
ಕಲಬುರಗಿ: ‘ದೇಶದ ಯುವಜನರ ಶಕ್ತಿ ಕಸಿಯುತ್ತಿರುವ ಮದ್ಯದ ವಿರುದ್ಧ ಆರ್‌ಎಸ್‌ಎಸ್ ಹೋರಾಟ ನಡೆಸುವ ಅಗತ್ಯವಿದೆ’ ಎಂದು ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿಪೀಠದ ಪೀಠಾಧಿಪತಿ ಅಪ್ಪರಾವ ದೇವಿಮುತ್ಯಾ ಅಭಿಪ್ರಾಯಪಟ್ಟರು.
ಇಲ್ಲಿನ ಸೇಡಂ ರಸ್ತೆಯ ಜಯನಗರದ ಶಿವಮಂದಿರದಲ್ಲಿ ಓಂ ಉಪನಗರ ಹಿಂದೂ ಸಮ್ಮೇಳನ ಆಯೋಜನಾ ಸಮಿತಿಯು ಭಾನುವಾರ ಹಮ್ಮಿಕೊಂಡಿದ್ದ ‘ಹಿಂದೂ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಾಲು ಕುಡಿಯಬೇಕಿದ್ದ ಯುವಜನರು ಅಲ್ಕೋಹಾಲ್ ಕುಡಿದರೆ ರಾಷ್ಟ್ರಕ್ಕೆ ಶಕ್ತಿ ಹೇಗೆ ಬರುತ್ತೆ? ಆರ್‌ಎಸ್‌ಎಸ್ ಮದ್ಯ ಬಂದ್ ಮಾಡಿಸಿದರೆ, ಯುವಜನರ ರಟ್ಟೆಯಲ್ಲಿ ಶಕ್ತಿ ಉಳಿಯುತ್ತದೆ. ಹಸಿವಾದರೆ ಅನ್ನ ದಾಸೋಹ ಇರುತ್ತೆ ಎಂಬ ಮನವರಿಕೆಯಾದರಲ್ಲವೇ ಜನರು ನೆಮ್ಮದಿಯಿಂದ ಧಾರ್ಮಿಕ, ಆಧಾತ್ಮಿಕ ಚಟುವಟಿಕೆ ಪಾಲ್ಗೊಳ್ಳಬಲ್ಲರು. ಅಂತೆಯೇ ಯುವಜನರ ರಟ್ಟೆಗಳಲ್ಲಿ ಶಕ್ತಿ ಇರುವ ಮನವರಿಕೆಯಾದರಷ್ಟೇ ರಾಷ್ಟ್ರ ರಕ್ಷಣೆ ಸಾಧ್ಯ’ ಎಂದರು.
‘ಹಿಂದೂಗಳಲ್ಲಿ ಸಂಘಟನೆ ಕೊರತೆಯಿಲ್ಲ. ಆದರೆ, ನಮ್ಮಲ್ಲಿನ ದುಶ್ಚಟಗಳು ಒಬ್ಬರನ್ನು ಒಂದೊಂದು ಕಡೆಗೆ ಸೆಳೆದರೆ, ಸಂಘಟನೆ ದುರ್ಬಲವಾಗುತ್ತದೆ. ಅದೇ ದುಶ್ಚಟಗಳು ದೂರವಾದರೆ, ಎಲ್ಲರೂ ಸ್ಥಿರ ಮನಸ್ಸಿನಿಂದ ಸಂಘಟನೆಯಲ್ಲಿ ತೊಡಗಬಹುದು’ ಎಂದರು.
‘ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಗೋರಕ್ಷಣೆಗೆ ನಾವೆಲ್ಲ ಪಣತೊಡಬೇಕು. ಹಣ–ಹೆಂಡದ ಆಸೆಗೆ ಬಿದ್ದು ಮತ ಹಾಕುವುದನ್ನು ಬಿಡಬೇಕಿದೆ. ಉಪಜಾತಿ–ಪಂಗಡಗಳನ್ನು ಮನೆಗಳಿಗೆ ಸೀಮಿತಗೊಳಿಸಿ, ಹೊಸ್ತಿಲ ದಾಟಿ ಹೊರ ಬಂದರೆ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಸಾರಬೇಕು. ಆಗ ಮಾತ್ರವೇ ನಾವೂ ಬದುಕುವ ಜೊತೆಗೆ ಇನ್ನೊಬ್ಬರಿಗೂ ಆಶ್ರಯ ನೀಡಲು ಸಾಧ್ಯ’ ಎಂದರು.
‘ಭಾರತ ಇಂದಿಗೂ ಹಿಂದೂ ರಾಷ್ಟ್ರವಾಗಿ ಘೋಷಣೆ ಆಗಿಲ್ಲ. ಭಾರತ ಇಂದಿಗೂ ಜಾತ್ಯತೀತ ರಾಷ್ಟ್ರ. ಮುಂದಿನ 50 ವರ್ಷಗಳ ಕಾಲ ಹಿಂದೂಗಳು ಹೀಗೆಯೇ ಕೈಕಟ್ಟಿ ಕುಳಿತರೆ, ಭಾರತವೂ ಗಲ್ಫ್ ರಾಷ್ಟ್ರಗಳಂಥ ಸ್ಥಿತಿ ಎದುರಿಸಲಿದೆ’ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಆರ್‌ಎಸ್‌ಎಸ್ ಕಲಬುರಗಿ ನಗರ ವಕ್ತಾರ ನಾಗಪ್ಪ ಮೈಲಬಾರ, ‘ಅಹಿಂಸಾ ಪರಮೋಧರ್ಮ ಎನ್ನುತ್ತ ಹಿಂದೂಗಳು ಮೈಮರೆಯುತ್ತಿದ್ದಾರೆ. ಅಧರ್ಮದ ಕೈ ಮೇಲೆ ಆದಾಗ ಧರ್ಮ ಮೈಕೊಡವಿ ನಿಲ್ಲಬೇಕು. ಈ ವಿಷಯದಲ್ಲಿ ಶ್ರೀರಾಮ, ಶ್ರೀಕೃಷ್ಣ ಸೇರಿದಂತೆ ಹಿಂದೂ ದೇವತೆಗಳು ನಮಗೆ ಮಾದರಿಯಾಗಬೇಕು’ ಎಂದರು.
ಕುಸನೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗುರುಪೀಠದ ಪೀರಪ್ಪ ಮುತ್ಯಾ, ಮುಖಂಡರಾದ ಪ್ರವೀಣ ಕುಲಕರ್ಣಿ, ನಾಗರಾಜ ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಓಂನಗರದ ಹನುಮಾನ ದೇವಸ್ಥಾನದಿಂದ ಜಯನಗರದ ಶಿವಮಂದಿರದ ತನಕ ಭಾರತ ಮಾತೆಯ ಚಿತ್ರದ ಶೋಭಾಯಾತ್ರೆ ನಡೆಯಿತು.
ನಾವೆಲ್ಲ ಹಿಂದೂಗಳು ಈಗಲೇ ಜಾಗೃತರಾಗಬೇಕು. ಇಲ್ಲದಿದ್ದರೆ ಮುಂದೆಂದೂ ಜಾಗೃತರಾಗಲು ಸಾಧ್ಯವೇ ಇಲ್ಲಲಿಂಗರಾಜ ಸಿರಗಾಪುರ ಅಧ್ಯಕ್ಷ ಓಂ ಉಪನಗರದ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.