
ಕಲಬುರಗಿ: ‘ಈಡಿಗ, ಬಿಲ್ಲವ, ನಾಮಧಾರಿ, ಧೀವರು, ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿರುವ ಸಮಾಜದ 18 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6ರಂದು ಚಿತ್ತಾಪುರ ತಾಲ್ಲೂಕಿನ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಗೊಳ್ಳಲಿದೆ’ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಮಾಧ್ಯಮ ಸಂಚಾಲಕ ಸದಾನಂದ ಪೆರ್ಲ ಹೇಳಿದರು.
‘ಅಂದು ಬೆಳಿಗ್ಗೆ 9.30ಕ್ಕೆ ಶಕ್ತಿಪೀಠದಲ್ಲಿ ಪಾದಯಾತ್ರೆಗೆ ಅತಿ ಹಿಂದುಳಿದ ಮಠಾಧೀಶರು ಚಾಲನೆ ನೀಡುವರು. ಅಲ್ಲಿಂದ 9 ಕಿ.ಮೀ ಕ್ರಮಿಸಿ ಚಿತ್ತಾಪುರ ತಲುಪುವುದು. ಅಲ್ಲಿ ಬಹಿರಂಗ ಸಭೆ ನಡೆಯಲಿದೆ’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಬಹಿರಂಗ ಸಭೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಸ್.ರಾಮಪ್ಪ ಸಾನ್ನಿಧ್ಯ ವಹಿಸುವರು. ಚಿತ್ರದುರ್ಗದ ಬಸವನಾಗಿದೇವ ಶರಣ, ರಾಮಪುರದ ಭಗೀರಥಾನಂದಪುರಿ ಸ್ವಾಮೀಜಿ, ಸುಲೆಪೇಟೆಯ ದೊಡ್ಡೇಂದ್ರ ಸ್ವಾಮೀಜಿ, ಶಹಾಬಾದ್‌ನ ಹಡಪದ ಅಪ್ಪಣ್ಣ ವೀರದೇವರು, ಬನಹಟ್ಟಿಯ ಮಹಾಂತದೇವರು ಪಾಲ್ಗೊಳ್ಳುವರು. ಸಮಾಜದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು’ ಎಂದು ವಿವರಿಸಿದರು.
‘ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ನೇತೃತ್ವ ವಹಿಸುವರು. ನಿತ್ಯ 20 ಕಿ.ಮೀನಂತೆ 41 ದಿನಗಳಲ್ಲಿ ಪಾದಯಾತ್ರೆಯು 700 ಕಿ.ಮೀ ಕ್ರಮಿಸುವ ಗುರಿ ಹೊಂದಿದೆ’ ಎಂದರು.
‘ಪಾದಯಾತ್ರೆಯು ಕರದಾಳದಿಂದ ಚಿತ್ತಾಪುರ, ವಾಡಿ, ಶಹಾಬಾದ್, ಜೇವರ್ಗಿ, ಶಹಾಪುರ, ಸುರಪುರ, ಲಿಂಗಸುಗೂರು, ತಾವರಗೆರೆ, ಕುಷ್ಟಗಿ, ಕೊಪ್ಪಳ, ಗಂಗಾವತಿ, ಹೊಸಪೇಟೆ, ಚಿತ್ರದುರ್ಗದ ಮೂಲಕ ಬೆಂಗಳೂರು ತಲುಪಲಿದೆ. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ತನಕ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕುಪೇಂದ್ರ ಗುತ್ತೇದಾರ, ವೆಂಕಟೇಶ ಕಡೇಚೂರ, ಮಹೇಶ ಗುತ್ತೇದಾರ ಹೊಳಕುಂದಾ, ರಾಜೇಶ ಗುತ್ತೇದಾರ, ಬಿ.ಎಂ.ರಾವೂರ, ಮಲ್ಲಿಕಾರ್ಜುನ ಕುಕ್ಕಂದಿ, ವೆಂಕಟೇಶ ಗುಡ್ಡಾನೂರ ಸೇರಿದಂತೆ ಹಲವರಿದ್ದರು.
ಪ್ರಮುಖ ಬೇಡಿಕೆಗಳು
*ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹500 ಕೋಟಿ ಬಿಡುಗಡೆ ಮಾಡಬೇಕು
*ಕುಲಕಸುಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಈಡಿಗರಿಗೆ 5 ಎಕರೆ ಜಮೀನು ನೀಡಬೇಕು
*ಸಮಾಜವನ್ನು ಈಗಿರುವ ಎಸ್ಟಿ ಪಟ್ಟಿಗೆ ಸೇರಿಸಬೇಕು
*ಬೆಂಗಳೂರಿನ ವಿಧಾನಸೌಧದ ಎದುರು ನಾರಾಯಣಗುರುಗಳ ಪ್ರತಿಮೆ ಪ್ರತಿಷ್ಠಾಪಿಸಬೇಕು
*ಸಮುದಾಯದ ಟ್ರಸ್ಟ್‌ವೊಂದಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.