ADVERTISEMENT

ಬೆಳಗದ ಸೋಲಾರ್ ದೀಪಗಳು

ಸೋಲಾರ್ ಬ್ಯಾಟರಿ ಕಳ್ಳರ ಪಾಲು: ಕಗ್ಗತ್ತಲಲ್ಲೇ ವಿದ್ಯಾರ್ಥಿಗಳ ಓಡಾಟ

ಮಲ್ಲಿಕಾರ್ಜುನ
Published 16 ಫೆಬ್ರುವರಿ 2022, 6:38 IST
Last Updated 16 ಫೆಬ್ರುವರಿ 2022, 6:38 IST
ಕಲಬುರಗಿಯ ಗುಲಬರ್ಗಾ ವಿ.ವಿ.ಯ ಜ್ಞಾನ ಗಂಗಾ ಆವರಣದ ಸಮಾಜ ಕಲ್ಯಾಣ ಇಲಾಖೆಯ ಪಿ.ಜಿ. ಬಾಲಕರ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿನ ಬ್ಯಾಟರಿ ರಹಿತ ಸೋಲಾರ್ ವಿದ್ಯುತ್ ದೀಪ
ಕಲಬುರಗಿಯ ಗುಲಬರ್ಗಾ ವಿ.ವಿ.ಯ ಜ್ಞಾನ ಗಂಗಾ ಆವರಣದ ಸಮಾಜ ಕಲ್ಯಾಣ ಇಲಾಖೆಯ ಪಿ.ಜಿ. ಬಾಲಕರ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿನ ಬ್ಯಾಟರಿ ರಹಿತ ಸೋಲಾರ್ ವಿದ್ಯುತ್ ದೀಪ   

ಕಲಬುರಗಿ: ಪರಿಸರ ಸ್ನೇಹಿ ಮತ್ತು ವಿದ್ಯುತ್ ಉಳಿತಾಯಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನ ಗಂಗಾ ಆವರಣದಲ್ಲಿ ಅಳವಡಿಸಿದ ಬೀದಿ ಬದಿ ಸೋಲಾರ್ ವಿದ್ಯುತ್ ದೀಪಗಳು ಸಮರ್ಪಕವಾಗಿ ಬೆಳಗುತ್ತಿಲ್ಲ. ವಸತಿ ನಿಲಯದ ವಿದ್ಯಾರ್ಥಿಗಳು ಕತ್ತಲೆಯ ಭಾಗ್ಯ ಕಾಣುವಂತಾಗಿದೆ.

ಇಂಧನ ಉಳಿತಾಯಕ್ಕಾಗಿ ವಿಶ್ವವಿದ್ಯಾಲಯವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ 2016ರಲ್ಲಿ ಸೌರಶಕ್ತಿ ವಿದ್ಯುತ್ ದೀಪಗಳನ್ನು ಕ್ಯಾಂಪಸ್‌ನ ವಿದ್ಯಾರ್ಥಿಗಳ ವಸತಿ ನಿಲಯ, ಕ್ಯಾಂಟೀನ್‌, ಗ್ರಂಥಾಲಯ ಸೇರಿದಂತೆ ಪ್ರಮುಖ ರಸ್ತೆ ಮಾರ್ಗ ಹಾಗೂ ವೃತ್ತಗಳಲ್ಲಿ ಅಳವಡಿಸಿದೆ.

ಸೋಲಾರ್ ಪ್ಯಾನಲ್ ಹಾಗೂ ಬ್ಯಾಟರ್ ಅಳವಡಿಸಿ 5 ವರ್ಷಗಳು ಕಳೆದಿವೆ. ಹಗಲು ಹೊತ್ತಿನಲ್ಲಿ ಸೂರ್ಯನ ಶಾಖ ಹೀರಿ ರಾತ್ರಿ ವೇಳೆ ಬೆಳಕು ನೀಡಬೇಕಾದ ಬಹುತೇಕ ಬ್ಯಾಟರಿಗಳ ವಿದ್ಯುತ್ ಸಂಗ್ರಹ ಸಾಮರ್ಥ್ಯ ಕುಸಿದಿದೆ.

