ADVERTISEMENT

ಕಲಬುರಗಿ: ಸ್ವಚ್ಛ ನಗರಕ್ಕಾಗಿ ಬೇಕಿವೆ ಶೌಚಾಲಯಗಳು

ಜಿಲ್ಲಾಧಿಕಾರಿ ಕಚೇರಿ, ಕೋರ್ಟ್‌ ಎದುರು ಶೌಚಾಲಯ ಇದ್ದರೂ ಬೀಗ; ಮಲಮೂತ್ರ ವಿಸರ್ಜನೆಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:21 IST
Last Updated 30 ಅಕ್ಟೋಬರ್ 2025, 5:21 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಉದ್ಘಾಟನೆಗೆ ಸಿದ್ಧವಾಗಿರುವ ಶೌಚಾಲಯ
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಉದ್ಘಾಟನೆಗೆ ಸಿದ್ಧವಾಗಿರುವ ಶೌಚಾಲಯ   
ರೈಲು ನಿಲ್ದಾಣದ ಎದುರಿನ ಇ–ಶೌಚಾಲಯ ಕಾಣೆ ಕಾರ್ಯಕ್ರಮಗಳಿದ್ದಾಗಲೂ ರಂಗಮಂದಿರದಲ್ಲಿನ ಶೌಚಾಲಯಗಳಿಗೆ ಬೀಗ | ಖಾಸಗಿ ಸಹಭಾಗಿತ್ವದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಪಾಲಿಕೆ ಚಿಂತನೆ

ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿ ನಗರದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ನಗರದ ನೈರ್ಮಲ್ಯ ಕಾಪಾಡಲು ಶೌಚಾಲಯಗಳು ಅಗತ್ಯ. ಆದರೆ, ಜನನಿಬಿಡ ಸ್ಥಳಗಳಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳು ಇಲ್ಲದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ.

ನಗರದ ಕೇಂದ್ರ ಬಸ್‌ ನಿಲ್ದಾಣದಿಂದ ಸೂಪರ್‌ ಮಾರ್ಕೆಟ್‌ ಮಾರ್ಗದ ರಾಷ್ಟ್ರಪತಿ ವೃತ್ತ(ಹೊಸ ಜೇವರ್ಗಿ ರಸ್ತೆ ಕ್ರಾಸ್‌), ಮೋಹನ್‌ ಲಾಡ್ಜ್‌ (ಹಳೆ ಜೇವರ್ಗಿ ರಸ್ತೆ ಕ್ರಾಸ್‌), ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ನೂರಾರು ವಿದ್ಯಾರ್ಥಿನಿಯರು ಬಸ್‌ಗಾಗಿ ಕಾಯುವ ಜಯದೇವ ಆಸ್ಪತ್ರೆ ಎದುರು ಶೌಚಾಲಯಗಳಿಲ್ಲ. ಜಿಲ್ಲಾ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು(ಹೊಸ) ಶೌಚಾಲಯಗಳಿದ್ದರೂ ಬೀಗ ಹಾಕಲಾಗಿದೆ.

ಇನ್ನು ಪ್ರಮುಖ ಸ್ಥಳಗಳಾದ ರಾಮಮಂದಿರ ವೃತ್ತ, ಲಾಲಗೇರಿ ಕ್ರಾಸ್‌, ಖರ್ಗೆ ಪೆಟ್ರೋಲ್‌ಪಂಪ್‌ ಸ್ಥಳಗಳಲ್ಲಿಯೂ ಶೌಚಾಲಯಗಳಿಲ್ಲ. ಇದರಿಂದಾಗಿ ವ್ಯಾಪಾರಸ್ಥರು, ಗ್ರಾಹಕರು ಸೇರಿದಂತೆ ಸಾರ್ವಜನಿಕರು ‘ನಿಸರ್ಗ ಕರೆ’ಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಮೋಹನ್‌ ಲಾಡ್ಜ್‌ ಎದುರು, ಕೋರ್ಟ್‌ ರಸ್ತೆಯ ಎಡಬದಿ ಸಂದಿ, ಡಿ.ಸಿ ಕಚೇರಿ ಎದುರಿನ ಕಂಪೌಂಡ್‌ ಸೇರಿದಂತೆ ಖಾಲಿ ಜಾಗ, ಗಿಡಗಂಟಿ ಮರೆಯಲ್ಲಿ ಮೂತ್ರ ವಿಸರ್ಜನೆ ಕಂಡುಬರುತ್ತದೆ. ಪರಿಣಾಮ ಈ ಸ್ಥಳಗಳಲ್ಲಿ ಅನೈರ್ಮಲ್ಯ ಹೆಚ್ಚಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ADVERTISEMENT

ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ನಿರಂತರವಾಗಿ ಜಯಂತಿ, ಸರ್ಕಾರಿ ಮತ್ತು ಖಾಸಗಿ ಸಭೆ, ಸಮಾರಂಭಗಳು ನಡೆಯುತ್ತವೆ. ರಂಗಮಂದಿರದಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ ತೆರೆಯುವುದಿಲ್ಲ. ಬೀಗ ಹಾಕಿರಲಾಗಿರುತ್ತದೆ ಎಂದು ಪ್ರತಿ ಕಾರ್ಯಕ್ರಮದಲ್ಲೂ ಜನ ದೂರುತ್ತಾರೆ.

‘ಇತ್ತೀಚೆಗೆ ಜನರಲ್ಲಿ ಸಕ್ಕರೆ ಕಾಯಿಲೆ ಹೆಚ್ಚಾಗಿದೆ. ಪದೇಪದೆ ಮೂತ್ರ ವಿಸರ್ಜನೆಗೆ ಹೋಗುವುದು ಅನಿವಾರ್ಯ. ಆದರೆ, ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಕನಿಷ್ಠಪಕ್ಷ ಮೂತ್ರಾಲಯಗಳಿಲ್ಲದಿರುವುದು ದುರ್ದೈವದ ಸಂಗತಿ’ ಎಂದು ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಪುರುಷರಾದರೆ ‘ನಿಸರ್ಗ ಕರೆ’ಗಳನ್ನು ಹೇಗೋ ಪೂರೈಸಿಕೊಳ್ಳುತ್ತಾರೆ. ಆದರೆ, ಮಹಿಳೆಯರ ಪಾಡೇನು? ಸೂಪರ್‌ ಮಾರ್ಕೆಟ್‌, ಜಯದೇವ ಆಸ್ಪತ್ರೆ ಎದುರು, ರಾಮಮಂದಿರ ಸರ್ಕಲ್‌ ಸೇರಿ ವಿವಿಧೆಡೆ ಶೌಚಾಲಯಗಳನ್ನು ನಿರ್ಮಿಸಬೇಕು. ವಿವಿಧ ಕೆಲಸಕಾರ್ಯಗಳಿಗಾಗಿ ಬರುವ ಜನರಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಶೌಚಾಲಯವನ್ನು ಬಳಕೆಗೆ ಮುಕ್ತ ಮಾಡಬೇಕು’ ಎಂಬುದು ಮಹಿಳಾ ಹೋರಾಟಗಾರರೊಬ್ಬರ ಒತ್ತಾಯ.

ಕಲಬುರಗಿಯ ಜಿಲ್ಲಾ ನ್ಯಾಯಾಲಯದ ಕಂಪೌಂಡ್‌ಗೆ ಹೊಂದಿಕೊಂಡಿರುವ ಶೌಚಾಲಯಕ್ಕೆ ಬೀಗ ಹಾಕಿರುವುದು
ಕಲಬುರಗಿಯ ಮೋಹನ್‌ ಲಾಡ್ಜ್‌ ಸಮೀಪದಲ್ಲಿರುವ ಇ–ಶೌಚಾಲಯದ ದುಸ್ಥಿತಿ

