ADVERTISEMENT

ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ:

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 14:46 IST
Last Updated 7 ನವೆಂಬರ್ 2021, 14:46 IST
ಶೇಖರಗೌಡ ಮಾಲಿಪಾಟೀಲ
ಶೇಖರಗೌಡ ಮಾಲಿಪಾಟೀಲ   

ಕಲಬುರಗಿ: ‘ಅಧ್ಯಕ್ಷನಾಗಿ ಆಯ್ಕೆಯಾದರೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಪರಿಷತ್ತಿನ ನಿಬಂಧನೆಯಲ್ಲಿರುವಂತೆ ಕನ್ನಡ ಶಾಲೆಗಳ ಸ್ಥಾಪನೆ, ಪ್ರತಿವರ್ಷ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಸಾಹಿತ್ಯ ಸಾಂಸ್ಕೃತಿಕ ಸಮಾವೇಶಗಳನ್ನು ಆಯೋಜಿಸಲಾಗುವುದು’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶೇಖರಗೌಡ ಮಾಲಿಪಾಟೀಲ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸುಮಾರು 3.10 ಲಕ್ಷ ಕಸಾಪ ಮತದಾರರಿದ್ದು, ಕಲ್ಯಾಣ ಕರ್ನಾಟಕದಲ್ಲಿ ಸುಮಾರು 65ಕ್ಕೂ ಸಾವಿರ ಹೆಚ್ಚು ಕಸಾಪ ಮತದಾರರಿದ್ದಾರೆ. ಎಲ್ಲರೂ ನನ್ನ ಬಗ್ಗೆ ಒಲವು ತೋರಿಸಿದ್ದಾರೆ’ ಎಂದು ಹೇಳಿದರು.

‘ಪರಿಷತ್ತಿನ ಹಿಂದಿನ ಅಧ್ಯಕ್ಷರ ಕೈಗೊಂಡ ಯೋಜನೆಗಳನ್ನು ಮುಂದುವರಿಸುವುದರ ಜತೆಗೆ ವಚನ ಸಾಹಿತ್ಯ, ದಾಸ ಸಾಹಿತ್ಯ, ಮಹಿಳಾ ಸಾಹಿತ್ಯ ಸಮಾವೇಶ ಆಯೋಜಿಸಲಾಗುವುದು. ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಹಳಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದು, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಅಪರೂಪದ ಮೌಲಿಕ ಗ್ರಂಥಗಳ ಮರುಮುದ್ರಣ ಮಾಡಲಾಗುವುದು. ಹೊರನಾಡು–ಹೊರಪ್ರದೇಶ ಕನ್ನಡಿಗರ ಉತ್ತಮ ಕೃತಿಗಳ ಪ್ರಕಟಣೆ ಮಾಡಲು ವಿಶೇಷ ಯೋಜನೆ ಜಾರಿ ಮಾಡಲಾಗುವುದು. ಪರಿಷತ್ತಿನ ಪ್ರಕಟಣೆಗಳ ಡಿಜಿಟಲೀಕರಣ ಹಾಗೂ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳ ಆನ್‌ಲೈನ್ ಮಾರಾಟ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ರಾಜ್ಯದಾದ್ಯಂತ ಎಲ್ಲ ಕಡೆ ಹೋಗಿದ್ದ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮತದಾರರು ಒಳ್ಳೆಯ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

‘ಗೊ.ರು. ಚನ್ನಬಸಪ್ಪ ಅವರಿಗೆ ಸುಮಾರು 94 ವರ್ಷ ವಯಸ್ಸಾಗಿದೆ. ಆದರೂ ಕನ್ನಡ ನುಡಿ ಸೇವೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅಂತಹ ಹಿರಿಯರಿಂದ ಸ್ಫೂರ್ತಿ ಪಡೆದು ನಾನು ಕನ್ನಡವನ್ನು ಅನ್ನದ ಭಾಷೆಯಾಗಿಸಲು ನಿರಂತರವಾಗಿ ಶ್ರಮಿಸುವೆ’ ಎಂದರು.

ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ, ಮೈಕೊ ಕನ್ನಡ ಬಳಗದ ಮಾಜಿ ಅಧ್ಯಕ್ಷ ಎನ್.ಶಿವಕುಮಾರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.