ADVERTISEMENT

ಕೆಲ ಹೊತ್ತು ಉರಿದು ದೀಪಗಳು ಬಂದ್ ಆಗುತ್ತಿವೆ. ಮತ್ತೆ ಕೆಲವು ದೀಪಗಳು ಆನ್‌–ಆಫ್‌ನಂತಹ ಕಣ್ಣಾಮುಚ್ಚಾಲೆ ಆಟವಾಡುತ್ತವೆ.

ಬಹುತೇಕ ವಸತಿ ನಿಲಯಗಳ ಸುತ್ತ ಕುರುಚಲು ಮರಗಳು, ಮುಳ್ಳು ಕಂಟಿಗಳು ಬೆಳೆದಿವೆ. ಅವುಗಳಲ್ಲಿ ವಿಷಜಂತುಗಳು ವಾಸವಾಗಿದ್ದು, ಸಂಜೆ ಹಾಗೂ ರಾತ್ರಿ ವೇಳೆ ವಸತಿ ನಿಲಯದಿಂದ ಹೊರ ಬರಲು ಭಯಪಡುವಂತಾಗಿದೆ. ನಿಲಯಗಳ ಸುತ್ತ ಹೈಮಾಸ್ಟ್‌ ವಿದ್ಯುತ್ ದೀಪ ಅಳವಡಿಸಬೇಕು. ಇಲ್ಲವೇ ಸುತ್ತಲಿನ ಮುಳ್ಳುಕಂಟಿ ಕಡಿದು ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.

ಸೋಲಾರ್ ಬ್ಯಾಟರಿ ಕಳವು: ಸೋಲಾರ್ ದೀಪದ ಕಂಬಗಳಲ್ಲಿನ ಬೆಲೆ ಬಾಳುವ ಬ್ಯಾಟರಿಗಳು ಕಳವು ಆಗುತ್ತಿದ್ದು, ಕಂಬದಲ್ಲಿ ದೀಪ ಇದ್ದರೂ ಬೆಳಗದಂತೆ ಆಗಿವೆ. ದುಷ್ಕರ್ಮಿಗಳ ಈ ಕೃತ್ಯಕ್ಕೆ ವಿದ್ಯಾರ್ಥಿಗಳು ಅಂಧಕಾರದಲ್ಲಿ ಕಳೆಯುತ್ತಿದ್ದಾರೆ. ಕ್ಯಾಂಪಸ್ಸಿನ ಕ್ಯಾಂಟೀನ್, ಸಮಾಜ ಕಲ್ಯಾಣ ಇಲಾಖೆಯ ಪಿ.ಜಿ. ಬಾಲಕರ ವಸತಿ ನಿಲಯ ಸೇರಿದಂತೆ ಹಲವು ಕಡೆಗಳ ಬ್ಯಾಟರಿಗಳು ದುಷ್ಕರ್ಮಿಗಳ
ಪಾಲಾಗಿವೆ.

