ADVERTISEMENT

ವೀರಶೈವ- ಮುಸ್ಲಿಂ ಮುಖಂಡರ ನಡೆಗೆ ಪ್ರಿಯಾಂಕ್ ಮೆಚ್ಚುಗೆ

ಬಸವೇಶ್ವರ ಮೂರ್ತಿಗೆ ಅವಮಾನ ಘಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 11:45 IST
Last Updated 25 ಜೂನ್ 2022, 11:45 IST
ಪ್ರಿಯಾಂಕ್ ಎಂ. ಖರ್ಗೆ
ಪ್ರಿಯಾಂಕ್ ಎಂ. ಖರ್ಗೆ   

ಚಿತ್ತಾಪುರ: ‘ಪಟ್ಟಣದಲ್ಲಿನ ಬಸವೇಶ್ವರ ಮೂರ್ತಿಗೆ ಅವಮಾನಿಸಿರುವ ಘಟನೆಯಿಂದಾಗಿ ಉದ್ಭವಿಸಿದ್ದ ಸಮಸ್ಯೆಯನ್ನು ಸುಲಲಿತವಾಗಿ ಬಗೆಹರಿಸಿರುವ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಮುಸ್ಲಿಂ ಮುಖಂಡರು, ಸಮಾಜದ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಉತ್ತಮ ನಡೆ ಅನುಸರಿಸಿದ್ದಾರೆ’ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಎಂ. ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಘಟನೆಗಳು ನಡೆಯಬಾರದು. ದುರ್ಘಟನೆಯನ್ನು ಪಕ್ಷ ಹಾಗೂ ನಾನು ಖಂಡಿಸಿದ್ದೇನೆ. ಆರೋಪಿಯನ್ನು ಕೂಡಲೇ ಬಂಧಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಕುರಿತು ವೀರಶೈವ ಹಾಗೂ ಅಲ್ಪಸಂಖ್ಯಾತರ ಮುಖಂಡರು ಪ್ರಬುದ್ಧತೆ ಮೆರೆದಿದ್ದಾರೆ. ಘಟನೆಯು ಯಾವುದೇ ಒಂದು ಕೋಮಿಗೆ, ಸಮಾಜಕ್ಕೆ ಅಂಟಿಕೊಳ್ಳದಂತೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದು ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಸಮಾಜದಲ್ಲಿನ ಭಾತೃತ್ವಕ್ಕೆ ಶ್ರೇಷ್ಠ ನಿದರ್ಶನ’ ಎಂದು ಹೇಳಿದರು.

‘ಘಟನೆಯ ಪರಿಸ್ಥಿತಿಯ ಲಾಭ ಪಡೆಯಲು ಕೆಲವರು ಸಮಾಜದಲ್ಲಿ ಅಶಾಂತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅವರಿಗೆ ಬಸವಣ್ಣನವರ ಬಗ್ಗೆ ನಿಜವಾದ ಪ್ರೀತಿ ಇದ್ದಿದ್ದರೆ, ಪಠ್ಯಪುಸ್ತಕದಲ್ಲಿ ಬಸವಣ್ಣನವರಿಗೆ ಅವಹೇಳನ ಮಾಡಿದ್ದಾಗ ಏಕೆ ಸುಮ್ಮನಿದ್ದರು’ ಎಂದು ಪ್ರಶ್ನಿಸಿದರು.

ADVERTISEMENT

‘ವಾಡಿಯಲ್ಲಿ ವೈಯಕ್ತಿಕ ವಿಚಾರಕ್ಕೆ ನಡೆದ ಕೊಲೆಯನ್ನು ಸಮಾಜಕ್ಕೆ ಸಂಬಂಧ ಕಲ್ಪಿಸಿ ರಾಜಕೀಯ ಮಾಡಲು ಮುಂದಾದವರು ಈಗ ಬಸವೇಶ್ವರ ಮೂರ್ತಿಗೆ ಆಗಿರುವ ಅವಮಾನಕ್ಕೆ ಅದೇ ರೀತಿ ಸಂಬಂಧ ಕಲ್ಪಿಸಲು ಮುಂದಾಗಿದ್ದಾರೆ. ವಾಡಿ ಕೊಲೆ ಘಟನೆಗೆ ತೋರಿದ ಪ್ರೀತಿ, ಚಾಮನೂರಿನಲ್ಲಿ ಆಗಿರುವ ಕೊಲೆ ಘಟನೆಗೆ ಏಕೆ ತೋರಿಸಲಿಲ್ಲ. ಸರ್ಕಾರದಿಂದ ಪರಿಹಾರ ಕೊಡಿಸಲಿಲ್ಲ ಯಾಕೆ? ಸತ್ಯ ತಿಳಿಯದೆ ರಾಜಕೀಯ ಮಾಡುವ, ಸಮಾಜ ಒಡೆಯುವ, ವಿಷ ಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡುವುದು ನಡೆಯಲಿ. ಅಭಿವೃದ್ಧಿ ಕುರಿತು ಚರ್ಚೆಗಳಾಗಲಿ’ ಎಂದು ಅವರು ಸಲಹೆ ನೀಡಿದರು.

‘ಇಂದು ಕೆಟ್ಟದ್ದನ್ನು ಬಿತ್ತುವ ನಾವು ಮುಂದೆ ಇರುವುದಿಲ್ಲ. ಮುಂದಿನ ಪೀಳಿಗೆ ಅದರ ಕೆಟ್ಟ ಫಲ ಅನುಭವಿಸಬೇಕಾಗುತ್ತದೆ. ಶಾಂತಿಯುತ ವಾತಾವರಣ ಕೆಡಿಸುವ ಕೆಲಸ ಮಾಡಬೇಡಿ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನಕ್ಕೆ ಯಾರೂ ಕೈಹಾಕಬಾರದು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿ.ಪಂ.ಮಾಜಿ ಸದಸ್ಯ ಶಿವಾನಂದ ಪಾಟೀಲ್, ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್ ಹಾಜರಿದ್ದರು.

*

ವಾಡಿಯಲ್ಲಿ ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆಗೆ ಅತ್ಯಂತ ಪ್ರೀತಿ ತೋರಿ ರಾಜಕೀಯ ಮಾಡಲು ಮುಂದಾಗಿದ್ದವರು ಮೃತ ವ್ಯಕ್ತಿಗೆ ಸರ್ಕಾರದಿಂದ ಪರಿಹಾರ ಏಕೆ ಕೊಡಿಸಲಿಲ್ಲ?
ಪ್ರಿಯಾಂಕ್ ಎಂ. ಖರ್ಗೆ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.