ADVERTISEMENT

ಕಲಬುರಗಿ | ಸಂಪುಟದಿಂದ ಪ್ರಿಯಾಂಕ್‌ ಖರ್ಗೆ ವಜಾ ಮಾಡಿ: ಉಮೇಶ್‌ ಜಾಧವ್‌ ಆಗ್ರಹ‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:41 IST
Last Updated 16 ಅಕ್ಟೋಬರ್ 2025, 7:41 IST
ಉಮೇಶ್‌ ಜಾಧವ್
ಉಮೇಶ್‌ ಜಾಧವ್   

ಕಲಬುರಗಿ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಪ್ರಚಾರ ಪಡೆಯಲು ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಿಯಾಂಕ್‌ ಖರ್ಗೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ಮಾಜಿ ಸಂಸದ ಡಾ. ಉಮೇಶ್‌ ಜಾಧವ್‌ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಶ್ರೇಷ್ಠ ಸಂಘಟನೆ. ಯಾವುದೇ ಜಾತಿಗೆ ಸೀಮಿತವಾಗಿಲ್ಲ, ಅದು ಜನಸೇವೆಗೆ ಮೀಸಲಾದ ಸಂಘಟನೆ. ಗಡಿಯನ್ನು ಯೋಧರು ಕಾಯ್ದಂತೆ, ದೇಶದ ಒಳಗಡೆ ಸಾಮಾಜಿಕ ಕಾರ್ಯಗಳ ಜವಾಬ್ದಾರಿಯನ್ನು ಆರ್‌ಎಸ್‌ಎಸ್‌ ನಿರ್ವಹಿಸುತ್ತಿದೆ’ ಎಂದರು.

‘ಜಿಲ್ಲಾಡಳಿತದಿಂದ ಎರಡೂವರೆ ವರ್ಷವಾದರೂ ಕೆಡಿಪಿ ಸಭೆ ಜರುಗಿಲ್ಲ, ಮೂರೂವರೆ ವರ್ಷವಾದರೂ ದಿಶಾ ಸಭೆ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಸಭೆ ನಡೆಸುತ್ತಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರು ಸಂಕಷ್ಟದಲ್ಲಿದ್ದಾರೆ. ದರೋಡೆ, ಕಳ್ಳತನಗಳು ಹೆಚ್ಚಿವೆ. ಇವೆಲ್ಲಾ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಚಿವರು ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದ ಅವರು, ‘ಸಚಿವರು ಆರ್‌ಎಸ್‌ಎಸ್‌ ಟೀಕೆ ಮಾಡುವುದನ್ನು ಬಿಡಬೇಕು. ನಿಮಗೆ ಬೆದರಿಕೆ ಕರೆ ಮಾಡಿದವರನ್ನು ಒಳಗೆ ಹಾಕಿಸಿ’ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ‘ಉಸ್ತುವಾರಿ ಸಚಿವರು ಕಲಬುರಗಿಯನ್ನು ಮರೆತಿದ್ದಾರೆ. ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿದ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸದ ಇವರು, ಆರ್‌ಎಸ್‌ಎಸ್‌ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಆರ್‌ಎಸ್‌ಎಸ್‌ ದೇಶಭಕ್ತರ ಸಂಘಟನೆ. ನಿಮಗೆ ತಾಕತ್ತು ಇದ್ದರೆ ಆರ್‌ಎಸ್‌ಎಸ್‌ ಡ್ರೆಸ್‌ ಹಾಕಿಕೊಂಡವರ ಮತ್ತು ಭಾರತ ಮಾತಾಕಿ ಜೈ ಎಂದು ಕೂಗುವವರ ವೋಟ್‌ ಬೇಡ ಎಂದು ಹೇಳಿ ನೋಡೋಣ’ ಎಂದು ಸವಾಲು ಹಾಕಿದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ಆರ್‌ಎಸ್‌ಎಸ್‌ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾದ ಸಂಘಟನೆಯಲ್ಲ, ಸರ್ಕಾರ ಮಾಡದ ಸಮಾಜ ಸೇವೆಯ ಕೆಲಸಗಳನ್ನು ಆರ್‌ಎಸ್‌ಎಸ್‌ ನಿರ್ವಹಿಸುತ್ತಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ಬಗಲಿ, ಶಾಸಕ ಅವಿನಾಶ ಜಾಧವ, ಹರ್ಷಾನಂದ ಗುತ್ತೇದಾರ, ಬಾಬುರಾವ ಚವ್ಹಾಣ, ಅಮರನಾಥ ಪಾಟೀಲ, ನಿತಿನ್‌ ಗುತ್ತೇದಾರ್‌ ಇತರರು ಹಾಜರಿದ್ದರು.

ರಾಜಕುಮಾರ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.