ADVERTISEMENT

ತೊಗರಿ ಮಾರಾಟ | ವರ್ತಕರ ಮೇಲೆ ಹದ್ದಿನ ಕಣ್ಣು

ನಷ್ಟದಿಂದ ಪಾರಾಗಲು ಬೆಂಬಲ ಬೆಲೆ ಅಡಿ ತೊಗರಿ ಮಾರಾಟ: ಆರೋಪ

ಮಲ್ಲಿಕಾರ್ಜುನ ನಾಲವಾರ
ಇಮಾಮ್‌ಹುಸೇನ್‌ ಗೂಡುನವರ
Published 16 ಮೇ 2025, 0:30 IST
Last Updated 16 ಮೇ 2025, 0:30 IST
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದ ಖರೀದಿ ಕೇಂದ್ರದಲ್ಲಿ ತೊಗರಿ ಸ್ವಚ್ಛತೆಯಲ್ಲಿ ನಿರತರಾದ ರೈತರು
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದ ಖರೀದಿ ಕೇಂದ್ರದಲ್ಲಿ ತೊಗರಿ ಸ್ವಚ್ಛತೆಯಲ್ಲಿ ನಿರತರಾದ ರೈತರು   

ಕಲಬುರಗಿ/ ಬೆಳಗಾವಿ: ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಧಾರಣೆ ಕುಸಿದಿದೆ. ಈ ನಷ್ಟದ ಹೊರೆಯಿಂದ ಪಾರಾಗಲು ಕೆಲವು ವರ್ತಕರು ಅನ್ಯಮಾರ್ಗದ ಮೂಲಕ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಖರೀದಿ ಕೇಂದ್ರಗಳತ್ತ ಎಡತಾಕುತ್ತಿದ್ದಾರೆ. ಇಂತಹವರ ಮೇಲೆ ಕೃಷಿ ಮಾರಾಟ ಇಲಾಖೆಯು ಹದ್ದಿನ ಕಣ್ಣು ನೆಟ್ಟಿದೆ.

ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ತೊಗರಿಗೆ ₹6,500ರಿಂದ ₹7,000 ದರವಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಅಡಿ ಕ್ವಿಂಟಲ್‌ಗೆ ₹7,550 ದರ ನಿಗದಿಪಡಿಸಿದೆ. ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹450 ಪ್ರೋತ್ಸಾಹ ಧನ ಘೋಷಿಸಿದೆ. ಒಟ್ಟಾರೆ ಕ್ವಿಂಟಲ್‌ಗೆ ₹8 ಸಾವಿರ ಬೆಲೆ ದೊರೆಯಲಿದೆ.

ಹಾಗಾಗಿ, ಕೆಲವು ವರ್ತಕರು ಖರೀದಿ ಕೇಂದ್ರಗಳಲ್ಲಿ ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ ಕೃಷಿಕರಿಗೆ ಕಮಿಷನ್‌ ನೀಡಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆ ರೈತರ ಹೆಸರಿನಲ್ಲಿ ಎಂಎಸ್‌ಪಿ ಅಡಿ ತೊಗರಿ ಮಾರುತ್ತಿದ್ದಾರೆ ಎಂದು ರೈತ ಮುಖಂಡರು ದೂರಿದ್ದಾರೆ.  

ADVERTISEMENT

ತೊಗರಿ ಖರೀದಿಗೆ ರಾಜ್ಯದಲ್ಲಿ 516 ಕೇಂದ್ರ ತೆರೆಯಲಾಗಿದ್ದು, 1,64,774 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಇಲ್ಲಿಯವರೆಗೆ 1,38,974 ರೈತರಿಂದ 20.15 ಲಕ್ಷ ಕ್ವಿಂಟಲ್‌ ಖರೀದಿಸಲಾಗಿದೆ. ಪ್ರತಿ ರೈತರಿಂದ ಎಕರೆಗೆ ಗರಿಷ್ಠ 4 ಕ್ವಿಂಟಲ್‌ನಂತೆ, 10 ಎಕರೆಗೆ 40 ಕ್ವಿಂಟಲ್‌ ತೊಗರಿ ಮಾರಾಟಕ್ಕೆ ಅವಕಾಶವಿದೆ.