ತುಕ್ಕು ಹಿಡಿಯುತ್ತಿರುವ ಇ–ಶೌಚಾಲಯಗಳು

ಮಹಾನಗರ ಪಾಲಿಕೆಯಿಂದ 2017ರಲ್ಲಿ ನಗರದ ವಿವಿಧೆಡೆ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಅಳವಡಿಸಿರುವ ಇ–ಶೌಚಾಲಯಗಳು ತುಕ್ಕು ಹಿಡಿಯುತ್ತಿವೆ. ಆರಂಭದಲ್ಲಿ ಜನ ₹2 ಅಥವಾ ₹5 ಮುಖಬೆಲೆಯ ನಾಣ್ಯ ಹಾಕಿ ಬಳಸುತ್ತಿದ್ದರು. ದಿನಕಳೆದಂತೆ ಅವು ನೀರು ಮತ್ತು ನಿರ್ವಹಣೆ ಕೊರತೆಯಿಂದ ಬಂದ್‌ ಆದವು. ‘ಮೋಹನ್‌ ಲಾಡ್ಜ್‌ ಸಮೀಪ ರೈಲು ನಿಲ್ದಾಣ ರಾಷ್ಟ್ರಪತಿ ವೃತ್ತ ಕೇಂದ್ರ ಬಸ್‌ ನಿಲ್ದಾಣ ಲಾಲಗೇರಿ ಕ್ರಾಸ್‌ ಸಂತ್ರಾಸವಾಡಿಯಲ್ಲಿ ಇ–ಶೌಚಾಲಯಗಳನ್ನು ಅಳವಡಿಸಲಾಗಿತ್ತು. ಅವುಗಳ ಭಾಗಗಳು ಒಂದೊಂದಾಗಿ ‘ಕಣ್ಮರೆ’ಯಾಗುತ್ತಿವೆ. ರೈಲು ನಿಲ್ದಾಣದ ಎದುರಿನ ಇ–ಶೌಚಾಲಯ ಕಾಣುತ್ತಿಲ್ಲ. ಇವುಗಳನ್ನು ದುರಸ್ತಿ ಮಾಡಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಬಿ.ಎಂ.ರಾವೂರ. ‘ಇ–ಶೌಚಾಲಯಗಳು ಬಳಕೆಯ ಸ್ಥಿತಿಯಲ್ಲಿಲ್ಲ. ಅವುಗಳನ್ನು ತೆರವುಗೊಳಿಸಲು ಚರ್ಚಿಸಲಾಗಿದೆ. ಅದೇ ಸ್ಥಳದಲ್ಲಿ ಶೌಚಾಲಯ ನಿರ್ಮಿಸಲು ಅವಕಾಶವಿದ್ದರೆ ಪ್ರಯತ್ನಿಸಲಾಗುವುದು’ ಎಂದು ಮೇಯರ್‌ ವರ್ಷಾ ರಾಜೀವ ಜಾನೆ ಪ್ರತಿಕ್ರಿಯಿಸಿದರು.

‘7 ಶೌಚಾಲಯಗಳು ಉದ್ಘಾಟನೆಗೆ ಸಿದ್ಧ’

‘ನಗರದ ರಾಮಮಂದಿರ ನಗರ ಬಸ್‌ ನಿಲ್ದಾಣ ಆಳಂದ ಚೆಕ್‌ಪೋಸ್ಟ್‌ ನಗರೇಶ್ವರ ಶಾಲೆ ಡಿ.ಸಿ ಕಚೇರಿ ಪಂಚಶೀಲ ನಗರ ಸಂಜೀವ ನಗರದಲ್ಲಿ ಶೌಚಾಲಯಗಳು ಉದ್ಘಾಟನೆಗೆ ಸಿದ್ಧವಾಗಿವೆ. ನವೆಂಬರ್‌ ಮೊದಲ ವಾರದಲ್ಲಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್‌ ವರ್ಷಾ ರಾಜೀವ ಜಾನೆ ತಿಳಿಸಿದರು. ‘ಅ.30ರಂದು ಆರೋಗ್ಯ ಸಮಿತಿ ಸಭೆ ನಡೆಯಲಿದ್ದು ನಾಲ್ಕು ಏಜೆನ್ಸಿಗಳು ಪಾಲ್ಗೊಳ್ಳಲಿವೆ. ಹೆಚ್ಚು ಬಿಡ್‌ ಮಾಡಿದವರಿಗೆ ಶೌಚಾಲಯಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗುವುದು’ ಎಂದರು. ‘ಇನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿಯೂ ಶೌಚಾಲಯಗಳ ನಿರ್ಮಾಣಕ್ಕೆ ಚಿಂತಿಸಲಾಗುತ್ತಿದೆ. ಪಾಲಿಕೆ ಜಾಗದಲ್ಲಿ ಏಜೆನ್ಸಿಗಳೇ ಕಟ್ಟಡ ನಿರ್ಮಿಸಿಕೊಂಡು ನಿರ್ವಹಣೆ ಮಾಡಿಕೊಂಡು ಹೋಗುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.