ADVERTISEMENT

23ರಂದು ರಾಜ್ಯ ಮಟ್ಟದ ರೈತ ಸಮಾವೇಶ: ಕುರುಬೂರ್‌ ಶಾಂತಕುಮಾರ್‌

ವಿಶ್ವ ರೈತ ದಿನಾಚರಣೆ, ಪ್ರಗತಿಪರ ರೈತರ ಗುರುತಿಸಿ ‘ಐಎಎಸ್ ಪದವಿ’ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:32 IST
Last Updated 4 ಡಿಸೆಂಬರ್ 2025, 5:32 IST
ಕಲಬುರಗಿಯ ಐವಾನ್‌–ಇ–ಶಾಹಿ ಅತಿಥಿಗೃಹದಲ್ಲಿ ಮಂಗಳವಾರ ವಿಶ್ವ ರೈತ ದಿನಾಚರಣೆ ಹಾಗೂ ಸಮಾವೇಶದ ಭಿತ್ತಿಪತ್ರಗಳನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್‌ ಶಾಂತಕುಮಾರ್‌ ಬಿಡುಗಡೆ ಮಾಡಿದರು
ಕಲಬುರಗಿಯ ಐವಾನ್‌–ಇ–ಶಾಹಿ ಅತಿಥಿಗೃಹದಲ್ಲಿ ಮಂಗಳವಾರ ವಿಶ್ವ ರೈತ ದಿನಾಚರಣೆ ಹಾಗೂ ಸಮಾವೇಶದ ಭಿತ್ತಿಪತ್ರಗಳನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್‌ ಶಾಂತಕುಮಾರ್‌ ಬಿಡುಗಡೆ ಮಾಡಿದರು   

ಕಲಬುರಗಿ: ‘ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ–ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಡಿಸೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ವಿಶ್ವ ರೈತ ದಿನಾಚರಣೆ (ರೈತರ ಹಬ್ಬ)ಯನ್ನು ಆಯೋಜಿಸಲಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್‌ ಶಾಂತಕುಮಾರ್‌ ಹೇಳಿದರು.

ಇಲ್ಲಿನ ಐವಾನ್‌–ಇ–ಶಾಹಿ ಅತಿಥಿಗೃಹದಲ್ಲಿ ಮಂಗಳವಾರ ವಿವಿಧ ಜಿಲ್ಲೆಗಳ ರೈತ ಮುಖಂಡರ ಜೊತೆಗೆ ಪೂರ್ವಭಾವಿ ಸಭೆ ನಡೆಸಿ ವಿಶ್ವ ರೈತ ದಿನಾಚರಣೆ ಭಿತ್ತಿಪತ್ರ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅಂದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಡಾ. ಎಸ್‌.ಎಂ. ಪಂಡಿತ ರಂಗಮಂದಿರದವರೆಗೆ ರೈತರ ಜಾಥಾ ನಡೆಯಲಿದೆ. ಬಳಿಕ ಕಾರ್ಯಕ್ರಮ ಸಮಾವೇಶಗೊಳ್ಳಲಿದೆ. ವಿವಿಧ ಜಿಲ್ಲೆಗಳಿಂದ ಸುಮಾರ 5 ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಲಿದ್ದಾರೆ’ ಎಂದರು.

ADVERTISEMENT

‘ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಜನ ಪ್ರಗತಿಪರ ರೈತರನ್ನು ಗುರುತಿಸಿ ‘ಐಎಎಸ್ ಪದವಿ’ ಪುರಸ್ಕಾರ ಮಾಡಲಾಗುವುದು. ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ನಿರ್ಧರಿಸಲಾಗಿದೆ’ ಎಂದರು.

ಜಿಲ್ಲಾಧ್ಯಕ್ಷ ರಮೇಶ್ ಹೂಗಾರ, ‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ ₹3,000 ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಚಿಂಚೋಳಿಯ ಸಿದ್ಧಸಿರಿ ಕಾರ್ಖಾನೆ ಅವರು ₹2,500 ಪಾವತಿ ಮಾಡುತ್ತಿದ್ದಾರೆ. ಒಪ್ಪಂದದಂತೆ ಪ್ರತಿಟನ್‌ಗೆ ₹3,000 ರೈತರಿಗೆ ಪಾವತಿಸಬೇಕು. ಇಲ್ಲವಾದರೆ ಕಾರ್ಖಾನೆಗೆ ಕಬ್ಬು ಸರಬರಾಜು ನಿಲ್ಲಿಸಬೇಕಾಗುತ್ತದೆ’ ಎಂದರು.

‘ಜಿಲ್ಲೆಯ ಅಫಜಲಪುರ, ಜೇವರ್ಗಿ, ಕಲಬುರಗಿ ಜಿಲ್ಲೆಗಳಲ್ಲಿ ರೈತರಿಗೆ ಪರಿಹಾರ ನೀಡುವಲ್ಲಿ ಅನ್ಯಾಯವಾಗಿದೆ. 5 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾದರೆ 1–2 ಎಕರೆಗೆ ಮಾತ್ರ ಪರಿಹಾರ ನೀಡಲಾಗಿದೆ. ಇದನ್ನು ಅಧಿಕಾರಿಗಳು ಸರಿಪಡಿಸಬೇಕು’ ಎಂದರು.

ಈ ವೇಳೆ ಮೈಸೂರಿನ ಆತ್ತಹಳ್ಳಿ ದೇವರಾಜ, ಬಸವರಾಜ ಪಾಟೀಲ, ಕರಬಸಪ್ಪ ಉಜಗ, ಜಗದೀಶ ಪಾಟೀಲ, ನಾಗೇಂದ್ರರಾವ್ ದೇಶಮುಖ, ನಾಗರಾಜ್ ಬರಡನಪೂರ, ಭಾಗಣ್ಣ ಕುಂಬಾರ, ಶಾಂತವೀರಪ್ಪ ದಸ್ತಾಪುರ, ಸಂತೋಷ ಪಾಟೀಲ, ರೇವಣಸಿದ್ದಯ್ಯ ಮಠ, ಬಸವರಾಜ, ಲಕ್ಷ್ಮಿಪುತ್ರ ಮನಮಿ, ಧರೆಪ್ಪೆಗೌಡ ಬಿರಾದಾರ, ಶರಣು, ಶಾಂತವೀರಪ್ಪ ಕಲಬುರಗಿ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.