಲ್ಲಿರುವುದರಿಂದ ಜೌಷಧ, ಕೇಂದ್ರಗಳನ್ನು ತಲುಪಲು ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದು ಕೇಂದ್ರಗಳ ಮಾಲೀಕರ ಒತ್ತಾಯ.

ಆಸ್ಪತ್ರೆಗಳ ಬಳಿಯೂ ಕೇಂದ್ರ: ನಗರದ ಜಿಲ್ಲಾ ಆಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆ ಬಳಿ ಕೇಂದ್ರಗಳನ್ನು ತೆರೆಯಲಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಔಷಧಗಳನ್ನು ವೈದ್ಯರು ಹೊರಗಡೆ ತೆಗೆದುಕೊಳ್ಳಲು ತಿಳಿಸುತ್ತಾರೆ. ರೋಗಿಗಳ ಸಂಬಂಧಿಕರು ಈ ಕೇಂದ್ರಗಳಲ್ಲಿ ಔಷಧ ಕೊಂಡುಕೊಳ್ಳುತ್ತಾರೆ. ಇದರಿಂದ ಹಣ ಉಳಿಯುತ್ತದೆ. ಆದರೆ ಈ ಕೇಂದ್ರಗಳಲ್ಲಿಯೂ ಎಲ್ಲ ಔಷಧಗಳು ಸಿಗುವುದಿಲ್ಲ. ಅನಿವಾರ್ಯವಾಗಿ ಹೆಚ್ಚು ಹಣ ನೀಡಿ ಹೊರಗಡೆ ಖರೀದಿಸಬೇಕಾದ ಪರಿಸ್ಥಿತಿ ಇದೆ.

‘ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗಕ್ಕೆ ಸಂಬಂಧಿಸಿದ ಮಾತ್ರೆಗಳಿಗೆ ಬೇಡಿಕೆ ಇದೆ. ಆದರೆ ಪೂರೈಕೆ ಸಮರ್ಪಕವಾಗಿಲ್ಲ. ಏಜೆನ್ಸಿಯವರು ಬೇಡಿಕೆ ಸಲ್ಲಿಸಿದಷ್ಟೂ ಔಷಧ ಕೊಡುವುದಿಲ್ಲ. ಈ ಮಾತ್ರೆಗಳು ಬಂದ ಎರಡು–ಮೂರು ದಿನಗಳಲ್ಲಿಯೇ ಖಾಲಿಯಾಗುತ್ತದೆ’ ಎಂದು ಕೇಂದ್ರದ ಮಾಲೀಕರೊಬ್ಬರು ತಿಳಿಸಿದರು.

ಧರ್ಮರಾಜ್
ಭೀಮಾಬಾಯಿ
ಪ್ರತಿ ತಿಂಗಳು ತಾಯಿಗೆ ಔಷಧ ತೆಗೆದುಕೊಂಡು ಹೋಗುತ್ತೇನೆ. ಕೆಲವು ಮಾತ್ರೆಗಳು ಸಿಗುವುದಿಲ್ಲ. ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ತಂದರೆ ಅನುಕೂಲವಾಗುತ್ತದೆ
-ಧರ್ಮರಾಜ್ ಗ್ರಾಹಕ
ಜನೌಷಧ ಕೇಂದ್ರಗಳಿಂದ ಅನುಕೂಲವಾಗಿದೆ. ಮೊದಲು ತಿಂಗಳ ಔಷಧ ಖರ್ಚು ಹೆಚ್ಚಾಗುತ್ತಿತ್ತು. ಈಗ ಕಡಿಮೆಯಾಗಿದೆ. ಎಲ್ಲ ಔಷಧಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು
-ಭೀಮಾಬಾಯಿ ಗ್ರಾಹಕಿ
ಬೇಡಿಕೆಗೆ ತಕ್ಕಂತೆ ಜೌಷಧ ಪೂರೈಸುತ್ತಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿಯೂ ಮಾತ್ರೆಗಳು ಲಭ್ಯವಿರುವುದಿಲ್ಲ. ಆಗ ತಡವಾಗುತ್ತದೆ. ಬಂದ ತಕ್ಷಣ ಕೇಂದ್ರಗಳಿಗೆ ತಲುಪಿಸುತ್ತೇವೆ
ನಾಗರಾಜ ವ್ಯವಸ್ಥಾಪಕ ಜನೌಷಧ ಪೂರೈಕೆ ಏಜೆನ್ಸಿ ಹುಬ್ಬಳ್ಳಿ

ಸಿಗದ ‘ಸುವಿಧಾ’ ನ್ಯಾಪ್‌ಕಿನ್

ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳ ಮೂಲಕ ಜನರಿಗೆ ₹1ಗೆ ನ್ಯಾಪ್‌ಕಿನ್‌ ಒದಗಿಸಲು 2019ರಲ್ಲಿ ‘ಸುವಿಧಾ’ ಯೋಜನೆ ಜಾರಿ ಮಾಡಿದೆ. ಇದಕ್ಕೆ ಬೇಡಿಕೆ ಹೆಚ್ಚಿದರೂ ಸಾರಿಗೆ ವೆಚ್ಚ ಇದರ ಬೆಲೆಗಿಂತಲೂ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಏಜೆನ್ಸಿಗಳು ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಆದ್ದರಿಂದ ಕೇಂದ್ರಕ್ಕೆ ಪೂರೈಕೆ ಮಾಡಿದ ನ್ಯಾಪ್‌ಕಿನ್‌ ಕೆಲವೇ ದಿನಗಳಲ್ಲಿ ಖಾಲಿಯಾಗುತ್ತಿವೆ. ಜನ ಬರಿಗೈಯಲ್ಲಿ ವಾಪಸ್ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

₹165ಕ್ಕೆ ಇನ್ಸುಲಿನ್ ರಿಫಿಲ್

ಮಧುಮೇಹ ಇಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅದಕ್ಕಾಗಿ ಇನ್ಸುಲಿನ್‌ಗೆ ಬೇಡಿಕೆ ಹೆಚ್ಚಾಗಿದೆ. ಹೊರಗಡೆ ಇನ್ಸುಲಿನ್‌ ಅನ್ನು ₹900ರವರೆಗೂ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಕೇಂದ್ರಗಳಲ್ಲಿ ಇನ್ಸುಲಿನ್ ರಿಫಿಲ್ ಬೆಲೆ ₹165ರಿಂದ ಆರಂಭವಾಗುತ್ತದೆ. ಕಂಪನಿಗಳಿಂದ ಕಂಪನಿಗೆ ಈ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಇಲ್ಲಿ ಮೂರು ಮಾದರಿಯ ರಿಫಿಲ್ ಮಾರಾಟ ಮಾಡಲಾಗುತ್ತದೆ. ಬೈಫಾಸಿಕ್ ಐಸೊಫೇನ್ ₹165 ಇನ್ಸುಲಿನ್ ರೆಗ್ಯುಲರ್–ಆರ್ ₹170 ಹಾಗೂ ಗ್ಲಾರ್ಜಿನ್‌ ಇನ್ಸುಲಿನ್‌ ₹340 ಮಾರಾಟ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.