ADVERTISEMENT

ಕಲಬುರ್ಗಿ: ತಾಲೂಕು ಪಂಚಾಯಿತಿ ಸದಸ್ಯೆ ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 5:44 IST
Last Updated 5 ಫೆಬ್ರುವರಿ 2021, 5:44 IST
ಚಿಂಚೋಳಿ ತಾಲ್ಲೂಕಿನ ಐನಾಪುರ ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾದ ಉಮ್ಲಿಬಾಯಿ ಬನ್ಸಿಲಾಲ್ ಹಾಗೂ ಉಪಾಧ್ಯಕ್ಷರಾಗಿ ಪುನರಾಯ್ಕೆಯಾದ ಸಂಜೀವಕುಮಾರ ಡೊಂಗರಗಿ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು
ಚಿಂಚೋಳಿ ತಾಲ್ಲೂಕಿನ ಐನಾಪುರ ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾದ ಉಮ್ಲಿಬಾಯಿ ಬನ್ಸಿಲಾಲ್ ಹಾಗೂ ಉಪಾಧ್ಯಕ್ಷರಾಗಿ ಪುನರಾಯ್ಕೆಯಾದ ಸಂಜೀವಕುಮಾರ ಡೊಂಗರಗಿ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು   

ಚಿಂಚೋಳಿ: ತಾಲ್ಲೂಕಿನ ಐನಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಉಮ್ಲಿಬಾಯಿ ಬನ್ಸಿಲಾಲ್ ಚಿನ್ನಾರಾಠೋಡ್ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಜೀವಕುಮಾರ ಡೊಂಗರಗಿ ಪುನರಾಯ್ಕೆಯಾಗಿದ್ದಾರೆ.

ಒಟ್ಟು 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಉಮ್ಲಿಬಾಯಿ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಜೀವ ಅವರಿಗೆ 15 ಮತಗಳು ಮತ್ತು ಎದುರಾಳಿ ಅಭ್ಯರ್ಥಿ ಅವಿನಾಶ ಘಾಟಗೆ ಅವರಿಗೆ 7 ಮತಗಳು ಲಭಿಸಿವೆ. ಆಗ ಸಂಜೀವಕುಮಾರ ಆಯ್ಕೆಯನ್ನು ಚುನಾವಣಾಧಿಕಾರಿ ಪ್ರಭುಲಿಂಗ ವಾಲಿ ಘೋಷಿಸಿದರು.

ADVERTISEMENT

ಬಿಜೆಪಿ ಮುಖಂಡರಾದ ಪ್ರೇಮಸಿಂಗ್ ಜಾಧವ್, ರಮೇಶ ಪಡಶೆಟ್ಟಿ, ರೇವಪ್ಪ ಉಪ್ಪಿನ್, ಅಶೋಕ ಪಡಶೆಟ್ಟಿ, ರಾಮರಾವ ಪಾಟೀಲ, ಈಶ್ವರ್ ನಾಯಕ್, ದಿಲೀಪ ಪಾಟೀಲ ಜ್ಞಾನದೇವ ಪಾಟೀಲ, ಸಂಜೀವ ಪಾಟೀಲ, ಸಿದ್ದಪ್ಪ ಗಾರಂಪಳ್ಳಿ ಹಾಗೂ ಗ್ರಾ.ಪಂ. ಸದಸ್ಯರು ಇದ್ದರು. ಚುನಾವಣೆ ಪ್ರಭುಲಿಂಗ ವಾಲಿ, ಪಿಡಿಒ ಗೋವಿಂದರೆಡ್ಡಿ ನಡೆಸಿಕೊಟ್ಟರು. ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ ಬಂದೋಬಸ್ತ್ ಕೈಗೊಂಡಿದ್ದರು.

ತಾ.ಪಂ ಸದಸ್ಯೆಗೆ ಒಲಿದ ಗಾದಿ:ಅವಿಭಜಿತ ಚಿಂಚೋಳಿ ತಾಲ್ಲೂಕಿನ ಚೇಂಗಟಾ ಮತಕ್ಷೇತ್ರದಿಂದ 4 ವರ್ಷಗಳ ಹಿಂದೆ ತಾಲ್ಲೂಕು ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಸದಸ್ಯೆ ಉಮ್ಲಿಬಾಯಿ ಬನ್ಸಿಲಾಲ್ ಈಗ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಮ್ಲಿಬಾಯಿ ಪ್ರತಿನಿಧಿಸುತ್ತಿದ್ದ ಚೇಂಗಟಾ ಕ್ಷೇತ್ರ ಕಮಲಾಪುರ ತಾಲ್ಲೂಕಿಗೆ ಸೇರಿದೆ. ಹೀಗಾಗಿ ಅವರು ಕಮಲಾಪುರ ತಾಲ್ಲೂಕು ಪಂಚಾಯಿತಿ ಸದಸ್ಯಯಾಗಿಯೂ ಕಾರ್ಯನಿರ್ವಹಿಸಿದ್ದರು.

ಕಾಂಗ್ರೆಸ್‌ನ ಉಮ್ಲಿಬಾಯಿ ಬನ್ಸಿಲಾಲ್ ಅವರು ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದರು. ಆದರೆ ಡಿಸೆಂಬರ್‌ನಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೇಲೆ ಅವರು ಕಾಂಗ್ರೆಸ್ ಬೆಂಬಲಿತ 12 ಸದಸ್ಯರನ್ನು ಕರೆದೊಯ್ದಿದ್ದರು. ಈ ಮಧ್ಯೆ ಐನಾಪುರ ತಾ.ಪಂ. ಸದಸ್ಯ ಪ್ರೇಮಸಿಂಗ್ ಜಾಧವ ಮತ್ತು ಬಿಜೆಪಿ ಮುಖಂಡ ರಮೇಶ ಪಡಶೆಟ್ಟಿ, ರೇವಪ್ಪ ಉಪ್ಪಿನ್ ಅವರು ಕೈಚಳಕ ತೋರಿದ್ದು ಉಮ್ಲಿಬಾಯಿ ಬನ್ಸಿಲಾಲ್ ಸಹಿತ ಹಲವು ಸದಸ್ಯರನ್ನು ಬಿಜೆಪಿಗೆ ಸೇರಿಸುವಲ್ಲಿ ಸಫಲರಾಗಿದ್ದರು. ರಾಜಕೀಯ ಪಡಸಾಲೆಯಲ್ಲಿ ಇದು ಆಪರೇಷನ್ ಕಮಲ ಎಂದೇ ಬಿಂಬಿತವಾಗಿದೆ.

ಉಪಾಧ್ಯಕ್ಷರಾಗಿರುವ ಸಂಜೀವ ಕುಮಾರ ಡೊಂಗರಗಿ ಅವರು ಉಮೇಶ ಜಾಧವ ಕಾಂಗ್ರೆಸ್ ತೊರೆದಾಗ ಅವರೊಂದಿಗೆ ಬಿಜೆಪಿ ಸೇರಿದ್ದಾರೆ. ಒಂದು ಅವಧಿಗೆ ಗ್ರಾ.ಪಂ. ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಂಜೀವಕುಮಾರ ಡೊಂಗರಗಿ ಈಗ 2ನೇ ಬಾರಿಗೆ ಗ್ರಾ.ಪಂ. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.