ಕಲಬುರಗಿ: ಗುರುವಾರ ರಾತ್ರಿ ಶಿವೈಕ್ಯರಾದ ಶರಣ ಬಸವೇಶ್ವರ ಮಹಾಸಂಸ್ಥಾನದ ಎಂಟನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಶುಕ್ರವಾರ ಸೂರ್ಯೋದಯಕ್ಕೂ ಮುನ್ನವೇ ಭಕ್ತರು ಪ್ರವಾಹೋಪಾದಿಯಲ್ಲಿ ಶರಣಬಸವೇಶರ ಸಂಸ್ಥಾನಕ್ಕೆ ಹರಿದು ಬಂದರು.
ಶರಣ ಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯ ಎದುರಿನ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪುಷ್ಪಾಲಂಕೃತ ಮಂಟಪ ನಿರ್ಮಿಸಿ ಶರಣ ಬಸವಪ್ಪ ಅವರ ಪಾರ್ಥಿವ ಇರಿಸಲಾಗಿದೆ.
ಮಂಟಪದ ಪಕ್ಕದಲ್ಲಿ ಅಪ್ಪ ಅವರ ಪತ್ನಿ ದಾಕ್ಷಾಯಣಿ ಎಸ್ ಅಪ್ಪ, ಅವರ ಪುತ್ರಿಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಅವರ ಹತ್ತಿರ ಸಂಬಂದಿಗಳು ಆಸೀನರಾಗಿದ್ದಾರೆ.
ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಶರಣಬಸವಪ್ಪ ಅಪ್ಪ ಅವರ 'ಪ್ರಸಾದಿ' ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಯಿತು.
ಬೆಳಿಗ್ಗೆಯೇ ಶಾಸಕ ಅಲ್ಲಮಪ್ರಭು ಪಾಟೀಲ, ಶರಣು ಮೋದಿ ಸೇರಿದಂತೆ ಹಲವು ಗಣ್ಯರು ದರ್ಶನ ಪಡೆದರು.
ಶರಣ ಬಸವೇಶ್ವರ ದೇವಸ್ಥಾನದ ಅಂತಿಮ ದರ್ಶನಕ್ಕಾಗಿ ಪುರುಷರು ಹಾಗೂ ಮಹಿಳೆಯರಿಗೆ ಸುಸಜ್ಜಿತ ಬ್ಯಾರಿಕೇಡ್ ಹಾಕಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಎದುರಿನ ಜಾತ್ರಾ ಮೈದಾನದಲ್ಲಿ ಭಕ್ತರಿಗೆ ಅನ್ನ, ನೀರಿನ ವ್ಯವಸ್ಥೆ ಮಾಡಲಾಗಿದೆ.
ಅಂತಿಮದರ್ಶನಕ್ಕೆ ಲಕ್ಷಾಂತರ ಭಕ್ತರು ಹರಿದು ಬರುವ ನಿರೀಕ್ಷೆಗಳಿದ್ದು, ಭಕ್ತರ ದಟ್ಟಣೆ ನಿರ್ವಹಣೆಗಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.