ADVERTISEMENT

ವಿವಿಧ ಬೇಡಿಕೆ; ನಗರದಲ್ಲಿ ಸರಣಿ ಪ್ರತಿಭಟನೆ

ವೃಂದ ನೇಮಕಾತಿ ತಡೆ ತೆರವುಗೊಳಿಸಲು ಆಗ್ರಹ, ಕೋವಿಡ್‌ ತಪಾಸಣೆ ನೆಪದಲ್ಲಿ ಸುಲಿಗೆ– ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:03 IST
Last Updated 9 ಜುಲೈ 2020, 16:03 IST
ಕಲಬುರ್ಗಿಯಲ್ಲಿ ಗುರುವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು
ಕಲಬುರ್ಗಿಯಲ್ಲಿ ಗುರುವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಐದು ಸಂಘಟನೆಗಳು ನಗರದ ವಿವಿಧೆಡೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಬಿ.ಶರತ್‌ ಅವರ ಮೂಲಕ ಕೇಂದ್ರ ಸರ್ಕಾರ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದವು.

ಬಾಡಿಗೆ ಮನ್ನಾಗೆ ಆಗ್ರಹ

ಕೋವಿಡ್‌ ಉಪಟಳದಿಂದಾಗಿ ಬಸ್‌ ನಿಲ್ದಾಣದ ಮಳಿಗೆಗಳಲ್ಲಿ ವ್ಯಾಪಾರವೇ ನಡೆಯುತ್ತಿಲ್ಲ. ಉಪಾಹಾರಗೃಹ ಮತ್ತು ವಾಣಿಜ್ಯ ಮಳಿಗೆಗಳನ್ನು ಇಟ್ಟುಕೊಂಡವರು ತೀವ್ರ ಹಾನಿ ಅನುಭವಿಸುತ್ತಿದ್ದಾರೆ. ಕಾರಣ ಆರು ತಿಂಗಳ ಬಾಡಿಗೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿ, ವ್ಯಾಪಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ADVERTISEMENT

ಲಾಕ್‌ಡೌನ್‌ ಸಂದರ್ಭದಲ್ಲಿ ಮೂರು ತಿಂಗಳು ಒಂದು ಬಿಡಿಗಾಸಿನ ವ್ಯಾಪಾರವೂ ಆಗಿಲ್ಲ. ಲಾಕ್‌ಡೌನ್‌ ತೆರವಾಗಿ ಒಂದೂವರೆ ತಿಂಗಳು ಕಳೆದರೂ ಬಸ್‌ ನಿಲ್ದಾಣಗಳತ್ತ ಜನರು ಬರುತ್ತಿಲ್ಲ. ಹೋಟೆಲ್‌, ಮಳಿಗೆಗಳಲ್ಲಿ ಕನಿಷ್ಠ ವ್ಯಾಪಾರವೂ ಸಾಧ್ಯವಾಗದೇ, ದಿನೇದಿನೇ ನಷ್ಟವಾಗುತ್ತಿದೆ. ಮಳಿಗೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಎರಡು ತಿಂಗಳಿಂದ ಸಂಬಳ ಕೊಡಲಾಗಿಲ್ಲ. ಇಂಥ ಸಂದರ್ಭದಲ್ಲಿ ಬಾಡಿಗೆ ಕಟ್ಟಲು ಆಗುವುದಿಲ್ಲ. ಆದ್ದರಿಂದ ಲಾಕ್‌ಡೌನ್‌ ಸಂದರ್ಭವಲ್ಲದೇ, ಮುಂದಿನ ಆರು ತಿಂಗಳ ಬಾಡಿಗೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಮಿಲಿತ್‌ ಹೆಗ್ಡೆ, ಕನಿಷ್ಕ ಧನ್ನಿ, ಸಂದೀಪ ಶೆಟ್ಟಿ, ಲೋಕೇಶ, ಪರಶುರಾಮ, ಶ್ರೀಶೈಲ, ವಿದ್ಯಾಧರ ಶೆಟ್ಟಿ, ಪಂಡೀತ್‌, ಬಸವರಾಜ ಪಾಟೀಲ, ಮಹಾಂತೇಶ, ಅಭಿಜಿತ್‌ ಇದ್ದರು.

