ADVERTISEMENT

ಕಲಬುರಗಿ| ಮಕ್ಕಳಿಗೆ ಧರ್ಮದ ಸಂಸ್ಕೃತಿ, ಆಚರಣೆ ತಿಳಿಹೇಳಿ: ಡಾ.ಶರಣಪ್ರಕಾಶ ಪಾಟೀಲ

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ: ಕಂಚಿನ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:12 IST
Last Updated 2 ಮಾರ್ಚ್ 2026, 6:12 IST
<div class="paragraphs"><p>ಕಲಬುರಗಿಯ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಗಣ್ಯರು ರೇಣುಕಾಚಾರ್ಯರ ಕಂಚಿನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು&nbsp;&nbsp;&nbsp;&nbsp;&nbsp;&nbsp;</p></div>

ಕಲಬುರಗಿಯ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಗಣ್ಯರು ರೇಣುಕಾಚಾರ್ಯರ ಕಂಚಿನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು      

   

ಪ್ರಜಾವಾಣಿ ಚಿತ್ರ

ಕಲಬುರಗಿ: ‘ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕರು ಪಾಶ್ಚಾತ್ಯ ದೇಶಗಳ ಸಂಸ್ಕೃತಿಗೆ ಒಳಗಾಗಿ ಧರ್ಮವನ್ನು, ಧರ್ಮದ ಆಚರಣೆಗಳನ್ನು ಮರೆಯುತ್ತಿದ್ದಾರೆ. ಕಾರಣ, ಅವರಿಗೆ ನಮ್ಮ ಧರ್ಮದ ಸಂಸ್ಕೃತಿ, ಆಚರಣೆಗಳನ್ನು ತಿಳಿಹೇಳಬೇಕಾದ ಅವಶ್ಯಕತೆ ಇದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ADVERTISEMENT

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ‌ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಲಿಂಗ ಕಟ್ಟುವುದನ್ನು, ಲಿಂಗಪೂಜೆ ಮಾಡುವುದನ್ನು ಕಲಿಸಬೇಕು. ನಮ್ಮ ಪರಂಪರೆಯನ್ನು ಹೇಳಿಕೊಡಬೇಕು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಹೇಳಲೇಬೇಕು. ಪಾಲಕರು ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಸಂಸ್ಕೃತಿ ಕೂಡ ಕೊಡಬೇಕು’ ಎಂದರು.

‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಪಂಚಪೀಠಗಳು ಸಾರಿದರೆ, ಬಸವಾದಿ ಶರಣರು ಸಕಲ ಜೀವಾತ್ಮರಿಗೆ ಲೇಸು ಬಯಸಿದರು. ವೀರಶೈವ ಲಿಂಗಾಯತ ಧರ್ಮದ ಪರಂಪರೆಯು ಸಾವಿರಾರು ವರ್ಷಗಳಿಂದ ಜನರಲ್ಲಿ ಭಕ್ತಿಭಾವ ಮೂಡಿಸಿ, ಮನುಷ್ಯನ ಜನ್ಮ ಪರಮಾತ್ಮನ ಅನುಗ್ರಹ ಪಡೆಯಲು ಬಂದಿದೆ ಎಂಬ ತಿಳಿವಳಿಕೆ ಕೊಡುತ್ತಾ ಬಂದಿದೆ. ಹಾಗಾಗಿ, ನಾಡಿನಲ್ಲಿ ಶಾಂತಿ, ಸುವ್ಯವಸ್ಥೆ ಇದೆ’ ಎಂದರು.

