ADVERTISEMENT

ಹರ್ಷ ಕೊಲೆ: ₹ 25 ಲಕ್ಷ ಪರಿಹಾರವೇಕೆ: ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 3:16 IST
Last Updated 10 ಮಾರ್ಚ್ 2022, 3:16 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ಇತ್ತೀಚೆಗೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ‌ ಕುಟುಂಬಕ್ಕೆ ಸರ್ಕಾರ ₹ 25 ಲಕ್ಷ ಪರಿಹಾರ ನೀಡಿರುವುದರ ಹಿಂದಿನ ಅಜೆಂಡಾ ಏನು ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಹತ್ಯೆಯಾದ ಯುವಕನ ವಿರುದ್ದ ಹಲವಾರು ಗಂಭೀರ ಪ್ರಕರಣಗಳಿದ್ದವು. 2020ರಲ್ಲಿ ಬಿಜೆಪಿ ಸರ್ಕಾರವೇ ಆತನನ್ನ ಜೈಲಿಗಟ್ಟಿತ್ತು. ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರೇ‌ ಇದೊಂದು ವೈಯಕ್ತಿಕ ಕಾರಣಗಳಿಂದಾಗಿ ನಡೆದ ಕೊಲೆ ಎಂದಿದ್ದಾರೆ. ಆದರೂ ಪರಿಹಾರ ಹಣ‌ ನೀಡಿದ್ದು ಯಾಕೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ಹಣವನ್ನು ನೀಡಲಾಗಿದೆ? ಹೀಗೆ ವೈಯಕ್ತಿಕ‌ ದ್ವೇಷಕ್ಕೆ ಮೃತಪಟ್ಟವರಿಗೆ ಇದೇ ರೀತಿ ಸರ್ಕಾರ ಪರಿಹಾರ ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

‘ನೆರೆ ಸಂತ್ರಸ್ತರಿಗೆ, ಕೋವಿಡ್‌ನಿಂದ‌ ಮೃತರಾದವರಿಗೆ ಪರಿಹಾರ ನೀಡಲು ಸತಾಯಿಸುವ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ಹೇಗೆ ₹ 25 ಲಕ್ಷ ನೀಡಿದೆ’ ಎಂದು ಪ್ರಿಯಾಂಕ್‌ ಅಚ್ಚರಿ ಪಟ್ಟಿದ್ದಾರೆ.

ADVERTISEMENT

ಹೀಗೆ ಉದಾರ ಮನಸಿದ್ದರೆ ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಪರಿಹಾರ ಏಕೆ ನೀಡಿಲ್ಲ? ಕೊಡಗಿನ ಯೋಧನ‌ ಕುಟುಂಬಕ್ಕೆ ಏಕಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.