ಒಟ್ಟು ಕೇಂದ್ರಗಳ ಪೈಕಿ ಶೇ 36ರಷ್ಟು ಕೇಂದ್ರಗಳು (189) ಕಲಬುರಗಿ ಜಿಲ್ಲೆಯಲ್ಲಿವೆ. ಕಲಬುರಗಿಯಲ್ಲಿ ನೋಂದಾಯಿತ ಒಟ್ಟು 48,248 ರೈತರ ಪೈಕಿ 38,223 ರೈತರು ಈಗಾಗಲೇ 5.88 ಲಕ್ಷ ಕ್ವಿಂಟಲ್‌ ಮಾರಾಟ ಮಾಡಿದ್ದಾರೆ. ಉಳಿದ 10,025 ರೈತರಿಗೆ ತಮ್ಮ ಬಳಿಯ ತೊಗರಿ ಮಾರಲು ಮೇ 31ರ ವರೆಗೆ ಅವಕಾಶ ನೀಡಲಾಗಿದೆ.

ಕೇಂದ್ರ ಸರ್ಕಾರವು ಬೆಂಬಲ ಬೆಲೆ ಘೋಷಿಸಿದ್ದ ವೇಳೆ ಮುಕ್ತ ಮಾರುಕಟ್ಟೆಯಲ್ಲಿ ತೊಗರಿಗೆ ಹೆಚ್ಚಿನ ದರವಿತ್ತು. ಹಾಗಾಗಿ, ಖರೀದಿ ಕೇಂದ್ರಗಳು ರೈತರಿಲ್ಲದೆ ಬಿಕೋ ಎನ್ನುತ್ತಿದ್ದವು. ಈ‌ ಮಧ್ಯೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಘೋಷಿಸಿತು. ಕ್ವಿಂಟಲ್‌ ದರ ₹8 ಸಾವಿರಕ್ಕೆ ಮುಟ್ಟಿತು. ಮತ್ತೊಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿದಿದ್ದರಿಂದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಚುರುಕು ಪಡೆದಿತ್ತು.  

‌‌‘ದರ ಕುಸಿತದಿಂದಾಗಿ ಆರ್ಥಿಕ ಹೊರೆಯಿಂದ ಪಾರಾಗಲು ಕೆಲವು ವ್ಯಾಪಾರಿಗಳು ಪರಿಚಿತ ರೈತರ ದಾಖಲಾತಿ ಪಡೆದು ಅವರ ಹೆಸರನ್ನು ಎಂಎಸ್‌ಪಿ ಅಡಿ ನೋಂದಾಯಿಸುತ್ತಾರೆ. ಮಾರುಕಟ್ಟೆಯಲ್ಲಿ ಏಕಾಏಕಿ ದರ ಇಳಿಕೆಯಾದಾಗ ರೈತರ ಹೆಸರಿನಡಿ ತೊಗರಿ ಮಾರಾಟ ಮಾಡುತ್ತಾರೆ. ದಾಖಲಾತಿ ನೀಡಿದ ರೈತರಿಗೆ ಕಮಿಷನ್‌ ಕೊಡುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಚಿಂಚೋಳಿ ತಾಲ್ಲೂಕಿನ ವ್ಯಾಪಾರಿಯೊಬ್ಬರು ಹೇಳಿದರು.

