ADVERTISEMENT

ಕಲಬುರಗಿ: ನೀರು, ಮಣ್ಣಿನ ಸಂರಕ್ಷಣೆಗೆ ‘ರಿವಾರ್ಡ್‌’

ಕೃಷಿ ಉತ್ಪನ್ನ ಹೆಚ್ಚಳ, ಜಾನುವಾರುಗಳಿಗೆ ಅನುಕೂಲವಾದ ವಿಶ್ವಬ್ಯಾಂಕ್‌ ನೆರವಿನ ಯೋಜನೆ

ಕಿರಣ ನಾಯ್ಕನೂರ
Published 5 ಜನವರಿ 2026, 4:54 IST
Last Updated 5 ಜನವರಿ 2026, 4:54 IST
ರಿವಾರ್ಡ್ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ನಿರ್ಮಿಸಿರುವ ಕೃಷಿಹೊಂಡ
ರಿವಾರ್ಡ್ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ನಿರ್ಮಿಸಿರುವ ಕೃಷಿಹೊಂಡ   

ಕಲಬುರಗಿ: ಕೃಷಿ ಇಳುವರಿ, ಉತ್ಪನ್ನಗಳ ಹೆಚ್ಚಳ, ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಸಾಕಷ್ಟು ಶ್ರಮಿಸುತ್ತಿದ್ದು ಇದಕ್ಕೆ ‘ರಿವಾರ್ಡ್‌’ ಯೋಜನೆ ಪೂರಕವಾಗಿದೆ.

ಯೋಜನೆಗೆ ತಾಲ್ಲೂಕು ವ್ಯಾಪ್ತಿಯ 10 ಗ್ರಾಮಗಳ 6,681 ಹೆಕ್ಟೇರ್‌ ಪ್ರದೇಶ ಗುರುತಿಸಲಾಗಿದ್ದು ಕ್ಷೇತ್ರ ಬದು, ನಾಲಾ ಬದು, ಕೃಷಿಹೊಂಡ, ಗೋ ಕಟ್ಟೆ (ಜಾನುವಾರುಗಳಿಗೆ ನೀರು ಕುಡಿಯಲು ವ್ಯವಸ್ಥೆ), ಮಣ್ಣು ಪರೀಕ್ಷೆ ಸೇರಿ ವಿವಿಧ ಕೆಲಸಗಳು ನಡೆಯುತ್ತಿವೆ. ವಿಶ್ವಬ್ಯಾಂಕ್‌, ಕೇಂದ್ರ ಸರ್ಕಾರದ ಅಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಯೋಜನೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. 

ತಾಲ್ಲೂಕಿನ ಮೇಳಕುಂದಾ(ಬಿ) ಮತ್ತು ಮೇಳಕುಂದಾ(ಕೆ) ಗ್ರಾಮಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 2691.37 ಹೆಕ್ಟೇರ್‌ ಪ್ರದೇಶ ಯೋಜನೆಯ ವ್ಯಾಪ್ತಿಯಲ್ಲಿದೆ.

ADVERTISEMENT

‘ರಿವಾರ್ಡ್’ ಗುರಿಗಳೇನು?:

ಜಲಾನಯನ ಪ್ರದೇಶದ ಭೂಸಂಪನ್ಮೂಲ ಪರೀಕ್ಷೆ (ಎಲ್‌ಆರ್‌ಐ), ವೈಜ್ಞಾನಿಕವಾಗಿ ಮಣ್ಣಿನ ಗುಣಗಳ ಸಮಗ್ರ ಮಾಹಿತಿ ಸಂಗ್ರಹಣೆ, ಭೂಸಂಪನ್ಮೂಲ ಮತ್ತು ಜಲವಿಜ್ಞಾನ ಮಾಹಿತಿ ಆಧಾರದ ಮೇಲೆ ಸಂಪೂರ್ಣ ಜಲಾನಯನ ಉಪಚಾರ, ಮಣ್ಣಿನ ಗುಣಕ್ಕೆ ತಕ್ಕಂತೆ ಪೋಷಕಾಂಶಗಳ ನಿರ್ವಹಣೆ, ಆಯ್ಕೆ, ನೀರಿನ ನಿರ್ವಹಣೆ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸುವುದು, ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಪ್ರಾತಿನಿಧ್ಯತೆಯಲ್ಲಿ ಪರಿಸರ ಹಾಗೂ ಸಮಗ್ರ ಜಲಾನಯನವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸುವುದು, ಜಲಾನಯನ ಅಭಿವೃದ್ಧಿಗೆ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು.

