ADVERTISEMENT

ಕೋವಿಡ್‌: ನಸುಕಿನ 1ಕ್ಕೆ ಕಚೇರಿಗೆ ತೆರಳಿ ರೆಮ್‌ಡಿಸಿವಿರ್ ತಂದ ಸಂಸದ!

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 3:10 IST
Last Updated 29 ಏಪ್ರಿಲ್ 2021, 3:10 IST
ರೆಮ್‌ಡಿಸಿವಿರ್ ಚುಚ್ಚುಮದ್ದುಗಳ ಬಾಕ್ಸ್‌ಗಳನ್ನು ಕಲಬುರ್ಗಿಗೆ ಸಾಗಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು
ರೆಮ್‌ಡಿಸಿವಿರ್ ಚುಚ್ಚುಮದ್ದುಗಳ ಬಾಕ್ಸ್‌ಗಳನ್ನು ಕಲಬುರ್ಗಿಗೆ ಸಾಗಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು   

ಕಲಬುರ್ಗಿ: ಜಿಲ್ಲೆಯ ಕೋವಿಡ್‌ ರೋಗಿಗಳಿಗೆ ರೆಮ್‌ಡಿಸಿವಿರ್ ಚುಚ್ಚುಮದ್ದು ‌ಅಭಾವ ತೀವ್ರವಾಗಿದ್ದನ್ನು ಗಮನಿಸಿದ ಸಂಸದ ಡಾ.ಉಮೇಶ ಜಾಧವ, ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್ ರೂಮ್‌ಗೆ ಬುಧವಾರ ನಸುಕಿನಲ್ಲಿ 1 ಗಂಟೆಗೆ ತೆರಳಿ, 350 ವೈಲ್‌ಗಳನ್ನು ಪಡೆದುಕೊಂಡು ವಿಮಾನದ ‌ಮೂಲಕ ಬೆಳಿಗ್ಗೆ ಇಲ್ಲಿಗೆ ತಂದರು.

ಜಿಲ್ಲೆಯಲ್ಲಿ ಈ ಚುಚ್ಚುಮದ್ದು ‌ದಾಸ್ತಾನು ಖಾಲಿಯಾಗಿದ್ದನ್ನು ಸಹಾಯಕ ಔಷಧ ನಿಯಂತ್ರಕ ಗೋಪಾಲ ಭಂಡಾರಿ ಸಂಸದರ ಗಮನಕ್ಕೆ ತಂದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಸದರು, ಜಿಲ್ಲಾಡಳಿತವನ್ನು ನೆಚ್ಚಿಕೊಳ್ಳುವ ಬದಲು ತಾವೇ ಬೆಂಗಳೂರಿನ ಕೋವಿಡ್ ವಾರ್ ರೂಮ್‌ಗೆ ತೆರಳಿ ಅಧಿಕಾರಿಗಳಿಗೆ ಪರಿಸ್ಥಿತಿಯ ಗಂಭೀರತೆ ಮನವರಿಕೆ ಮಾಡಿಕೊಟ್ಟರು.

ADVERTISEMENT

ತಕ್ಷಣ ಜಿಲ್ಲೆಗೆ 350 ವೈಲ್ಸ್ ರೆಮ್‌ಡಿಸಿವಿರ್‌ ಚುಚ್ಚುಮದ್ದು ಮಂಜೂರು ಮಾಡಿಸಿಕೊಂಡರು. ಅದನ್ನು ಬುಧವಾರ ಕಳಿಸಿದ್ದರೆ ಗುರುವಾರ (ಏಪ್ರಿಲ್ 29) ತಲುಪುವ ಸಾಧ್ಯತೆ ಇತ್ತು. ಆದರೆ, ಹಲವು ರೋಗಿಗಳಿಗೆ ತುರ್ತಾಗಿ ‌ಕೊಡಬೇಕಿರುವುದರಿಂದ ಆ ಬಾಕ್ಸ್‌ಗಳನ್ನು ತಮ್ಮ ಕಾರಿನಲ್ಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ‌ಕಲಬುರ್ಗಿಗೆ ತಂದರು.

ಇನ್ನೂ 460 ಬೇರೆ ಔಷಧಿಗಳನ್ನು ಬೆಂಗಳೂರಿನಿಂದ ಬುಧವಾರ ಸಂಜೆ ಕಳಿಸಲಾಗಿದ್ದು, ಗುರುವಾರ ಬೆಳಿಗ್ಗೆ ಕಲಬುರ್ಗಿ ತಲುಪಲಿವೆ ಎಂದು ಸಂಸದರ ಕಚೇರಿ ತಿಳಿಸಿದೆ.

‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲ್ಪಪ್ರಮಾಣದ ರೆಮ್‌ಡಿಸಿವಿರ್‌ ಇತ್ತು. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆ ನಾನೇ ಹೋಗಿ ಅವುಗಳನ್ನು ತಂದಿದ್ದೇನೆ. ಇದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ. ಜನಪ್ರತಿನಿಧಿ ಅಷ್ಟೇ ಅಲ್ಲ, ನಾನು ವೈದ್ಯನೂ ಹೌದು. ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ ಅಷ್ಟೇ’ ಎಂದು ಡಾ.ಉಮೇಶ ಜಾಧವ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.