ಅಂಬೇಡ್ಕರ್‌ ನಿವಾಸದ ಮೇಲೆ ದಾಳಿಗೆ ಖಂಡನೆ

ಮುಂಬೈನ ದಾದರ್‌ನಲ್ಲಿರುವ ಡಾ.ಅಂಬೇಡ್ಕರ್ ಅವರ ‘ರಾಜಗೃಹ ನಿವಾಸ’ದ ಮೇಲೆ ದಾಳಿ ಮಾಡಿದವರನ್ನು ದೇಶದ್ರೋಹ ಪ್ರಕರಣದ ಅಡಿ ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬುಧವಾರ ಗುಂಪಾಗಿ ಬಂದು ದಾಳಿ ನಡೆಸಿದ ಕಿಡಿಗೇಡಿಗಳು ಅಂಬೇಡ್ಕರ್‌ ನಿವಾಸದಲ್ಲಿನ ಮಹತ್ವದ ವಸ್ತುಗಳನ್ನು ನಾಶ ಮಾಡಿದ್ದಾರೆ. ದೇಶದ ಮಹಾನ್‌ ನಾಯಕರಿಗೆ ಈ ರೀತಿ ಅವಮಾನ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇಂಥ ಕ್ರೂರ ಮನಸ್ಥಿತಿ ಇರುವವರನ್ನು ಸರ್ಕಾರ ರಕ್ಷಣೆ ಮಾಡಬಾರದು. ಮಹಾನ್‌ ಮಾನವಾತಾವಾದಿ ಮನೆ ಮೇಲಿನ ಈ ದಾಳಿ, ಇಡೀ ದೇಶವೇ ತಲೆ ತಗ್ಗಿಸುವಂಥದ್ದು. ಕೇಂದ್ರ ಸರ್ಕಾರ ಕೂಡಲೇ ಬಿಗಿ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಆಗುತ್ತದೆ ಎಂದೂ ಪ್ರತಿಭಟನಾಕಾರರು ದೂರಿದರು.

ಹಿರಿಯ ಮುಖಂಡರಾದ ಡಾ.ವಿಠಲ ದೊಡ್ಡಮನಿ, ದೇವೇಂದ್ರ ಸಿನೂರ, ಹಣಮಂತ ಬೋಧನಕರ, ಲಕ್ಷ್ಮಿಕಾಂತ ಕಂಬಳಿ, ದಿನೇಶ ದೊಡ್ಡಮನಿ ನೇತೃತ್ವ ವಹಿಸಿದ್ದರು.

