ADVERTISEMENT

ಕಲಬುರಗಿ: ಇಳಿ ಮನಸುಗಳಿಗೆ ಚೇತೋಹಾರಿ ‘ಸ್ಪಂದನ’

ಹಿರಿ ಜೀವಗಳ ಜೀವನೋತ್ಸಾಹ ಹೆಚ್ಚಿಸುತ್ತಿರುವ ಗ್ರಾಮ ಹಿರಿಯರ ಕಾಳಜಿ ಕೇಂದ್ರಗಳು

ಬಸೀರ ಅಹ್ಮದ್ ನಗಾರಿ
Published 20 ಜನವರಿ 2026, 0:10 IST
Last Updated 20 ಜನವರಿ 2026, 0:10 IST
ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಪೇಪರ್‌ ಕಿರೀಟ ಧರಿಸಿದ ಖುಷಿಯಲ್ಲಿ ಹಿರಿಯರು
ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಪೇಪರ್‌ ಕಿರೀಟ ಧರಿಸಿದ ಖುಷಿಯಲ್ಲಿ ಹಿರಿಯರು   

ಕಲಬುರಗಿ: ಖಾಸಗಿ ಸಹಭಾಗಿತ್ವದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಿರುವ ಸ್ಪಂದನಾ ಕೇಂದ್ರವು, ಜೀವನ ಸಂಜೆಯಲ್ಲಿರುವ ಹಿರಿಯ ನಾಗರಿಕರಲ್ಲಿ ಜೀವನೋತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 60 ಗ್ರಾಮ ಪಂಚಾಯಿತಿಗಳ ಸ್ಥಾಪಿಸಿರುವ ‘ಅರಿವು ಕೇಂದ್ರ’ಗಳ ಉತ್ಸಾಹದ ಚಿತ್ರಣ ಕಾಣಬರುತ್ತಿದೆ.

ಚಿತ್ರಗಳಿಗೆ ಬಣ್ಣ ತುಂಬಿದ ಹಿರಿ ಜೀವಗಳು. ದಿನಪತ್ರಿಕೆಗಳ ಟೊಪ್ಪಿಗೆ ತಲೆಗೆ ಧರಿಸಿ ಮುಗುಳ್ನಕ್ಕ ಇಳಿವಯಸ್ಕರು. ತಾಳ ಬಾರಿಸುತ್ತ ಭಜನೆಯಲ್ಲಿ ತೊಡಗಿದ್ದ ವೃದ್ಧರು. ‘ಯಾರ ಹೊಲ ಯಾರ ಮನೆ, ಮೆಚ್ಚಿ ಕುಂತೆ ಸುಳ್ಳೆಯಲ್ಲಾ’ ಎಂದು ಭಜಿಸುತ್ತಿದ್ದ ಮಹಿಳೆಯರು.

ADVERTISEMENT

ವಲಸೆ ಸಮಸ್ಯೆ, ಕುಗ್ಗುತ್ತಿರುವ ವಿಭಕ್ತ ಕುಟುಂಬಗಳ ವ್ಯವಸ್ಥೆಯಿಂದಾಗಿ ಹಳ್ಳಿಗಳಲ್ಲಿ ಹಿರಿಯ ನಾಗರಿಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಪೀಳಿಗೆ ಅಂತರದಿಂದಲೂ ಹಿರಿಯರಲ್ಲಿ ಪ್ರತ್ಯೇಕತಾ ಭಾವ, ಖಿನ್ನತೆ ಕಾಡುತ್ತಿದೆ. ಇಂತವರಿಗೆ ‘ಸ್ಪಂದನ’ ಹೊಸ ಉತ್ಸಾಹ ತಂದಿದೆ.

ಏನಿದು ಸ್ಪಂದನ?: ‘ಅರಿವು ಕೇಂದ್ರ’ಗಳಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿದ ‘ಗ್ರಾಮ ಹಿರಿಯರ ಕೇಂದ್ರ’ವೇ ‘ಸ್ಪಂದನ’. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಹಯೋಗದಲ್ಲಿ ಟಾಟಾ ಟ್ರಸ್ಟ್‌ನ ಭಾಗವಾದ ‘ಕಲಿಕೆ’ ಸಂಸ್ಥೆ ನಿರ್ವಹಿಸುತ್ತಿದೆ.

ಇದಕ್ಕಾಗಿ 2025ರಲ್ಲಿ ಆರ್‌ಡಿಪಿಆರ್‌ ಇಲಾಖೆಯೊಂದಿಗೆ ಒಪ್ಪಂದ ಏರ್ಪಟ್ಟಿದೆ. ಕಳೆದ ಜೂನ್‌ನಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳ ತಲಾ 20 ಗ್ರಾಮ ಪಂಚಾಯಿತಿಗಳಲ್ಲಿ ‘ಸ್ಪಂದನ’ದ ಮೂಲಕ ‘ಹಿರಿಯರ’ ಸಾಮಾಜಿಕ ಆರೈಕೆಯಲ್ಲಿ ತೊಡಗಿದೆ. ವಾರಕ್ಕೆ ನಾಲ್ಕು ದಿನಗಳಂತೆ ಅವರಿಗೆ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅವರ ಮನದ ಭಾರ ಹಗುರಾಗಿಸುತ್ತಿದೆ.

