ADVERTISEMENT

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 5:19 IST
Last Updated 20 ಜನವರಿ 2023, 5:19 IST
ಆರ್.ಡಿ. ಪಾಟೀಲ
ಆರ್.ಡಿ. ಪಾಟೀಲ   

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದ ಆರ್.ಡಿ. ಪಾಟೀಲ ನಗರದ ಅಕ್ಕಮಹಾದೇವಿ ‌ಕಾಲೊನಿಯ ತನ್ನ ಮನೆಯಿಂದ ಗುರುವಾರ ರಾತ್ರಿ ‌ಪರಾರಿಯಾಗಿದ್ದಾನೆ.

ಈ ಸಂಬಂಧ ‌ಸಿಐಡಿ ಅಧಿಕಾರಿಗಳು ಅಶೋಕ‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಆರ್.ಡಿ. ಪಾಟೀಲ ಆತನ ಸಹೋದರ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಕಾಶಿನಾಥ ಚಿಲ್ಲ ಹಾಗೂ ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ‌ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ದಾಳಿ ನಡೆಸಿ ರಾತ್ರಿ ಹೊರಬಂದ ಬಳಿಕ ತುಮಕೂರು ಜಿಲ್ಲೆಯಲ್ಲಿ ದಾಖಲಾದ ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ ಬಂಧಿಸಲು ಸಿಐಡಿ ಅಧಿಕಾರಿಗಳು ಆರ್.ಡಿ‌. ಪಾಟೀಲ ‌ಮನೆಗೆ ತೆರಳಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ , 'ಯಾವ ಕೇಸು, ನನಗೇನೂ ಗೊತ್ತೇ ಇಲ್ಲ. ವಿನಾಕಾರಣ ನೀವು ‌ಕಿರುಕುಳ ನೀಡುತ್ತಿದ್ದೀರಿ' ಎನ್ನುತ್ತಲೇ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಸಿಐಡಿ ಡಿಟೆಕ್ಟಿವ್‌ ಸಬ್ ಇನ್ ಸ್ಪೆಕ್ಟರ್ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.

ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಆರ್.ಡಿ. ಪಾಟೀಲ‌ ಮನೆಯಿಂದ ನಾಪತ್ತೆಯಾಗಿದ್ದಾನೆ.‌ ಅದ್ದರಿಂದ ಅತನಿಗೆ ನೀಡಿದ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಸಿಐಡಿ ಅಧಿಕಾರಿಗಳು ಕೆಲ ದಿನಗಳ ‌ಹಿಂದೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.