ರೈತರ ಹೆಸರಿನಲ್ಲಿ ವ್ಯಾಪಾರಿಗಳು ನಮ್ಮಲ್ಲಿ ತೊಗರಿ ಮಾರಾಟ ಮಾಡದಂತೆ ತಡೆಯಲು ಅಗತ್ಯ ಕ್ರಮ ವಹಿಸಲಾಗಿದೆ
ವೆಂಕಣ್ಣ ಅಸ್ಕಿ ಅಧ್ಯಕ್ಷ ಪಿಕೆಪಿಎಸ್‌ ಕನ್ನಾಳ
ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ ರೈತರ ಬ್ಯಾಂಕ್‌ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಪಾವತಿಯಾಗಲಿದೆ. ರೈತರ ಹೆಸರು ದುರ್ಬಳಕೆಯಾಗದಂತೆ ತಡೆಯಲು ಕ್ರಮವಹಿಸಲಾಗಿದೆ
ಸಂತೋಷ್ ಬಡ್ಗೆ ಎಪಿಎಂಸಿ ಕಾರ್ಯದರ್ಶಿ ಕಲಬುರಗಿ
ವರ್ತಕರು ಕೆಲವು ರೈತರಿಗೆ ಕ್ವಿಂಟಲ್‌ ಲೆಕ್ಕದಲ್ಲಿ ಕಮಿಷನ್‌ ನೀಡಿ ಅವರ ಹೆಸರನ್ನು ನೋಂದಣಿ ಮಾಡಿಸಿ ತೊಗರಿ ಮಾರಾಟ ಮಾಡುವುದು ಸಕ್ರಿಯವಾಗಿದೆ
ರಾಮಚಂದ್ರ ರೈತ ಅಫಜಲಪುರ

‘ಖಾತರಿಪಡಿಸಿಕೊಂಡೇ ಖರೀದಿ’

‘ಕನಿಷ್ಠ ಬೆಂಬಲ ಬೆಲೆ ಅಡಿ ತೊಗರಿ ಮಾರಲು ಏಪ್ರಿಲ್‌ 24ರ ವರೆಗೆ ನೋಂದಣಿಗೆ ಅವಕಾಶವಿತ್ತು. ಅಷ್ಟರೊಳಗೆ ನೋಂದಾಯಿಸಿಕೊಂಡ ರೈತರಿಂದ ಮೇ 31ರ ವರೆಗೆ ಖರೀದಿ ಮಾಡುತ್ತೇವೆ’ ಎಂದು ಬೆಳಗಾವಿಯ ಜಿಲ್ಲಾ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಮಹಾದೇವಪ್ಪ ಚಬನೂರ ‘ಪ್ರಜಾವಾಣಿ’ಗೆ ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿನ 6 ಕೇಂದ್ರಗಳಿಗೆ ಬರುತ್ತಿರುವ ತೊಗರಿ  ರೈತರದ್ದೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಖರೀದಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಹೊಂದಾಣಿಕೆ ವ್ಯವಹಾರ

ತೊಗರಿ ಮಾರುಕಟ್ಟೆಗೆ ಬರುವ ಮೊದಲೇ ಕೆಲವು ವರ್ತಕರು ರೈತರಿಗೆ ಬಿತ್ತನೆ ಸೇರಿ ಇತರೆ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿರುತ್ತಾರೆ. ರೈತರು ಸಹ ಪಹಣಿ ಬ್ಯಾಂಕ್ ಖಾತೆ ಆಧಾರ್‌ ಕಾರ್ಡ್‌ ಅನ್ನು ಅಂತಹ ವರ್ತಕರಿಗೆ ನೀಡಿರುತ್ತಾರೆ. ವರ್ತಕರು ಈ ದಾಖಲೆಗಳ ಮೂಲಕ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸುತ್ತಾರೆ. ರೈತನ ಹೆಸರಿನಲ್ಲಿಯೇ ನೋಂದಣಿ ಮಾಡಲಾಗುತ್ತದೆ. ತೊಗರಿ ಮಾರಾಟದ ದುಡ್ಡು ರೈತನ ಖಾತೆಗೆ ಜಮೆ ಆಗುತ್ತದೆ. ಆ ದುಡ್ಡನ್ನು ರೈತ ವರ್ತಕನಿಗೆ ಕೊಡುತ್ತಾನೆ. ಇದೊಂದು ರೈತ ಮತ್ತು ವ್ಯಾಪಾರಿ ನಡುವಿನ ಹೊಂದಾಣಿಕೆಯಲ್ಲಿ ನಡೆಯುವ ವ್ಯವಹಾರವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ  ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.