ADVERTISEMENT

‘ಪೊಲೀಸ್‌ ಕರ್ತವ್ಯ ಕೂಟ’ ಸಂಪನ್ನ: ‘ಕಲಬುರಗಿ ಜಿಲ್ಲೆ’ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:32 IST
Last Updated 8 ನವೆಂಬರ್ 2025, 5:32 IST
ಕಲಬುರಗಿಯ ಎಸ್‌ಪಿ ಕಚೇರಿಯ ಸಭಾಂಗಣದಲ್ಲಿ ಈಶಾನ್ಯ ವಲಯಮಟ್ಟದ ಪೊಲೀಸ್‌ ಕರ್ತವ್ಯ ಕೂಟದ ಚಾಂಪಿಯನ್‌ ಆಗಿ ಹೊರಹೊಮ್ಮಿದ ಕಲಬುರಗಿ ಜಿಲ್ಲಾ ಪೊಲೀಸ್‌ ಸ್ಪರ್ಧಿಗಳಿಗೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ‘ಚಾಂಪಿಯನ್‌ ಟ್ರೋಫಿ’ ವಿತರಿಸಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಎಸ್‌ಪಿ ಕಚೇರಿಯ ಸಭಾಂಗಣದಲ್ಲಿ ಈಶಾನ್ಯ ವಲಯಮಟ್ಟದ ಪೊಲೀಸ್‌ ಕರ್ತವ್ಯ ಕೂಟದ ಚಾಂಪಿಯನ್‌ ಆಗಿ ಹೊರಹೊಮ್ಮಿದ ಕಲಬುರಗಿ ಜಿಲ್ಲಾ ಪೊಲೀಸ್‌ ಸ್ಪರ್ಧಿಗಳಿಗೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ‘ಚಾಂಪಿಯನ್‌ ಟ್ರೋಫಿ’ ವಿತರಿಸಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಶ್ವಾನ ಸ್ಪರ್ಧೆ’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ತೋರಿದ ಕಲಬುರಗಿ ಜಿಲ್ಲೆಯು ಶುಕ್ರವಾರ ತೆರೆಕಂಡ ಈಶಾನ್ಯ ವಲಯ ಮಟ್ಟದ ‘ಪೊಲೀಸ್ ಕರ್ತವ್ಯ ಕೂಟ’ದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಕಲಬುರಗಿ ಜಿಲ್ಲೆಯು ‘ಕರ್ತವ್ಯ ಕೂಟ’ದ ಒಟ್ಟು 11 ‘ಪ್ರಥಮ’ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. 

ಎಂಟು ‘ಪ್ರಥಮ’ ಪ್ರಶಸ್ತಿಗಳೊಂದಿಗೆ ಬೀದರ್‌ ಜಿಲ್ಲೆಯು 2ನೇ ಸ್ಥಾನ, ಐದು ‘ಪ್ರಥಮ’ ಪ್ರಶಸ್ತಿಯೊಂದಿಗೆ ಕಲಬುರಗಿ ಕಮಿಷನರೇಟ್‌ ಮೂರನೇ ಹಾಗೂ ಮೂರು ‘ಪ್ರಥಮ’ ಪ್ರಶಸ್ತಿಯೊಂದಿಗೆ 4ನೇ ಸ್ಥಾನ ಗಳಿಸಿತು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಎರಡು ದಿನಗಳ ಕಾಲ ‘ತನಿಖೆಗೆ ವೈಜ್ಞಾನಿಕ ನೆರವು’ ವಿಭಾಗದಡಿ ಆರು ಸ್ಪರ್ಧೆಗಳು, ‘ಕಂಪ್ಯೂಟರ್‌ ಜಾಗೃತಿ’ಯಡಿ ಮೂರು ಸ್ಪರ್ಧೆಗಳು, ‘ವಿಧ್ವಂಸಕ ತಡೆ ತಪಾಸಣೆ’ ವಿಭಾಗದಡಿ ಮೂರು ಸ್ಪರ್ಧೆಗಳು, ‘ಪೊಲೀಸ್‌ ಶ್ವಾನ’ ವಿಭಾಗದಡಿ ಮೂರು ಸ್ಪರ್ಧೆಗಳು, ‘ಪೊಲೀಸ್‌ ಫೋಟೊಗ್ರಫಿ’ ಸ್ಪರ್ಧೆ, ‘ಪೊಲೀಸ್‌ ವಿಡಿಯೊಗ್ರಫಿ’ ಸ್ಪರ್ಧೆಗಳು ನಡೆದವು.