ವೃಂದ ನೇಮಕಾತಿ ತಡೆಗೆ ವಿರೋಧ

ಕೋವಿಡ್‌ ನೆಪದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವೃಂದ ನೇಮಕಾತಿ, ಬ್ಯಾಕ್‌ಲಾಗ್‌ ಹಾಗೂ ನೇರ ನೇಮಕಾತಿಗಳನ್ನು ತಡೆ ಹಿಡಿದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸರ್ಕಾರವು ಪೂರ್ವ ನಿಯೋಜಿತವಾಗಿ ಕ್ರಮ ಕೈಗೊಂಡು ಕೋವಿಡ್‌ ನಿಯಂತ್ರಣ ಮಾಡಲಿಲ್ಲ. ಅದರ ಪರಿಣಾಮ ಉಂಟಾದ ಆರ್ಥಿಕ ಹೊರೆಯನ್ನು ಕಲ್ಯಾಣ ಕರ್ನಾಟಕ ಭಾಗದ ಜನರ ಮೇಲೆ ಹೇರುವುದು ಯಾವ ನ್ಯಾಯ? ಕೋವಿಡ್‌ನಿಂದ ಆರ್ಥಿಕ ನಷ್ಟ ಉಂಟಾದರೆ, ಸಂಪನ್ಮೂಲಗಳ ಕ್ರೂಢೀಕರಣ ಮಾಡಿ ಸರಿದೂಗಿಸಬೇಕು. ಅದನ್ನು ಬಿಟ್ಟು ಸರ್ಕಾರದ ಹೊರೆಯನ್ನು ಜನರ ಮೇಲೆ ಹಾಕಿದರೆ ಹೇಗೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಹೈದರಾಬಾದ್‌ ಕರ್ನಾಟಕ ಎಂಬ ಹೆಸರನ್ನು ಮಾತ್ರ ಬದಲಾಯಿಸಿದ್ದಾರೆ. ಅದಕ್ಕೆ ಬೇಕಾದ ಯಾವ ಸೌಲಭ್ಯವನ್ನೂ ನೀಡಿಲ್ಲ. 371ಜೆ ಕೂಡ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲೂ ನಿರ್ಲಕ್ಷ್ಯ ಮಾಡಲಾಗಿದೆ. ಮುಖ್ಯಮಂತ್ರಿಗಳ ಉದ್ದೇಶ ಏನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತಡೆ ಹಿಡಿದ ನೇಮಕಾತಿಗಳನ್ನು ಕೂಡಲೇ ಮರು ಆರಂಭಿಸಬೇಕು. ಉಲ್ಲದಿದ್ದರೆ ನಿರಂತರ ಹೋರಾಟ ಎದುರಿಸಬೇಕಾಗುತ್ತದೆ ಎಂದೂ ದೂರಿದರು.

ವೇದಿಕೆಯ ಕಲ್ಯಾಣ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟಿಕಾರ, ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಎಂ. ಕಮ್ಮಾರ, ಗೌರವಾಧ್ಯಕ್ಷ ಮಂಜು ಕುಸನೂರ, ನಗರ ಘಟಕದ ಅಧ್ಯಕ್ಷ ಶಂಭು ಶಹಾಬಾದ್‌ಕರ, ಅಂಬರೀಶ ಶಹಾಬಾದ್‌ಕರ, ಶರಣು ಕಟ್ಟಿಮನಿ, ಮಂಜುನಾಥ ಭಾಜಿ, ಶಫೀಕ್‌ ನೇತೃತ್ವ ವಹಿಸಿದ್ದರು.

ಖಾಸಗಿ ಆಸ್ಪತ್ರೆಗಳಿಂದ ಸುಲಿಗೆ: ಆಕ್ರೋಶ

ಕೋವಿಡ್‌ ತಪಾಸಣೆಗೆ ಗಂಟಲು ಹಾಗೂ ರಕ್ತದ ಮಾದರಿ ಪಡೆಯಲು ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಆದ್ದರಿಂದ ಸರ್ಕಾರವೇ ಮಾದರಿಗಳ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಖಾಸಗಿ ಆಸ್ಪತ್ರೆಗಳು ಮಾದರಿ ತಪಾಸಣೆ ಅನುಮತಿ ನೀಡಿದ್ದನ್ನೇ ನೆಪ ಮಾಡಿಕೊಂಡಿವೆ. ಮಳೆಗಾಲದಲ್ಲಿ ಸಣ್ಣ ಕೆಮ್ಮು, ಶೀತ, ಜ್ವರಗಳು ಸಾಮಾನ್ಯ. ಆದರೆ, ಎಲ್ಲದಕ್ಕೂ ಕೋವಿಡ್‌ ಪರೀಕ್ಷೆ ಎಂದು ಹೆದರಿಸುತ್ತ ಹಣ ವಸೂಲಿ ಮಾಡುತ್ತಿವೆ. ಆದ್ದರಿಂದ ಇಎಸ್‌ಐ ಆಸ್ಪತ್ರೆಯಲ್ಲೇ ಇನ್ನಷ್ಟು ಕೇಂದ್ರಗಳನ್ನು ತೆರೆದು ಮಾದರಿ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪುನೀತರಾಜ ಸಿ. ಕವಡೆ, ಶರಣು ಪೂಜಾರಿ, ಗೌರಿ ಪರೀಟ್‌, ಶ್ರೀಶೈಲ ಕಣ್ಣೂರ, ಸಂತೋಷ, ಮಲ್ಲು ಪೂಜಾರಿ ಇದ್ದರು.

