ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಕಲಬುರಗಿಯಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಸೇರಿದ ಜನ.
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಕಾಗಿನೆಲೆ ಗುರುಪೀಠ ಮಾಡಿದ್ದು ನಾವು. ಇಡೀ ರಾಜ್ಯ ಸುತ್ತಿದವನು ನಾನು. ಇನ್ಯಾರೋ ಹೆಸರು ತೆಗೆದುಕೊಳ್ಳಲು ಹೊರಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಬುಧವಾರ ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳ ಮೂಲಕ ಹಿಂದುಳಿದವರಿಗೆ ಶಿಕ್ಷಣ ಕೊಡಿಸಲು 1992ರಲ್ಲಿ ಮಠ ಸ್ಥಾಪಿಸಲಾಯಿತು. ಈಗ ಬೇರೆಯವರು ಅದರ ಶ್ರೇಯ ಪಡೆಯಲು ಹೊರಟಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ನಿಮಗೇ ಬಿಟ್ಟಿರುತ್ತೇನೆ. ನೀವೇ ತೀರ್ಮಾನಿಸಿ’ ಎಂದು ನೆರೆದಿದ್ದ ಹಾಲುಮತದ ಸಾವಿರಾರು ಜನರನ್ನು ಉದ್ದೇಶಿಸಿ ಹೇಳಿದರು.
‘ಸಮಾಜದಲ್ಲಿರುವ ಇಂಥ ಪಟ್ಟಭದ್ರರು, ಡೋಂಗಿ ಜನರಿಗೆ ನೀವೆಲ್ಲ ತಕ್ಕ ಪಾಠ ಕಲಿಸುವ ಕೆಲಸ ಮಾಡಲೇಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರ ಹೆಸರು ಪ್ರಸ್ತಾಪಿಸದೇ ಸಿಎಂ ಒತ್ತಾಯಿಸಿದರು.
‘ನಾನು ರಾಜಕೀಯ ಮಾಡುತ್ತಿರುವುದೇ ಸಾಮಾಜಿಕ ನ್ಯಾಯಕ್ಕಾಗಿ. ನಾನು ಮುಖ್ಯಮಂತ್ರಿ ಆಗಿರಲಿ, ಅಧಿಕಾರದಲ್ಲಿರಲಿ, ಇಲ್ಲದಿರಲಿ ಯಾವಾಗಲೂ ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರೊಂದಿಗೆ ಇರುತ್ತೇನೆ. ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.
ಇದಕ್ಕೂ ಮುನ್ನ 13 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಜನರ ಪರವಾಗಿ ಕೆಲಸ ಮಾಡುವ ಸಿದ್ದರಾಮಯ್ಯ ಸಾಹೇಬ್ರ ಮೇಲೆ ನಿಮ್ಮೆಲ್ಲರ ಪ್ರೀತಿ ಬೆಂಬಲ ಇರೋ ತನಕ ಅವರನ್ನು ಯಾವುದೇ ಕಾರಣಕ್ಕೂ ಅಲ್ಲಾಡಿಸಲು ಆಗಲ್ಲ– ಬೈರತಿ ಸುರೇಶ, ಸಚಿವ
‘ಸಮೀಕ್ಷೆಯಲ್ಲಿ ಕುರುಬ ಅಂತಲೇ ಬರೆಸಿ’
‘ಸೆ.22ರಿಂದ ನಡೆಯಲಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಬರೀ ಕುರುಬರು ಎಸ್ಸಿ–ಎಸ್ಟಿಗಳಿಗೆ ಅಲ್ಲ. ಅದು ರಾಜ್ಯದ ಎಲ್ಲ ಏಳು ಕೋಟಿ ಜನರ ಸ್ಥಿತಿಗತಿ ಅರಿಯಲು ನಡೆಸಲಾಗುತ್ತಿದೆ. ನೀವೆಲ್ಲರೂ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಕುರುಬ ಎಂದೇ ಬರೆಸಬೇಕು. ಹಾಗೆ ಬರೆಸದಿದ್ದರೆ ನಿಮ್ಮ ಸಂಖ್ಯೆ ಕಡಿಮೆ ಯಾಗಿ ಸಿಗಬೇಕಾದ ಸವಲತ್ತು ಸಿಗುವುದು ಕಷ್ಟವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಎಸ್ಟಿ ಸೇರ್ಪಡೆಗೆ ಮತ್ತೆ ಶಿಫಾರಸು’ ‘ಬೀದರ್ ಕಲಬುರಗಿ ಯಾದಗಿರಿ ಜಿಲ್ಲೆಯಲ್ಲಿರುವ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ವಿವರಣೆ ಕೇಳಿ ಶಿಫಾರಸು ವಾಪಸ್ ಕಳುಹಿಸಿತ್ತು. ಕೇಂದ್ರ ಕೇಳಿರುವ ಪ್ರಶ್ನೆಗೆ ಸ್ಪಷ್ಟನೆಗಳೊಂದಿಗೆ ಈ ಭಾಗದ ಕುರುಬರನ್ನು ಎಸ್ಟಿಗೆ ಸೇರಿಸಲು ಮತ್ತೆ ಶಿಫಾರಸು ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.