ADVERTISEMENT

ಕರ್ತವ್ಯ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಅಧಿಕಾರಿಗಳು–ಸಿಬ್ಬಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಟ್ರೋಫಿ, ಚಿನ್ನ, ರಜತ ಹಾಗೂ ಕಂಚಿನ ಪದಕ ವಿತರಿಸಿದರು.

ಬಳಿಕ ಮಾತನಾಡಿದ ಅಡ್ಡೂರು ಶ್ರೀನಿವಾಸುಲು, ‘ಕರ್ತವ್ಯ ಕೂಟವು ನಮ್ಮಲ್ಲಿರುವ ಕೌಶಲ ಪ್ರದರ್ಶನ ಹಾಗೂ ಕಲಿಕೆಗೆ ಉತ್ತಮ ವೇದಿಕೆಯಾಗಿದೆ. ಪೊಲೀಸರು ಕೌಶಲಗಳನ್ನು ಹೆಚ್ಚಿಸಿಕೊಂಡಂತೆಲ್ಲ ಪೊಲೀಸಿಂಗ್ ಗುಣಮಟ್ಟ, ತನಿಖಾಯಲ್ಲಿ ಪ್ರಗತಿ, ಶಿಕ್ಷೆ ವಿಧಿಸುವ ಪ್ರಮಾಣವೂ ಹೆಚ್ಚಾಗುತ್ತದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು–ಸಿಬ್ಬಂದಿ ವಿಶೇಷ ಕೌಶಲಗಳನ್ನು ರೂಢಿಸಿಕೊಳ್ಳಲು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ ಮಾತನಾಡಿ, ‘ಕರ್ತವ್ಯ ಕೂಟದಲ್ಲಿ ಬೀದರ್‌ ಜಿಲ್ಲೆಯ ಸವಾಲು ಮೀರಿ ಕಲಬುರಗಿ ಜಿಲ್ಲಾ ಸ್ಪರ್ಧಿಗಳು ಅಮೋಘ ಪ್ರದರ್ಶನ ತೋರಿ ಚಾಂಪಿಯನ್‌ ಆಗಿರುವುದು ಖುಷಿ ತಂದಿದೆ. ಅಧಿಕಾರಿಗಳು–ಸಿಬ್ಬಂದಿ ತಂತ್ರಜ್ಞಾನ ಅರಿಯಬೇಕು, ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದರು.

ಜಿಮ್ಮಿಗೆ ‘ಬೆಸ್ಟ್‌ ಡಾಗ್‌’ ಗರಿ

ಕರ್ತವ್ಯ ಕೂಟದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್‌ ಇಲಾಖೆಯ ಶ್ವಾನ ‘ಜಿಮ್ಮಿ’ ಅಮೋಘ ಪ್ರದರ್ಶನ ತೋರಿ ‘ಬೆಸ್ಟ್‌ ಡಾಗ್‌’ ಗರಿ ಮುಡಿಗೇರಿಸಿಕೊಂಡಿತು. ಸ್ಫೋಟಕ ಪತ್ತೆ ಸ್ಪರ್ಧೆಯಲ್ಲಿ ಕಲಬುರಗಿ ಡಿಎಆರ್‌ ಶಾನ್ವ ‘ರಾಣಿ’ ಮೊದಲ ಸ್ಥಾನ ಪಡೆಯಿತು. ಬೀದರ್‌ನ ‘ಬಾದಷಾ’ ದ್ವಿತೀಯ ಸ್ಥಾನ ಹಾಗೂ ಕಲಬುರಗಿಯ ‘ರಿಂಕಿ’ 3ನೇ ಸ್ಥಾನ ಪಡೆಯಿತು. ‍‘ಟ್ರ್ಯಾಕರ್‌’ ಸ್ಪರ್ಧೆಯಲ್ಲಿ ಬೀದರ್‌ನ ‘ದೀಪಾ’ ಪ್ರಥಮ ನಾರ್ಕೊಟಿಕ್ಸ್‌ ಸ್ಪರ್ಧೆಯಲ್ಲಿ ಕಲಬುರಗಿ ಜಿಮ್ಮಿ ಮೊದಲ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.