ADVERTISEMENT

ಸೇಡಂ; ತರಕಾರಿ, ದಿನಸಿ ದುಬಾರಿ- ಆಕ್ರೋಶ

ಮಾರುಕಟ್ಟೆಗಳಲ್ಲಿ ಕಾಣದ ಸುರಕ್ಷಿತ ಅಂತರ

​ಪ್ರಜಾವಾಣಿ ವಾರ್ತೆ
Published 24 ಮೇ 2021, 3:07 IST
Last Updated 24 ಮೇ 2021, 3:07 IST
ಸೇಡಂನ ಮಾರುಕಟ್ಟೆಯಲ್ಲಿ ಸಾರ್ವಜನಿಕರು ದೈಹಿತ ಅಂತರ ಮರೆತು ತರಕಾರಿಯನ್ನು ಮುಗಿಬಿದ್ದು ಖರೀದಿಸುತ್ತಿರುವುದು
ಸೇಡಂನ ಮಾರುಕಟ್ಟೆಯಲ್ಲಿ ಸಾರ್ವಜನಿಕರು ದೈಹಿತ ಅಂತರ ಮರೆತು ತರಕಾರಿಯನ್ನು ಮುಗಿಬಿದ್ದು ಖರೀದಿಸುತ್ತಿರುವುದು   

ಸೇಡಂ: ಸಂಪೂರ್ಣ ಲಾಕ್‌ಡೌನ್ ಶನಿವಾರ ಮುಕ್ತಾಯವಾಗಿದ್ದರಿಂದ ಭಾನುವಾರ ಬೆಳಿಗ್ಗೆ ಜನರು ತರಕಾರಿ ಖರೀದಿಗೆ ಮಾರುಕಟ್ಟೆಯಲ್ಲಿ ಮುಗಿಬಿದ್ದರು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ವ್ಯಾಪಾರಿಗಳು ತರಕಾರಿ ಮತ್ತು ದಿನಸಿ ಬೆಲೆ ಹೆಚ್ಚಿಗೆ ಮಾಡಿ ಮಾರಾಟ ಮಾಡುತ್ತಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಮೂರು ದಿನಗಳ ಕಾಲ ಮಾರುಟ್ಟೆ ಸಂಪೂರ್ಣ ಬಂದ್ ಆಗಿದ್ದರಿಂದ ಹೇಗಿದ್ದರೂ ಜನ ಖರೀದಿ ಮಾಡುತ್ತಾರೆ ಎಂದು ಕಡಿಮೆ ಇರುವ ತರಕಾರಿ ದರವನ್ನು ವ್ಯಾಪಾರಿಗಳು ಹೆಚ್ಚಿಸಿದ್ದಾರೆ ಎಂದು ಜನರು ದೂರಿದರು. ₹10ಗೆ ಕೆ.ಜಿ ಇದ್ದ ಟೊಮೆಟೊ ದರವನ್ನು ₹30ಕ್ಕೆ ಹೆಚ್ಚಿಸಲಾಗಿತ್ತು. ಮೆಣಸಿನಕಾಯಿ ₹40 ರಿಂದ ₹60 , ಚವಳಿಕಾಯಿ ₹40 ರಿಂದ ₹60, ಸೌತೆಕಾಯಿ ₹30 ರಿಂದ ₹50, ಹೀರೆಕಾಯಿ ₹60 ರಿಂದ ₹80, ಬದನೆಕಾಯಿ ₹40 ರಿಂದ 60 ಹೀಗೆ ವಿವಿಧ ತರಕಾರಿ ದರಗಳನ್ನು ಏರಿಸಿರುವುದು ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸಿತು.

ಮೊದಲು ಪ್ರತಿ ₹10ಕ್ಕೆ 3 ಸೂಡು ಪಾಲಕ್, ಸಬ್ಬಸಗಿ, ಮೆಂತ್ಯೆ ಸಿಗುತ್ತಿತ್ತು. ಆದರೆ ಅವುಗಳ ಬೆಲೆ ಭಾನುವಾರ ₹20 ರಿಂದ 30ಕ್ಕೆ ಹೆಚ್ಚಿಸಲಾಗಿತ್ತು ಎಂದು ಮುಖಂಡ ಶರಣಪ್ಪ ತಿಳಿಸಿದರು.

ADVERTISEMENT

‘ಲಾಕ್‌ಡೌನ್‌ನಿಂದಾಗಿ ನಾವು ಈಗಾಗಲೇ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ಮೊದಲು ₹100ಯಲ್ಲಿ ಅಗತ್ಯ ತರಕಾರಿಗಳನ್ನು ಖರೀದಿಸುತ್ತಿದ್ದೇವು. ಆದರೆ ಭಾನುವಾರ ₹200 ಖರ್ಚಾದರೂ ಸಹ ಚೀಲ ತುಂಬಲಿಲ್ಲ. ನಿರೀಕ್ಷಿತ ತರಕಾರಿ ಖರೀದಿಸಲು ಸಾಧ್ಯವಾಗಲಿಲ್ಲ. ಕೋವಿಡ್ ಸಂಕಷ್ಟ ಕಾಲದಲ್ಲಿ ಈ ರೀತಿ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ಪಾಡೇನು ಎಂದು ಸ್ಥಳೀಯರಾದ ಮಲ್ಲಿಕಾರ್ಜುನ ಪ್ರಶ್ನಿಸಿದರು.

‘ಮಾರುಕಟ್ಟೆಯಲ್ಲಿ ನಮಗೂ ಸಹ ಸರಿಯಾಗಿ ತರಕಾರಿ ಸಿಗುತ್ತಿಲ್ಲ. ವಾಹನದವರು ಬಾಡಿಗೆ ಹೆಚ್ಚಿಸಿದ್ದಾರೆ. ಇದರಿಂದಾಗಿ ತರಕಾರಿ ಬೆಲೆ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಇಂದಿರಮ್ಮ ತಿಳಿಸಿದರು.

‘3 ದಿನ ಬಂದ್ ಇದ್ದರಿಂದ ಮಾರುಕಟ್ಟೆಯಲ್ಲಿ ತರಕಾರಿನೇ ಇಲ್ಲ. ನಮಗೆ ಖರೀದಿ ಎಷ್ಟು ಸಿಕ್ಕಿದೆಯೋ ಅಷ್ಟೇ ನಾವು ಮಾರುತ್ತಿದ್ದೇವೆ. ತರಕಾರಿ ತರಲು ಸಹ ವಾಹನ ಮಾಲೀಕರು ದುಬಾರಿ ಬಾಡಿಗೆ ಕೇಳ್ತಾ ಇದ್ದಾರೆ. ಯಾರೂ ಬರ್ತಾ ಇಲ್ಲ. ಇವೆಲ್ಲವೂ ಸಹ ನಮಗೆ ಹೊಣೆಯಾಗುತ್ತಿದೆ. ನಾವಾದ್ರೂ ಏನ್ ಮಾಡೋಣ’ ಎಂದು ತರಕಾರಿ ವ್ಯಾಪಾರಿಗಳಾದ ಮಹ್ಮದ ಇಸ್ಮಾಯಿಲ್ ಹಾಗೂ ಇಂದಿರಮ್ಮ ಬೇಸರ ವ್ಯಕ್ತಪಡಿಸಿದರು.

***

ಕೆಲವು ದಿನಸಿ ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅಧಿಕಾರಿಗಳ ತಂಡ ಈ ಕುರಿತು ಪರಿಶೀಲಿಸಲಿದೆ

-ಸತೀಶ ಗುಡ್ಡೆ, ಮುಖ್ಯಾಧಿಕಾರಿ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.