ಸೇಡಂ: ಪಟ್ಟಣದ ವಾಸವದತ್ತಾ (ಅಲ್ಟ್ರಾಟೆಕ್) ಸಿಮೆಂಟ್ ಕಂಪನಿ ಕಾಲೊನಿಯ ಕಾರ್ಮಿಕರೊಬ್ಬರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನೇ ಮರು ಬಳಕೆ ಮಾಡಿ ಅವುಗಳಲ್ಲಿಯೇ ಸಸಿ ಬೆಳೆಸುವ ಮೂಲಕ ಮೂರು ದಶಕಗಳಿಂದ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.
ವಾಸವದತ್ತ ಸಿಮೆಂಟ್ ಕಂಪನಿಯ ಬಾಯಿಲರ್ ಆಪರೇಟರ್ ಆಗಿರುವ ಶಿವರಾಜ ರಾಂಪೂರ, ನಿರುಪಯುಕ್ತ ಟೈರ್, ಅಡುಗೆ ಎಣ್ಣೆಯ ಖಾಲಿ ಡಬ್ಬ, ಪೇಂಟಿಂಗ್ ಡಬ್ಬ, ಸೈಕಲ್ ರಿಮ್, ಕುಡಿದ ನೀರಿನ ಬಾಟಲಿ, ನೀರಿನ ಖಾಲಿ ಕ್ಯಾನ್‌ಗಳನ್ನು ಮರು ಬಳಸಕೆ ಮಾಡಿ ಅದರಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಸದಾ ಧೂಳಿನಿಂದ ಕೂಡಿರುವ ಸಿಮೆಂಟ್ ಕಂಪನಿಯ ಕಾಲೊನಿಯಲ್ಲಿ ಸುವಾಸನೆ ಬೀರುವಂತಹ ಕಾರ್ಯ ಮಾಡುತ್ತಿದ್ದಾರೆ.
ಕಂಪನಿ ಕೆಲಸದ ಜೊತೆಗೆ ಬಿಡುವಿನ ಅವಧಿಯಲ್ಲಿ ಪರಿಸರ ಸಂರಕ್ಷಣೆ ಕೆಲಸ ಮಾಡುತ್ತಿದ್ದಾರೆ. ತರಕಾರಿ, ಅಲಂಕಾರಿಕ ಸಸಿಗಳು, ಹಣ್ಣಿನ ಗಿಡಗಳನ್ನು ನೆಟ್ಟು ಮನೆಯಂಗಳವನ್ನೇ ಉದ್ಯಾನವನ್ನಾಗಿಸಿದ್ದಾರೆ. ಅವರ ಮನೆ ಪ್ರವೇಶಿಸುತ್ತಿದ್ದಂತೆಯೇ ತಂಪಾದ ವಾತಾವರಣ ಸ್ವಾಗತಿಸುತ್ತದೆ.
ಪ್ಲಾಸ್ಟಿಕ್ ಡಬ್ಬದಲ್ಲಿ ಶಿವಲಿಂಗ, ಶಿವನ ಲೈಟಿಂಗ್ ಚಿತ್ರ, ಗಣೇಶ ಹೀಗೆ ಹತ್ತು ಹಲವು ಆಕೃತಿಗಳನ್ನು ತಯಾರಿಸಿದ್ದಾರೆ. ಅಲ್ಲದೆ ಪರಿಸರ ಕಾಳಜಿ ಕುರಿತು ಹಲವು ವೇದಿಕೆಗಳಲ್ಲಿ ಕಲಾವಿದರಾಗಿ ಜಾಗೃತಿ ಮೂಡಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಕನ್ನಡದ ಝೇಂಕಾರಕ್ಕೆ ಪ್ರತಿ ವರ್ಷ ಸಾಕ್ಷಿಯಾಗುತ್ತಿದ್ದಾರೆ.
ಮನೆಯಲ್ಲಿನ ಕಸ, ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ, ಹಲವು ತಿಂಗಳಾದ ನಂತರ ಅದನ್ನೇ ಗೊಬ್ಬರ ಮಾಡಿ, ಆ ಗೊಬ್ಬರ ಹಾಕಿ ಗಿಡಗಳನ್ನು ಪೋಷಿಸುತ್ತಿದ್ದಾರೆ. ಶಿವರಾಜ ಅವರು ಮಾಡುವ ಕೆಲಸಕ್ಕೆ ಪತ್ನಿ ಅನಸೂಯಾ, ಪುತ್ರಿ ವರಲಕ್ಷ್ಮೀ ಸಹ ಕೈಜೋಡಿಸುತ್ತಿದ್ದಾರೆ.