ಸ್ಪಂದನೆ ಹೇಗೆ?: ಗ್ರಾಮದಲ್ಲಿನ 60 ವರ್ಷ ಮೀರಿದ, ತುಸು ಓಡಾಡಬಲ್ಲ ಹಿರಿಯರನ್ನು ಕಲಿಕೆ ಸಂಸ್ಥೆ ಗುರುತಿಸುತ್ತದೆ. ಕಟ್ಟೆ, ಜಗುಲಿಗಳಿಂದ ಎದ್ದು ಅರಿವು ಕೇಂದ್ರಗಳತ್ತ ಹೆಜ್ಜೆ ಹಾಕುವಂತೆ ಮನವೊಲಿಸುತ್ತದೆ. ಆ ಹಿರಿಯರಿಗೆ ಲಘು ವ್ಯಾಯಾಮ, ಸಂಗೀತ, ಯೋಗ, ಕ್ರಾಫ್ಟ್‌ಗಳನ್ನು ಮಾಡಿಸಲಾಗುತ್ತಿದೆ. ಹರಟೆ, ಮಾತು–ಕತೆ, ಭಜನೆಗಳ ಮೂಲಕ ಅವರ ಮನದ ದುಗುಡ ಇಳಿಸುತ್ತಿದೆ. ಇಂಥ ಚಟುವಟಿಕೆಗಳು ಹಿರಿಯರಲ್ಲಿ ಮಂದಹಾಸ ಮೂಡಿಸುತ್ತಿದೆ. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ಒಬ್ಬರಂತೆ ‘ಪ್ರೇರಕ’ರನ್ನು ನಿಯೋಜಿಸಿದೆ.

‘ಮೊದಲ ಹಂತದಲ್ಲಿ 60 ಪಂಚಾಯಿತಿಗಳಲ್ಲಿ ‘ಸ್ಪಂದನ’ ಶುರುವಾಗಿದೆ. ನಿತ್ಯ ಸರಾಸರಿ ಸಾವಿರಕ್ಕೂ ಹೆಚ್ಚು ಮಂದಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. 2ನೇ ಹಂತದಲ್ಲಿ ಮಾರ್ಚ್‌ ಹೊತ್ತಿಗೆ ಇನ್ನೂ 240 ಪಂಚಾಯಿತಿಗಳಲ್ಲಿ ‘ಸ್ಪಂದನ’ ಆರಂಭಿಸುವ ಸಿದ್ಧತೆ ನಡೆದಿದೆ. ಮುಂದಿನ ಹಂತದಲ್ಲಿ ನಮ್ಮ ಸಂಸ್ಥೆ ಹಾಗೂ ಆರ್‌ಡಿಪಿಆರ್ ಸಹಯೋಗದಲ್ಲಿ ಇನ್ನೂ 300 ಅರಿವು ಕೇಂದ್ರಗಳ ಮೇಲ್ವಿಚಾರಕರನ್ನು ‘ಸ್ಪಂದನ’ಗಳ ನಿರ್ವಹಣೆಗೆ ಸಜ್ಜುಗೊಳಿಸುವ ಗುರಿಯಿದೆ’ ಎನ್ನುತ್ತಾರೆ ಕಲಬುರಗಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ‘ಸ್ಪಂದನ’ ಅನುಷ್ಠಾನದ ಹೊಣೆ ಹೊತ್ತ ಕಲಿಕೆ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸಾಯಿಬಾಬು.

ಅಕ್ಷರ ಕಲಿಕೆಯಲ್ಲಿ ಮಗ್ನರಾದ ಮಹಿಳೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಹಿರಿಯ ನಾಗರಿಕರನ್ನು ಕ್ರಿಯಾಶೀಲರಾಗಿಸಲು ಪ್ರಾಯೋಗಿಕವಾಗಿ ‘ಸ್ಪಂದನ’ ಶುರು ಮಾಡಿದ್ದೇವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಸೌಲಭ್ಯ ಒದಗಿಸಿದೆ. ಕಲಿಕೆ ಸಂಸ್ಥೆಯೂ ನೆರವಾಗುತ್ತಿದೆ.
-ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ
ಸ್ಪಂದನ ಕೇಂದ್ರದಲ್ಲಿ ವಿವಿಧ ಚಟುವಟಿಕೆಗೆ ಬೇಕಾದ ಪರಿಕರಗಳ ವೆಚ್ಚ ಪ್ರೇರಕರ ಗೌರವಧನಕ್ಕೆ ಟಾಟಾ ಟ್ರಸ್ಟ್‌ ಪ್ರತಿ ಕೇಂದ್ರಕ್ಕೆ ವಾರ್ಷಿಕ ₹ 90 ಸಾವಿರ ವಿನಿಯೋಗಿಸುತ್ತಿದೆ.
-ಸಾಯಿಬಾಬು,‘ಕಲಿಕೆ’ ಕಾರ್ಯಕ್ರಮ ಅಧಿಕಾರಿ

Quote -

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.