ಬೋಲ್ಡರ್ ತಡೆ 1340, ರಬ್ಬಲ್‌ ತಡೆ 571,  ತಿರುಗಾಲುವೆ 5320, ಆರ್‌ಆರ್‌ಎಸ್‌ 5,  ದುಂಡಾವೃತ್ತಿ 13, ಸ್ಟ್ಯಾಗರ್ಡ್ ಟ್ರೆಂಚ್(ಹೆಕ್ಟೇರ್), ಸಿಸಿಟಿಯ 9 ಕಾಮಗಾರಿಗಳು ಭೌತಿಕ ಗುರಿಯಲ್ಲಿವೆ. ಇವುಗಳ ಪೈಕಿ ನಾಲಾ ಬದು, ಆರ್‌ಆರ್‌ಎಸ್‌ (ರಬ್ಬರ್ ರಿವೈಂಡ್‌ ಸ್ಟರ್ಚರ್), ದುಂಡಾವೃತ್ತಿ, ಸ್ಟ್ಯಾಗರ್ಡ್‌ (ಭೂಮಿಯ ಮೇಲ್ಮೈಯಲ್ಲಿ ನೀರು ಹರಿಯುವುದನ್ನು ಮತ್ತು ಮಣ್ಣಿನ ಸವಕಳಿ ತಡೆಯಲು ನಿರ್ಮಿಸುವ ಹಂತಗಳಿರುವ ಕಂದಕ), ಸಿಸಿಟಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಶೂನ್ಯವಾಗಿದೆ. ಎಲ್ಲ ಕೆಲಸಗಳಿಗೆ ₹8.84 ಕೋಟಿ ಬಿಡುಗಡೆಯಾಗಿದೆ.

ತೋಟಗಾರಿಕೆ ಮತ್ತು ಅರಣ್ಯ ಪ್ರದೇಶ ಇಲಾಖೆಗೆ ಸಂಬಂಧಿಸಿದ 504 ಮತ್ತು 331 ಹೆಕ್ಟೇರ್‌ನಲ್ಲೂ ‘ರಿವಾರ್ಡ್‌’ ಇದೆ. ಇವುಗಳಿಗೆ ಕ್ರಮವಾಗಿ ₹62.168 ಲಕ್ಷ, ₹48.27 ಲಕ್ಷ ಬಿಡುಗಡೆಯಾಗಿದೆ.

‘ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಸಭೆ ಮಾಡಿ, ಸಮಗ್ರ ಪರಿಶೀಲನೆ ನಡೆಸಿ ವಿಸ್ತೃತ ಯೋಜನಾ ವರದಿ ಸಲ್ಲಿದ್ದೇವೆ. ‘ರಿವಾರ್ಡ್‌’ನಲ್ಲೇ ಮಣ್ಣು ಪರೀಕ್ಷೆಯನ್ನೂ ಮಾಡಲಾಗುವದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ತಿಳಿಸಿದರು.

ಚೆಕ್‌ ಡ್ಯಾಂನಲ್ಲಿ ನೀರು ನಿಲ್ಲುವುದರಿಂದ ಕೊಳವೆ ಬಾವಿಗಳ ಮರುಪೂರಣಕ್ಕೆ ಬಹಳಷ್ಟು ಅನುಕೂಲ ಇದೆ. ಅಲ್ಲದೆ ಜಾನುವಾರಿಗಳಿಗೆ ನೀರು ಸಿಗುತ್ತದೆ. ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ವೇಳೆ ನೀರಿಗಾಗಿ ಅಲೆದಾಡುವುದನ್ನು ಇದು ತಪ್ಪಿಸುತ್ತದೆ. ಕೃಷಿಹೊಂಡದ ನೀರನ್ನು ಸ್ಪ್ರಿಂಕ್ಲರ್ ಮೂಲಕ ಹನಿ ನೀರಾವರಿಗೆ ಬಳಸಬಹುದು. 

