
ಕಲಬುರಗಿ: ಜಿಲ್ಲೆಯ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಕಾರ್ಖಾನೆಗೆ ಸರಬರಾಜು ಮಾಡುವ ಕಬ್ಬಿನ ತೂಕದಲ್ಲಿ ಪ್ರತಿ ಲಾರಿಗೆ ಅಂದಾಜು 1 ಟನ್‌ವರೆಗೆ ವ್ಯತ್ಯಾಸ ಬರುತ್ತಿದೆ. ಕೂಡಲೇ ಜಿಲ್ಲಾಡಳಿತ ಈ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮಧ್ಯಾಹ್ನ ಸೇರಿದ ಸಂಘಟನೆಯ ಮುಖಂಡರು, ಸಕ್ಕರೆ ಕಾರ್ಖಾನೆ ಹಾಗೂ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ರೈತ ಮುಖಂಡ ಬಸವರಾಜ ಕೋರಿ ಸಂಬಂಧಿಕರು ಸಿದ್ಧಸಿರಿ ಕಾರ್ಖಾನೆಗೆ ನ.27ರಂದು 14 ಲಾರಿ ಕಬ್ಬು ಕಳಿಸಿದ್ದಾರೆ. ಸಂಶಯ ವ್ಯಕ್ತಪಡಿಸಿ ಕೊನೆಯ 14ನೇ ಲಾರಿಯನ್ನು ಭಂಕೂರ ಸಮೀಪದ ವೇ ಬ್ರಿಡ್ಜ್‌ನಲ್ಲಿ ತೂಕ ಮಾಡಿಸಿದ್ದಾರೆ. ಕಾರ್ಖಾನೆಗೆ ತೆಗೆದುಕೊಂಡು ಹೋದಾಗ ಅಲ್ಲಿ 620 ಕೆ.ಜಿಗಳಷ್ಟು ಕಡಿಮೆ ಬಂದಿದೆ. ಈ ಕುರಿತು ಕಾರ್ಖಾನೆಯವರಿಗೆ ವಿಚಾರಿಸಿದರೆ ಹೊರಗೆ ಮಾಡಿಸಿದ ತೂಕದಲ್ಲಿ ಮೋಸವಾಗಿರಬಹುದು. ನಮ್ಮ ತೂಕದಲ್ಲಿ ದೋಷವಿಲ್ಲ ಎಂದಿದ್ದಾರೆ’ ಎಂದು ದೂರಿದರು.
‘ಜಿಲ್ಲಾಡಳಿತದ ಅಧಿಕಾರಿಗಳು ರೇಣುಕಾ ಸಕ್ಕರೆ ಕಾರ್ಖಾನೆಗೆ ಹೋದಾಗಲೂ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಬಂದಿದೆ. ಹೀಗಾಗಿ ಎಲ್ಲಾ ಕಾರ್ಖಾನೆಗಳಲ್ಲಿರುವ ತೂಕದ ಯಂತ್ರಗಳನ್ನು ಪರಿಶೀಲಿಸಿ, ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಮೋಸ ಕಂಡು ಬಂದ ಪ್ರಕರಣಗಳಲ್ಲಿ ಜಿಲ್ಲಾಡಳಿತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ಬಸವರಾಜ ಕೋರಿ, ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ಸಿದ್ದಪ್ಪ ಕಲಶೆಟ್ಟಿ ಸೇರಿದಂತೆ ಹಲವರಿದ್ದರು.
ಏಕರೂಪದರ ನಿಗದಿಗೆ ಆಗ್ರಹ
‘ಪ್ರತಿ ಟನ್ ಕಬ್ಬಿಗೆ ₹3300ರಂತೆ ಏಕರೂಪ ದರ ನಿಗದಿಪಡಿಸಬೇಕು. ಕಬ್ಬು ಕಳಿಸಿದ 14 ದಿನಗಳಲ್ಲಿ ಹಣ ಪಾವತಿಗೆ ಸೂಚಿಸಬೇಕು. ನಾಟಿಯಾದ 12 ತಿಂಗಳೊಳಗೇ ಕಬ್ಬು ಕಟಾವು ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೂ ಪಾಲು ಕೊಡಬೇಕು. ಸಕ್ಕರೆ ಸಚಿವ ಶಿವಾನಂದ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಬೇಕು’ ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.