ಕಾಲೊನಿ ಸೇರಿದಂತೆ ಸ್ನೇಹಿತರು ಮದುವೆ ವಾರ್ಷಿಕೋತ್ಸವಕ್ಕೆ, ಜನ್ಮದಿನಕ್ಕೆ ಹಾಗೂ ಕಾರ್ಯಕ್ರಮಗಳಿಗೆ ಇವರ ಬಳಿ ಸಸಿಗಳನ್ನು ಪಡೆದುಕೊಳ್ಳುತ್ತಾರೆ. ಮೂರು ದಶಕಗಳ ಕಾಲ ಕಾಲೊನಿಯ ಜನರಿಗೆ ಚಿರಪರಿತರಾಗಿರುವ ಶಿವರಾಜ ರಾಂಪೂರ ಅವರ ಪರಿಸರ ಕಾಳಜಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಿರುಪಯಕ್ತ ತ್ಯಾಜ್ಯವಸ್ತುಗಳ ಮರುಬಳಕೆ | ಕಸವನ್ನೇ ರಸವನ್ನಾಗಿಸಿದ ರಾಂಪೂರ ಕುಟುಂಬ |ಕಲಾವಿದನಾಗಿ ನಟನೆ, ವೇದಿಕೆಗಳಲ್ಲಿ ಪರಿಸರ ಜಾಗೃತಿ
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಸಿ ನೆಟ್ಟು ಮನೆಯಂಗಳವನ್ನೇ ಕಿರು ತೋಟವನ್ನಾಗಿಸಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಾಲ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯ ಹಿರಿದುನಾಗಕುಮಾರ ಎಳ್ಳಿ ಪುರಸಭೆ ಸದಸ್ಯ
ನಿರುಪಯುಕ್ತ ಪ್ಲಾಸ್ಟಿಕ್ ಪುನರ್ ಬಳಕೆ ಮಾಡಿ ಸಸಿಗಳನ್ನು ಬೆಳೆಸುತ್ತಿರುವ ಕಾರ್ಮಿಕ ಶಿವರಾಜ ರಾಂಪೂರ ಅವರ ಕಾರ್ಯ ಶ್ಲಾಘನೀಯ ಮತ್ತು ಮಾದರಿಯಾಗಿದೆಶ್ರೀಯಾಂಕ ಧನಶ್ರೀ ತಹಶೀಲ್ದಾರ್ ಸೇಡಂ
ಥರ್ಮಕೋಲ್‌ನಲ್ಲಿ ಹಂಪಿ ಕಲ್ಲಿನ ರಥ
ಐತಿಹಾಸಿಕ ಹಂಪಿ ಕಲ್ಲಿನ ರಥವನ್ನು ಥರ್ಮಕೋಲ್‌ನಿಂದ ಮಾಡಿದ್ದು ಇದಕ್ಕೆ ಸುಮಾರು ₹50 ಸಾವಿರ ಖರ್ಚು ಮಾಡಿ ಮೂರು ತಿಂಗಳಲ್ಲಿ ತಯಾರಿಸಿದ್ದಾರೆ. ಸೇಡಂ ತಾಲ್ಲೂಕಿನ ಬೀರನಹಳ್ಳಿ ಸಮೀಪದ ಪ್ರಕೃತಿ ನಗರದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಹಂಪಿ ಕಲ್ಲಿನ ರಥ ಪ್ರದರ್ಶನಕ್ಕೆ ಇಡಲಾಗಿತ್ತು. ಇದು ಆಕರ್ಷಣೀಯ ಕೇಂದ್ರವಾಗಿ ಉತ್ಸವದಲ್ಲಿ ಗಮನ ಸೆಳೆದಿತ್ತು. ಜೊತೆಗೆ ಥರ್ಮಕೋಲ್‌ನಿಂದ ಮೈಸೂರು ಅರಮನೆ ಕೊಡಲಿ ಗಣೇಶ ಪ್ರತಿಷ್ಠಾಪನೆ ಸ್ವಾಗತ ಕಮಾನು ರಾಕೆಟ್ ವೀಣೆ ಸೇರಿದಂತೆ ಇನ್ನಿತರರ ಆಕೃತಿಗಳನ್ನು ತಯಾರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.