ADVERTISEMENT

ಚಿಂಚೋಳಿ: ಮಳೆ ಕೊರತೆ ಮಧ್ಯೆಯೂ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಬಿತ್ತನೆ: 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಜಗನ್ನಾಥ ಡಿ.ಶೇರಿಕಾರ
Published 5 ಜುಲೈ 2023, 6:25 IST
Last Updated 5 ಜುಲೈ 2023, 6:25 IST
   

ಚಿಂಚೋಳಿ: ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗದಿದ್ದರೂ ರೈತರು ಮುಂಗಾರಿನ ಉದ್ದು, ಹೆಸರು, ತೊಗರಿ, ಸೋಯಾ ಮೊದಲಾದ ಬೀಜಗಳ ಬಿತ್ತನೆ ನಡೆಸಿದ್ದಾರೆ.

ಐನೋಳ್ಳಿ, ಭೋಗಾನಿಂಗದಳ್ಳಿ ಹಾಗೂ ಚಿಮ್ಮನಚೋಡ ಸುತ್ತಲೂ ಮಳೆಯ ಕೊರತೆಯಿಂದ ಸೋಯಾ ಬೀಜ ನಿರೀಕ್ಷೆಯಂತೆ ಮೊಳಕೆ ಬಂದಿಲ್ಲ ಎಂದು ರೈತ ಶಂಕರ ಸೂಗೂರು ತಿಳಿಸಿದ್ದಾರೆ.

ತೊಗರಿ ಬಿತ್ತನೆ ಮಾಡಿದ ಹೊಲದಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಗಿದ್ದು ರೈತರು ಬೀಜ ಬಿತ್ತಿ ಮನೆಗೆ ಬಂದರೆ ರಾತ್ರಿ ಕಾಡುಹಂದಿಗಳು ಬಿತ್ತಿದ ಹೊಲದಲ್ಲಿ ಕಾಳು ತಿಂದು ಹಾಕುತ್ತಿವೆ. ಇದರಿಂದ ರೈತರು ಹೊಲದಲ್ಲಿಯೇ ಮಲಗುವಂತಾಗಿದೆ ಎಂದು ಹೀರಾಸಿಂಗ್ ತಿಳಿಸಿದರು.

ADVERTISEMENT

ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ಸುರಿದ ಮಳೆಯ ಸರಾಸರಿ ನೋಡಿದರೆ ಶೇ 10 ಕೊರತೆಯಿದೆ. ಚಿಂಚೋಳಿ ಹೋಬಳಿ ಶೇ 20, ಐನಾಪುರ ಹೋಬಳಿಯಲ್ಲಿ ಶೇ 8 ಅಧಿಕ ಮಳೆಯಾಗಿದೆ. ಸುಲೇಪೇಟ ಹೋಬಳಿಯಲ್ಲಿ ಶೇ 53, ಕೋಡ್ಲಿಯಲ್ಲಿ ಶೇ 13 ಮಳೆಯ ಕೊರತೆಯಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ್ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಸದ್ಯ ಶೇ 80 ಬಿತ್ತನೆಯಾಗಿದೆ. ತಗ್ಗು ಪ್ರದೇಶದ ಬೆಳೆ ಚನ್ನಾಗಿವೆ ಆದರೆ ಇತರ ಪ್ರದೇಶದ ಬೆಳೆಗಳಿಗೆ ಮಳೆಯ ಅಗತ್ಯವಿದೆ ಎಂದರು.

ತಾಲ್ಲೂಕಿನಲ್ಲಿ ಐನಾಪುರ ಸುತ್ತಮುತ್ತ ಹಾಗೂ ಚಿಂಚೋಳಿ ಹೋಬಳಿಯಲ್ಲಿ ಬೆಳೆ ಉತ್ತಮವಾಗಿದ್ದು ಬೆಳವಣಿಗೆ ಹಂತದಲ್ಲಿವೆ.
ಅತ್ಯಂತ ಫಲವಂತಾದ ಕಪ್ಪು ಮಣ್ಣಿನ ಭೂಮಿಯಲ್ಲಿ ವಾರದ ಹಿಂದಷ್ಟೆ ಬಿತ್ತನೆ ನಡೆಸಿದರೆ, ಉಳಿದ ಕಡೆಗಳಲ್ಲಿ 15-20 ದಿನಗಳ ಹಿಂದೆ ಬಿತ್ತನೆ ನಡೆಸಿದ್ದು ಬೆಳೆಗಳು ಉತ್ತಮ ಬೆಳವಣಿಗೆ ಹಂತದಲ್ಲಿವೆ.

ಎಲ್ಲೆಡೆ ರೈತರು ಹೊಲದಲ್ಲಿ ಎಡೆ ಹೊಡೆಯುವ, ಕಳೆ ಕೀಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೂನ್ ಎರಡನೇ ವಾರದಲ್ಲಿ ಬಿತ್ತಿದ ರೈತರ ಹೊಲದಲ್ಲಿ ಬೆಳೆ ಚನ್ನಾಗಿದ್ದರೆ, ವಾರದ ಹಿಂದೆ ಬಿತ್ತಿದ ಹೊಲದಲ್ಲಿ ಪೈರು ಸಾಲು ಹರಿದಿವೆ.

ವೀರಶೆಟ್ಟಿ ರಾಠೋಡ್ ಕೃಷಿ ಸಹಾಯಕ ನಿರ್ದೆಶಕರು
ಚಿಂಚೋಳಿ ತಾಲ್ಲೂಕು ಕಲಭಾವಿ ತಾಂಡಾದ ಜಮೀನಿನಲ್ಲಿ ಹೆಸರು ಮತ್ತು ತೊಗರಿ ಬೆಳೆಯಲ್ಲಿ ತೇವಾಂಶ ರಕ್ಷಣೆ ಮತ್ತು ಕಳೆ ನಿಯಂತ್ರಕ್ಕಾಗಿ ಎಡೆ ಹೊಡೆಯುತ್ತಿರುವ ರೈತರು
ಜೂನ್ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ್ದು ಈಗ ಬೆಳವಣಿಗೆ ಹಂತದಲ್ಲಿದೆ. ತೇವಾಂಶ ನಿರ್ವಹಣೆ ಮತ್ತು ಕಳೆ ನಿಯಂತ್ರಣಕ್ಕೆ ಎಡೆ ಹೊಡೆಯುತ್ತಿದ್ದೇವೆ.
- ಗೋಪಾಲ ಜಾಧವ , ರೈತ ಕಲಭಾವಿ ತಾಂಡಾ
ರೈತರು ತಮ್ಮ ಹೊಲದಲ್ಲಿ ಬಿತ್ತಿದ ಬೆಳೆಗಳಿಗೆ ವಿಮೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಹವಾಮಾನದಲ್ಲಿ ಏರುಪೇರಾಗುತ್ತಿರುವುದರಿಂದ ವಿಮೆ ಮಾಡಿಸುವುದು ಸೂಕ್ತ
-ವೀರಶೆಟ್ಟಿ ರಾಠೋಡ್, ಕೃಷಿ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.