ADVERTISEMENT

ಕಾರ್ಕಳ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 14:29 IST
Last Updated 27 ಆಗಸ್ಟ್ 2024, 14:29 IST
ಕಲಬುರಗಿಯಲ್ಲಿ ಮಂಗಳವಾರ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಮಂಗಳವಾರ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ಯುವತಿಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಆರೋಪಿ ಅಲ್ತಾಫ್‌ ಮತ್ತು ಆತನ ಸ್ನೇಹಿತರು ಯುವತಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು ಖಂಡನೀಯ. ಅತ್ಯಾಚಾರ ಮಾಡಿದ ದುಷ್ಕರ್ಮಿಗಳನ್ನು ಗಲ್ಲಿಗೆ ಹಾಕಬೇಕು. ಇಲ್ಲವೆ ಎನ್‌ಕೌಂಟರ್ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಂಡಾಗ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ ಆಗುತ್ತದೆ. ಇಲ್ಲದೆ ಇದ್ದರೆ ರಾಜ್ಯದ ಮೂಲೆ ಮೂಲೆಯಲ್ಲಿ ಇಂತಹ ದುಷ್ಕರ್ಮಿಗಳು ತಲೆ ಎತ್ತುತ್ತಾರೆ ಎಂದಿದ್ದಾರೆ.

ADVERTISEMENT

ಪ್ರತಿಭಟನೆಯಲ್ಲಿ ಸೇನೆ ಅಧ್ಯಕ್ಷ ಜಿ.ಶಿವಶಂಕರ, ಪ್ರಮುಖರಾದ ಗುಂಡಪ್ಪ ಸಾಳೋಂಕೆ, ಸಂಜೀವಕುಮಾರ ಮಂಜಳಕರ್, ತಿಪ್ಪಣ್ಣ ಒಡೆಯರಾಜ, ಸಿದ್ರಾಮ ದಂಡಗೂಲಕರ್, ನಾಗೇಶ ಕುಶಳಕರ, ರಾಘು ಲಸಕರೆ, ಸುರೇಶ ಕುಶಳಕರ, ಭೀಮಾಶಂಕರ ಭಂಕೂರ, ಶ್ರೀಹರಿ ಜಾಧವ ಪಾಲ್ಗೊಂಡಿದ್ದರು.

ದಿಟ್ಟ ಕ್ರಮ ತೆಗೆದುಕೊಳ್ಳಿ: ಕಾರ್ಕಳದ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಆರೋಪಿಗಳ ಮೇಲೆ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಭೋವಿ ವಡ್ಡರ್ ಸಮಾಜ ಜಿಲ್ಲಾಧ್ಯಕ್ಷ ಗುಂಡಪ್ಪ ಎಚ್‌.ಸಾಳಂಕೆ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದವರ ಮೇಲೆ ನಡು ರಸ್ತೆಯಲ್ಲಿ ಗುಂಡು ಹಾರಿಸಬೇಕು. ಇಂತಹ ಕೃತ್ಯಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ಉಡುಪಿಯ ಜಿಲ್ಲಾಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಠಲ ನೆಲೋಗಿ, ರಾಜು ಮೇಸ್ತ್ರಿ, ರಾಮಯ್ಯ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.