ಚಿತ್ತಾಪುರ: ಕಾಗಿಣಾ ನದಿ ದಂಡೆಯಲ್ಲಿರುವ ತಾಲ್ಲೂಕಿನ ದಂಡೋತಿ, ಭಾಗೋಡಿ ಗ್ರಾಮಗಳ ಖಾಸಗಿ ಪಟ್ಟಾ ಜಮೀನಿನಲ್ಲಿ ಹಾಗೂ ಭಾಗೋಡಿ ಹತ್ತಿರದ ಕಾಗಿಣಾ ನದಿ ಪಾತ್ರ ಸೇರಿ ಒಟ್ಟು 1,35,677 ಚದರ್ ಮೀಟರ್ ಪ್ರದೇಶದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ,2,03,944 ಮೆಟ್ರಿಕ್ ಟನ್ ಮರಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡಿರುವುದು ಹಾಗೂ ಅನಧಿಕೃತ ಚಟುವಟಿಕೆಗೆ ₹ 2.3 ಕೋಟಿ ದಂಡ ವಿಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭಾಗೋಡಿ ಗ್ರಾಮದ ವ್ಯಾಪ್ತಿಯ ಕಾಗಿಣಾ ನದಿಯ 40 ಎಕರೆ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಗುತ್ತಿಗೆ ಪಡೆದ ಕೆ.ಆರ್.ಐ.ಡಿ.ಎಲ್ ಇಲಾಖೆಯು ಗುತ್ತಿಗೆ ಪ್ರದೇಶದ ಹೊರಗಡೆ ಒಟ್ಟು 94,462 ಚ.ಮೀ. ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಿದೆ. 9 ಎಕರೆ 38 ಗುಂಟೆ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ, ಗುತ್ತಿಗೆ ಪ್ರದೇಶದ ಹೊರಗೆ 2,143 ಚ.ಮೀ. ಪ್ರದೇಶದಲ್ಲಿ ಅನಧಿಕೃತ ಗಣಿಗಾರಿಕೆ ಮಾಡಿ 7,372 ಮೆಟ್ರಿಕ್ ಟನ್ ಮರಳು ಸಾಗಣೆ ಮಾಡಿರುವುದು ಬಯಲಿಗೆ ಬಂದಿದೆ.
ದಂಡೋತಿ ಗ್ರಾಮದ 7ಎಕರೆ 10 ಗುಂಟೆ ಮಂಜೂರಾತಿ ಗುತ್ತಿಗೆ ಪ್ರದೇಶದ ಹೊರಗಡೆ, ಮತ್ತೊಂದೆಡೆಯ 10 ಎಕರೆ 30 ಗುಂಟೆ ಗುತ್ತಿಗೆ ಪ್ರದೇಶದ ಹೊರಗಡೆ ಅನಧಿಕೃತ ಮರಳು ಗಣಿಗಾರಿಕೆ ಮಾಡಿ ಮರಳು ಅನಧಿಕೃತವಾಗಿ ಸಾಗಾಣಿಕೆ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಯು ತಾಲ್ಲೂಕು ಮರಳು ಉಸ್ತುವಾರಿ ಸಮಿತಿಗೆ ಏ.28ರಂದು ಜಾರಿ ಮಾಡಿದ ಪ್ರತಿ ಪ್ರಜಾವಾಣಿಗೆ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.