‘ಜಗದ್ಗುರು ರೇಣುಕಾಚಾರ್ಯರು ತಮ್ಮ ವಚನಗಳಲ್ಲಿ ಮತ್ತು ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಜನರಿಗೆ ಸರಿಮಾರ್ಗ ತೋರಿದ್ದಾರೆ. ಮುಂದಿನ ಪೀಳಿಗೆಗೆ ಸಿದ್ಧಾಂತ ಶಿಖಾಮಣಿ, ವಚನ ಸಾಹಿತ್ಯವನ್ನು ಪರಿಚಯಿಸುವ ಅಗತ್ಯ ಇದೆ. ಎಲ್ಲ ಸಮಾಜದ ಜನರನ್ನು ಅಪ್ಪಿಕೊಳ್ಳುವುದು, ಪ್ರೀತಿ–ವಿಶ್ವಾಸದಿಂದ ಕಾಣುವುದು ವೀರಶೈವ ಧರ್ಮದ ಮೂಲ ಆಗಿದೆ’ ಎಂದು ತಿಳಿಸಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ರೇಣುಕಾಚಾರ್ಯರ ಮೂರ್ತಿ ಅನಾವರಣಕ್ಕೆ ಸೂಕ್ತ ಜಾಗ, ಸಮಾಜಕ್ಕೆ ಸಿಎ ಸೈಟ್‌ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗೋಣ. ನಿಮ್ಮೊಂದಿಗೆ ನಾನೂ ಬರುತ್ತೇನೆ’ ಎಂದು ಹೇಳಿದರು.

‘10ನೇ ಶತಮಾನದಲ್ಲಿ ರೇಣುಕಾಚಾರ್ಯರು ದೇವಮಾನವರಾಗಿ ಜನ್ಮತಾಳಿ ಸಮಾಜದಲ್ಲಿ ಸಮಾನತೆ, ಎಲ್ಲರೂ ಒಂದಾಗಿ ಸಾಗುವ ಸಂದೇಶ ಕೊಟ್ಟರು. ನಂತರದಲ್ಲಿ ಬಸವಾದಿ ಶರಣರು ಕೂಡ ಸರ್ವರಲ್ಲಿ ಸಮಾನತೆ ತರುವ ಪ್ರಯತ್ನ ಮಾಡಿದರು. ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಕಾನೂನು ರೂಪದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸಿದರು’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎಸ್.ಎಂ. ಹಿರೇಮಠ ವಿಶೇಷ ಉಪನ್ಯಾಸ ನೀಡಿದರು. ಸಲಗರದ ಸಾಂಬಶಿವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಂ.ವೈ. ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಶಿವಪ್ರಭು ಹಿರೇಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಜಿಲ್ಲಾ ಜಂಗಮ ಸಮಾಜದ ಬಸವರಾಜ ಮಠಪತಿ ಕಮಲಾಪುರ, ಡಾ.ಸುಧಾ ಹಾಲಕೈ, ಜ್ಯೋತಿ ಹಿರೇಮಠ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ.ನಾಸಿ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು. ಇದಕ್ಕೂ ಮುನ್ನ ಚೌಕ್‌ ಪೊಲೀಸ್‌ ಠಾಣೆಯಿಂದ ರಂಗಮಂದಿರದವರೆಗೆ ರೇಣುಕಾಚಾರ್ಯರ ಕಂಚಿನ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ರೇಣುಕಾಚಾರ್ಯರ ಕಂಚಿನ ಮೂರ್ತಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ–ಕಳಸದೊಂದಿಗೆ ಪಾಲ್ಗೊಂಡಿದ್ದರು.

ಧರ್ಮವನ್ನು ಕೇವಲ ಒಂದು ಜಾತಿಗೆ ಅಥವಾ ಪದ್ಧತಿಗೆ ಸೀಮಿತಗೊಳಿಸಬಾರದು. ಧರ್ಮ ಎಂದರೆ ಬದುಕಿನ ಹಾದಿ. ರೇಣುಕಾಚಾರ್ಯರು ಸಾರಿದ ಶಾಂತಿ ಮತ್ತು ಸಹಬಾಳ್ವೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ
ಎಂ.ವೈ.ಪಾಟೀಲ ಶಾಸಕ

‘ರಟಕಲ್‌ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪತ್ರ’

‘ರಟಕಲ್‌ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಜಿಲ್ಲೆಯಲ್ಲಿಯೇ ಅತಿಹೆಚ್ಚು ಆದಾಯ ಬರುತ್ತದೆ. ಅಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಭಕ್ತರ ಕೋರಿಕೆಯಂತೆ ರಟಕಲ್‌ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು. ‘ಜಂಗಮ ಸಮಾಜಕ್ಕೆ ಸಿಎ ಸೈಟ್‌ ಕೊಡಿಸಲು ಪ್ರತ್ನಿಸುತ್ತೇನೆ ಮತ್ತು ಜಂಗಮ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಇರುವ ಅವಕಾಶಗಳನ್ನು ಪರಿಶೀಲಿಸಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.