‘ಸೋಲಾರ್ ಬ್ಯಾಟರಿಗಳ ಕಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ಈಗಾಗಲೇ ದೂರು ನೀಡಲಾಗಿದೆ. ಕೆಟ್ಟು ಹೋದ ಬೀದಿ ಬದಿಯ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ವಿದ್ಯುತ್ ಕಂಬ ಹಾಗೂ ಕೇಬಲ್‌ಗಳು 30 ವರ್ಷದಷ್ಟು ಹಳೆಯದಾಗಿದ್ದರಿಂದ ಕೆಲವು ಕಡೆ ಸಮಸ್ಯೆ ಕಂಡುಬಂದಿದೆ. ಅದನ್ನು ಸರಿಪಡಿಸಲಾಗುತ್ತಿದೆ. ಇಡೀ ಆವರಣಕ್ಕೆ 10 ಕಿ.ಮೀ.ನಷ್ಟು ಹೊಸ ಕೇಬಲ್‌ನ ಅವಶ್ಯಕತೆ ಇದೆ. ಸಮಪರ್ಕ ವಿದ್ಯುತ್ ಪೂರೈಕೆಗೆ ಅನುವು ಮಾಡಿಕೊಡಲು ₹ 3 ಕೋಟಿ ಅನುದಾನ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿ.ವಿ.ಯ ಎಂಜಿನಿಯರಿಂಗ್ ವಿಭಾಗಕ್ಕೆ ಸಿಬ್ಬಂದಿಯ ಕೊರತೆ ಇದ್ದು, 45 ಜನರಿದ್ದ ನೌಕರರ ಸಂಖ್ಯೆ ಈಗ 11ಕ್ಕೆ ಇಳಿದಿದೆ. ಹೀಗಾಗಿ, ದುರಸ್ತಿ ಕಾರ್ಯಗಳಿಗೆ ವಿಳಂಬವಾಗುತ್ತಿದೆ. ಇನ್ನಷ್ಟು ಸಿಬ್ಬಂದಿ ಹಾಗೂ ಅನುದಾನು ಬಿಡುಗಡೆ ಮಾಡಿದರೇ ಅನುಕೂಲವಾಗುತ್ತದೆ’ ಎನ್ನುತ್ತಾರೆ ವಿ.ವಿ.ಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಪ್ಪ.

ಕ್ಯಾಂಪಸ್ಸಿನಲ್ಲಿ ಕೆಟ್ಟು ಹೋದ ವಿದ್ಯುತ್ ದೀಪಗಳನ್ನು ಸರಿಪಡಿಸುವಂತೆ ಎಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದ್ದೇನೆ. ಒಂದು ವರ್ಷ ಕಳೆದ ಮೇಲೆ ಸೋಲಾರ್ ಬ್ಯಾಟರಿಗಳ ವಿದ್ಯುತ್ ಸಂಗ್ರಹ ಸಾಮರ್ಥ್ಯ ಕಡಿಮೆ ಆಗುತ್ತೆ. ಈಗ ಅವು ಎಷ್ಟು ಸಮಯ ಬೆಳಕು ನೀಡುತ್ತೇವೆ ಎಂಬುದನ್ನು ಪರಿಶೀಲಿಸುತ್ತೇವೆ. ಬಳಿಕ ಬ್ಯಾಟರಿಗಳ ಬದಲಾವಣೆ ಮಾಡುತ್ತೇವೆ. ನಮ್ಮಲ್ಲಿನ ಎಲೆಕ್ಟ್ರಿಕ್ ಸಲಕರಣೆಗಳು ಬಹ ಹಳೆಯದಾಗಿವೆ. ನಮ್ಮ ಹತ್ತಿರ ಇರುವ ಹಣದಿಂದಲೇ ಅವುಗಳ ದುರಸ್ತಿ ಮಾಡುತ್ತೇವೆ’ ಎಂದು ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ತಿಂಗಳಿಂದ ವಸತಿ ನಿಲಯದ ಮುಂಭಾಗದ ವಿದ್ಯುತ್ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಇದರಿಂದ ಸಂಜೆ ವೇಳೆ ಓಡಾಡಲು ಕಷ್ಟವಾಗುತ್ತಿದೆ.

-ಐಶ್ವರ್ಯಾ, ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿ

ಬಿಸಿಎಂ ಹಾಸ್ಟಲ್ ಆವರಣದಲ್ಲಿ ಸುತ್ತ ಹಾವು, ಚೇಳಗಳ ಕಾಟ ಇದೆ. ಊಟ ಮಾಡಿ ರಾತ್ರಿ ಹೊರ ಹೊರಬರಲು ಭಯವಾಗುತ್ತದೆ. ಸಂಬಂಧಿಸಿದವರು ಇತ್ತ ಗಮನ ಹರಿಸುತ್ತಿಲ್ಲ.

- ಆರ್‌.ಬಿ ಗುಳಿಗಿ, ವಸತಿ ನಿಲಯದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.