‘ರೀವಾರ್ಡ್‌’ಅಡಿ ರೈತರ ಭೂಸಂಪನ್ಮೂಲ ದಾಸ್ತಾನು ಮಾಹಿತಿ ತರಬೇತಿ, ಪಾಟಿ೯ಸಿಪೆಟ್ರಿ ರೂರಲ್‌ ಅಪ್ರೆಸಲ್‌ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿಕೊಡಲಾಗಿದೆ.

ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದ ರೈತ ರಾಚಣ್ಣ ರಾಮಚಂದ್ರಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಟ್ರಂಚ್‌ ಕಂ ಬಂಡ್‌
ಹುಣಸಿಹಡಗಿಲ್‌ ಗ್ರಾಮದ ರೈತ ನಿಂಗಣ್ಣ ಸಿದ್ದಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ
ಹತಗುಂದಾ ಗ್ರಾಮದ ಅಕ್ಕವ್ವಾ ಶರಣಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ 21X21X3 ಅಳತೆಯ ಕೃಷಿಹೊಂಡ
ಮಳನಿ ಗ್ರಾಮದ ಲಕ್ಷ್ಮಣರಾವ್ ಅವರ ಜಮೀನಿನಲ್ಲಿ ನಡೆದ ಖುಷ್ಕಿ ತೋಟಗಾರಿಕೆ ಕಾಮಗಾರಿಯಡಿ ನಿಂಬೆ ಸಸಿ ನೆಟ್ಟಿರುವುದು
ರಿವಾರ್ಡ್‌ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ನಿರ್ಮಿಸಿರುವ ಚಕ್‌ ಡ್ಯಾಂ ತೆರದ ಬಾವಿಯ ಮರುಪೂರಣಕ್ಕೆ ಅನುಕೂಲವಾಗಿದೆ 
ರಿವಾರ್ಡ್‌ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನುಗಳಲ್ಲಿ ನಿರ್ಮಿಸಿರುವ ಚಕ್‌ ಡ್ಯಾಂ ಟ್ರಂಚ್‌ ಕಂ ಬಂಡ್‌ ಮತ್ತು ಕೃಷಿಹೊಂಡ  
‘ರಿವಾರ್ಡ್‌‌’ ಯೋಜನೆಯಲ್ಲಿ ಜಲ ಮತ್ತು ಮಣ್ಣು ಸಂರಕ್ಷಣೆ ಕಾರ್ಯ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದನ್ನು ಉತ್ತಮವಾಗಿ ನಿರ್ವಹಿಸಿದರೆ ಬೇರೆ ಯೋಜನೆಗಳೂ ಜಿಲ್ಲೆಗೆ ಬರಲಿದೆ
ಸಮದ್‌ ಪಟೇಲ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ಕಲಬುರಗಿ

ಏನಿದು ರಿವಾರ್ಡ್ ಯೋಜನೆ?

‘ರಿವಾರ್ಡ್’ ಎಂದು ಕರೆಸಿಕೊಳ್ಳುವ ಜಲಾನಯನ ಪ್ರದೇಶಗಳ ಅಭಿವೃದ್ಧಿ ಯೋಜನೆ ವಿಶ್ವಬ್ಯಾಂಕ್‌ ಹಣಕಾಸು ನೆರವಿನ ಕಾರ್ಯಕ್ರಮ. ಮಣ್ಣು ನೀರಿನ ಸಂರಕ್ಷಣೆ ಈ ಯೋಜನೆಯ ಗುರಿಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ರೈತರ ಆದಾಯ ಸುಧಾರಣೆಗೆ ಪೂರಕವಾಗಿ ಕಾರ್ವನಿರ್ವಹಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.