ರಾಜ್ಯ ಸರ್ಕಾರದಿಂದ ‘ಕೋವಿಡ್‌’ ಭ್ರಷ್ಟಾಚಾರ: ಆಕ್ರೋಶ

ಕಲಬುರ್ಗಿ: ಕೋವಿಡ್‌–19 ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿಗಳ ಹಗರಣ ನಡೆಸಿದೆ. ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೇವೆ ಎಂಬುದನ್ನು ಕೂಡಲೇ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

‘ರಾಜ್ಯ ಸರ್ಕಾರ ಈವರೆಗೆ ಕೋವಿಡ್‌ಗಾಗಿ ₹ 3392 ಕೋಟಿ ವೆಚ್ಚ ಮಾಡಿದ್ದಾಗಿ ಹೇಳಿಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಇದರ ವಿವರ ಕೇಳಿದರೆ ‘ಇನ್ನೂ ಆಡಿಟ್‌ ಆಗಬೇಕು’ ಎಂಬ ಹಾರಿಕೆ ಉತ್ತರ ನೀಡುತ್ತಿದೆ. ಇದು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದು ಮುಖಂಡರು ದೂರಿದರು.

‘₹ 78ಕ್ಕೆ ಸಿಬಹುದಾದ ಒಂದು ಚಿಕ್ಕ ಸ್ಯಾನಿಟೈಸರ್‌ ಬಾಟಲಿಗೆ ₹ 600, ₹ 3,600ಕ್ಕೆ ಸಿಗುವ ಥರ್ಮಲ್‌ ಸ್ಕ್ಯಾನ್‌ಗೆ ₹ 9,000 ಭರಿಸಿ ಖರೀದಿ ಮಾಡಲಾಗಿದೆ. ರಾಜ್ಯದಲ್ಲಿ 81 ಲಕ್ಷ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ತಲಾ ₹ 250 ಖರ್ಚು ಆಗಬಹುದು. ಆದರೆ, ರಾಜ್ಯ ಸರ್ಕಾರ ₹ 1,650ರವರೆಗೂ ಒಂದೊಂದು ಕಿಟ್‌ ತಯಾರಿಸಿದ್ದನ್ನು ಹೇಳಿಕೊಂಡಿದೆ. ಯಾವ ಲೆಕ್ಕದಲ್ಲಿ ಇಷ್ಟೊಂದು ಖರ್ಚು ಮಾಡಿದ್ದಾರೆ ಎಂಬುದನ್ನು ಲೆಕ್ಕ ಹಾಕಿದರೆ ಭ್ರಮಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ’ ಎಂದೂ ಮುಖಂಡರು ಆಕ್ರೋಶ ಹೊರಹಾಕಿದರು.

ಜನರು ಕೋವಿಡ್‌ನಿಂದ ತತ್ತರಿಸುವ ಸಂದರ್ಭವನ್ನೂ ಭ್ರಷ್ಟಾಚಾರಕ್ಕೆ ಬಳಸಿಕೊಂಡ ಸಚಿವರು, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದರು

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್‌ ದಸ್ತಗೀರ್‌, ಪ್ರಧಾನ ಕಾರ್ಯದರ್ಶಿ ಡಾ.ರಿಜ್ವಾನ್‌ ಅಹ್ಮದ್‌, ಕಾರ್ಯದರ್ಶಿ ಸಯ್ಯದ್‌ ಅಲೀಮ್‌ ಎಲಾಹಿ, ಸಯ್ಯದ್ ಜಕೀರ್‌, ಸೈದುದ್ದೀನ್‌ ಫಾರೂಕ್‌, ಎಸ್‌ಡಿಪಿಯು ರಾಜ್ಯ ಸಮಿತಿ ಅಧ್ಯಕ್ಷ ಅಬ್ದುಲ್‌ ರಹೀಮ್‌ ಪಟೇಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.