ADVERTISEMENT

ಚಿಂಚೋಳಿ: ದಲಿತ ಸಂಘಟನೆಗಳ ಮುಖಂಡರಿಂದ ಮಿಂಚಿನ ಪ್ರತಿಭಟನೆ, ಧಿಕ್ಕಾರದ ಘೋಷಣೆ

ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡದೇ ಅಗೌರವ; ಆರೋಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 12:36 IST
Last Updated 26 ಜನವರಿ 2020, 12:36 IST
ಚಿಂಚೋಳಿಯ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಪ್ರತಿಭಟನಾ ನಿರತ ಪ್ರಗತಿಪರ ಸಂಘಟನೆಗಳ ಮುಖಂಡ ಮನವಿಯನ್ನು ಶಾಸಕ ಡಾ. ಅವಿನಾಶ ಜಾಧವ ಆಲಿಸಿದರು.
ಚಿಂಚೋಳಿಯ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಪ್ರತಿಭಟನಾ ನಿರತ ಪ್ರಗತಿಪರ ಸಂಘಟನೆಗಳ ಮುಖಂಡ ಮನವಿಯನ್ನು ಶಾಸಕ ಡಾ. ಅವಿನಾಶ ಜಾಧವ ಆಲಿಸಿದರು.   

ಚಿಂಚೋಳಿ: ಗಣರಾಜ್ಯೋತ್ಸವ ದಿನದಂದು ಪಟ್ಟಣದ ಬೀದರ್‌ ಕ್ರಾಸ್‌ನಲ್ಲಿರುವ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡದೇ ಅಗೌರವ ತೋರಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಮಿಂಚಿನ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಇಲ್ಲಿ ನಡೆಯಿತು.

ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯ ಮುಂಭಾಗದ ಧ್ವಜಕಟ್ಟೆ ಹತ್ತಿದ ಪ್ರತಿಭಟನಾಕಾರರು ತಮ್ಮ ಅಸಮಾಧಾನ ಹೊರಹಾಕಿ ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.

ಆಗ ಧ್ವಜಕಟ್ಟೆಯ ಮುಂಭಾಗದಲ್ಲಿ ಶಾಸಕ ಅವಿನಾಶ ಜಾಧವ, ತಾಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಅವರು ಪ್ರತಿಭಾ ಪುರಸ್ಕಾರ ವಿತರಣೆಯಲ್ಲಿ ತೊಡಗಿದ್ದರು.

ADVERTISEMENT

ಪ್ರತಿಭಟನಾಕಾರರ ಬಳಿ ಬಂದ ಪೊಲೀಸರು, ವೇದಿಕೆಯ ಕೆಳಗಿಳಿಯುವಂತೆ ಮನವಿ ಮಾಡಿದರು. ಆಗ ವೇದಿಕೆಯ ಕೆಳಗೆ ನಿಂತು ಧಿಕ್ಕಾರದ ಘೋಷಣೆ ಕೂಗಿದರು. ಆಗ ಸ್ಥಳಕ್ಕೆ ಬಂದ ಶಾಸಕ ಡಾ. ಅವಿನಾಶ ಜಾಧವ, ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಮತ್ತು ಡಿವೈಎಸ್ಪಿ ಈ.ಎಸ್‌.ವೀರಭದ್ರಯ್ಯ ಮನವಿ ಆಲಿಸಿದರು.

ಶಾಸಕ ಮಾತನಾಡಿ, ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಲು ನಾನು ತಮಗೆ ಸೂಚನೆ ಕೊಟ್ಟಿದ್ದೇನೆ. ನೀವು ಹೀಗೆ ನಿರ್ಲಕ್ಷ ಮಾಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಮುಖ್ಯಾಧಿಕಾರಿ ಅಭಯಕುಮಾರ ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸಿದರು.

ಇದರಿಂದ ತೃಪ್ತರಾಗದ ಪ್ರತಿಭಟನಾಕಾರರು ಇದಕ್ಕೆ ನೀವು ಏನು ಕ್ರಮಕೈಗೊಳ್ಳುತ್ತೀರಿ, ಶಾಸಕರು ಉತ್ತರಿಸಬೇಕೆಂದು ಪಟ್ಟು ಹಿಡಿದಾಗ ಮಧ್ಯಪ್ರವೇಶಿಸಿದ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷರಾದ ವಕೀಲ ಶ್ರೀಮಂತ ಕಟ್ಟಿಮನಿ, ಶಾಸಕರು ಎಲ್ಲದಕ್ಕೂ ಉತ್ತರಿಸುವುದಿಲ್ಲ. ಇದು ಅಧಿಕಾರಿಗಳಿಗೆ ಸಂಬಂಧಿಸಿದ್ದು, ಅಧಿಕಾರಿಗಳು ಉತ್ತರ ಕೊಡುತ್ತಾರೆ.ಅಂಬೇಡ್ಕರ್‌ ನಿಮಗೆ ಎಷ್ಟು ಬೇಕೋ ಅಷ್ಟೇ ನಮಗೂ ಬೇಕು ಎಂದು ಶ್ರೀಮಂತ ಹೇಳಿದಾಗ ಮಾತಿನ ಚಕಮಕಿ ನಡೆಯಿತು. ನೀವು ನಡೆಯಿರಿ ಸರ್‌ ಎಂದು ಶಾಸಕರನ್ನು ಕರೆದುಕೊಂಡು ಹೋದರು.

ಆಗ ತಾಲ್ಲೂಕು ಆಡಳಿತ, ಮುಖ್ಯಾಧಿಕಾರಿ, ತಹಶೀಲ್ದಾರ ಮತ್ತು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.

ಶಾಸಕರು ತಮ್ಮ ಬೆಂಬಲಿಗರೊಂದಿಗೆ ಕಾರಿನಲ್ಲಿ ಕುಳಿತಾಗ ಕೆಲ ಪ್ರತಿಭಟನಾಕಾರರು ಕಾರಿನ ಮುಂದೆ ಕುಳಿತುಕೊಳ್ಳಲು ಯತ್ನಿಸಿದರು. ಇದನ್ನು ಪೊಲೀಸರು ತಡೆದರು.

ನಂತರ ಶಾಸಕ ಅವಿನಾಶ ಜಾಧವ, ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಬೀದರ್‌ ಕ್ರಾಸ್‌ಗೆ ತೆರಳಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಪ್ರತಿಭಟನೆಯಲ್ಲಿ ಗೋಪಾಲರಾವ್‌ ಕಟ್ಟಿಮನಿ, ಶಿವಕುಮಾರ ಕೊಳ್ಳೂರು, ಮಾರುತಿ ಗಂಜಗಿರಿ, ಗೌತಮ ಬೊಮ್ಮನಳ್ಳಿ, ಶಾಮರಾವ್‌ ಕೊರವಿ, ಓಮನರಾವ್‌ ಕೊರವಿ, ಅಮರ ಲೊಡ್ಡನೋರ್, ಕಾಶಿರಾಮ ದೇಗಲಮಡಿ, ವಿಶ್ವನಾಥ ಹೊಡೇಬೀರನಹಳ್ಳಿ, ಮಕದ್ದುಮ್‌ ಖಾನ್‌, ಎಸ್‌.ಕೆ ಪೇಂಟರ್‌. ಮಹಿಬೂಬಶಾ ಅಣವಾರ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.