ADVERTISEMENT

ಕಾಳಗಿ ತಾಲ್ಲೂಕಿಗೆ ಏಳು ಕೆಪಿಎಸ್ ಮಂಜೂರು

ಗುಂಡಪ್ಪ ಕರೆಮನೋರ
Published 21 ಡಿಸೆಂಬರ್ 2025, 6:36 IST
Last Updated 21 ಡಿಸೆಂಬರ್ 2025, 6:36 IST
ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಇನ್ಮುಂದೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಡಲಿದೆ
ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಇನ್ಮುಂದೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಡಲಿದೆ   

ಕಾಳಗಿ: ಒಂದೇ ಸೂರಿನಡಿಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ (ಪಿಯುಸಿ) ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಉತ್ತಮ ಪಡಿಸಲು ಮತ್ತು ದಾಖಲಾತಿ ಹೆಚ್ಚಳಕ್ಕೆ ಸುಧಾರಣಾತ್ಮಕ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಕಾಳಗಿ ತಾಲ್ಲೂಕಿಗೆ ಹೊಸದಾಗಿ 7 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿದೆ.

ಇಂಥ ಶಾಲೆಯೊಂದು ಆಗಲೇ ಮಾಡಬೂಳ ಗ್ರಾಮದಲ್ಲಿ 2018-19ರಲ್ಲಿ ಪ್ರಾರಂಭವಾಗಿದ್ದು, ತಾಲ್ಲೂಕಿನಲ್ಲಿ ಈಗ ಅವುಗಳ ಸಂಖ್ಯೆ 8ಕ್ಕೆ ಏರಿದಂತಾಗಿದೆ. ಅತಿಹೆಚ್ಚು ದಾಖಲಾತಿ ಹೊಂದಿರುವ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 1 ಎಕರೆ ಜಮೀನು ಲಭ್ಯವಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ರಾಜ್ಯ ಆಯವ್ಯಯದ ಅನುದಾನ ಮತ್ತು 2025-27ರ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ರುಮ್ಮನಗೂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 15 ಅಕ್ಟೋಬರ್ 2025ರಂದು ಆದೇಶಿಸಿದೆ.

ADVERTISEMENT

ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಡಿ 6 ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಗುರುತಿಸಿ ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಯೋಜನಾ ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ 29 ನವೆಂಬರ್ 2025ರಂದು ಆದೇಶ ಹೊರಡಿಸಿದ್ದಾರೆ.

ಪರಿಣಾಮ ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಸಾಲಹಳ್ಳಿ, ಬೆಡಸೂರ, ಗಡಿಕೇಶ್ವಾರ, ಕಲಗುರ್ತಿ ಮತ್ತು ಕೋರವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೋಡ್ಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕೆಪಿಎಸ್ ಆಗಿ ಮರುಸ್ಥಾಪನೆಯಾಗಲಿವೆ.

ಇನ್ಮುಂದೆ ಈ ಶಾಲೆಗಳಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮದ ಬೋಧನೆ. 6ರಿಂದ 10ನೇ ತರಗತಿವರೆಗೆ ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು. 10ನೇ, 12ನೇ ತರಗತಿಯಲ್ಲಿ ನಿರ್ಗಮನ ಆಯ್ಕೆಗಳನ್ನು ಒದಗಿಸಲು ಕ್ರಿಯಾಶೀಲ ಉತ್ತಮ ಗುಣಮಟ್ಟದ ಕಲಿಕಾ ಪದ್ಧತಿಗಳನ್ನು ಅಳವಡಿಸಿ ಭವಿಷ್ಯದ ವೃತ್ತಿಪರ ತರಬೇತಿಗಳು ನಡೆಯಲಿವೆ.

ಈ ಎಲ್ಲ ಶಾಲೆಗಳಿಗೆ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರದ ಈ ನಿರ್ಧಾರ ಪ್ರಸ್ತಾಪಿತ ಶಾಲೆಗಳ ಗ್ರಾಮಸ್ಥರಿಗೆ ಖುಷಿ ತಂದಿದೆ.

ಶಶಿಧರ ಬಿರಾದಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪುರ
ಸರ್ಕಾರದ ಈ ನಿರ್ಧಾರದಿಂದಾಗಿ ಕೆಪಿಎಸ್ ಶಾಲೆಗಳು ಸುತ್ತಲಿನ ಗ್ರಾಮಗಳಿಗೆ ದೊಡ್ಡ ಶಾಲೆಗಳಾಗಿ ಹೊರಹೊಮ್ಮುತ್ತವೆ. ಪ್ರಾಥಮಿಕ ಇದ್ದಲ್ಲಿ ಪ್ರೌಢ ಪ್ರೌಢ ಇದ್ದಲ್ಲಿ ಕಾಲೇಜು ಆಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿವೆ
ಶಶಿಧರ ಬಿರಾದಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.