
ಕಲಬುರಗಿ: ಜಿಲ್ಲೆಯ 67 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸುಸೂತ್ರವಾಗಿ ನಡೆಯಿತು. ಒಟ್ಟು ಎರಡು ಅವಧಿಯಲ್ಲಿ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 24,124 ಅಭ್ಯರ್ಥಿಗಳಲ್ಲಿ 1,237 ಜನ ಗೈರಾದರು. 22,887 ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಬೆಳಿಗ್ಗೆ ಮೊದಲ ಅವಧಿಯಲ್ಲಿ 17 ಕೇಂದ್ರಗಳಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ 5,070 ಜನರಲ್ಲಿ 4,748 ಅಭ್ಯರ್ಥಿಗಳು ಪರೀಕ್ಷೆ ಬರೆದರು. 322 ಅಭ್ಯರ್ಥಿಗಳು ಗೈರಾದರು. ಈ ಪೈಕಿ ಶ್ರೀಗುರು ಸಂಗಮೇಶ್ವರ ಇಂಗ್ಲಿಷ್ ಪ್ರೌಢಶಾಲೆ ಕೇಂದ್ರದಲ್ಲಿ ಅತಿಹೆಚ್ಚು ಅಂದರೆ 50 ಅಭ್ಯರ್ಥಿಗಳು ಗೈರಾಗಿದ್ದರು. ಧರಿಯಾಪುರದ ಸ್ಪಾರ್ಕಲ್ ಇಂಟರ್‌ನ್ಯಾಷನಲ್ ಶಾಲೆ ಕೇಂದ್ರದಲ್ಲಿ 41 ಜನ ಗೈರಾಗಿದ್ದರು.
ಮಧ್ಯಾಹ್ನ ಎರಡನೇ ಅವಧಿಯ ಪರೀಕ್ಷೆಯು 67 ಕೇಂದ್ರಗಳಲ್ಲಿ ನಡೆಯಿತು. ಪರೀಕ್ಷೆಗೆ ನೋಂದಾಯಿಸಿದ್ದ 19,054 ಅಭ್ಯರ್ಥಿಗಳ ಪೈಕಿ 18,139 ಜನ ಹಾಜರಾಗಿದ್ದರು. ಒಟ್ಟು 915 ಜನ ಗೈರಾದರು. ಈ ಪೈಕಿ ಧರಿಯಾಪುರದ ಸ್ಪಾರ್ಕಲ್ ಇಂಟರ್‌ನ್ಯಾಷನಲ್ ಶಾಲೆ ಕೇಂದ್ರದಲ್ಲಿ ಅತಿ ಹೆಚ್ಚು ಅಂದರೆ 103 ಜನ ಗೈರಾಗಿದ್ದರು. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು 299 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಇನ್ನು ಶ್ರೀಗುರು ಸಂಗಮೇಶ್ವರ ಇಂಗ್ಲಿಷ್ ಪ್ರೌಢಶಾಲೆ ಕೇಂದ್ರದಲ್ಲಿ 72 ಅಭ್ಯರ್ಥಿಗಳು ಗೈರಾಗಿದ್ದರು.
‘ಅಭ್ಯರ್ಥಿಗಳನ್ನು ತಂತ್ರಜ್ಞಾನ ಬಳಸಿ ತಪಾಸಣೆ ನಡೆಸಿದ ಬಳಿಕವೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡಲಾಯಿತು. ಅಲ್ಲದೇ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಎರಡೂ ಅವಧಿಯಲ್ಲಿ ಪರೀಕ್ಷೆಗಳು ಶಾಂತಿಯುತ ಮತ್ತು ಸುಸೂತ್ರವಾಗಿ ನಡೆದಿವೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.