ADVERTISEMENT

ಕಲಬುರ್ಗಿಗೆ 2 ವಿಮಾನ ತರಬೇತಿ ಸಂಸ್ಥೆ

ಏಷ್ಯಾ ಪೆಸಿಫಿಕ್, ರೆಡ್ ಬರ್ಡ್‌ ಏವಿಯೇಷನ್‌ ಅಕಾಡೆಮಿಗೆ ಎಎಐ ಅಸ್ತು

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 3:33 IST
Last Updated 4 ಜೂನ್ 2021, 3:33 IST
ಕಲಬುರ್ಗಿಯಲ್ಲಿ ವಿಮಾನ ತರಬೇತಿ ಕೇಂದ್ರ ಆರಂಭಿಸಲು ಆಯ್ಕೆಯಾಗಿರುವ ನವದೆಹಲಿಯ ರೆಡ್ ಬರ್ಡ್‌ ಸಂಸ್ಥೆಯ ವಿಮಾನದ ಎದುರು ತರಬೇತಿ ನಿರತ ಮಹಿಳಾ ಪೈಲಟ್
ಕಲಬುರ್ಗಿಯಲ್ಲಿ ವಿಮಾನ ತರಬೇತಿ ಕೇಂದ್ರ ಆರಂಭಿಸಲು ಆಯ್ಕೆಯಾಗಿರುವ ನವದೆಹಲಿಯ ರೆಡ್ ಬರ್ಡ್‌ ಸಂಸ್ಥೆಯ ವಿಮಾನದ ಎದುರು ತರಬೇತಿ ನಿರತ ಮಹಿಳಾ ಪೈಲಟ್   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಯುವಜನರು ಪೈಲಟ್ ಆಗಬೇಕು ಎಂಬ ಕನಸಿಗೆ ನೀರೆರೆಯಲು ಮುಂದಾಗಿರುವ ಭಾರತೀಯ ವಿಮಾನಯಾನ ಪ್ರಾಧಿಕಾರವು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಎರಡು ಸಂಸ್ಥೆಗಳಿಗೆ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಅನುಮತಿ ನೀಡಿದೆ.

ಇದಕ್ಕೆ ಪೂರಕವಾಗಿ ಕೆಲಸ ಆರಂಭಿಸುವಂತೆ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹೈದರಾಬಾದ್‌ನ ಏಷ್ಯಾ ಪೆಸಿಫಿಕ್ ಹಾಗೂ ನವದೆಹಲಿಯ ರೆಡ್‌ ಬರ್ಡ್‌ ಏವಿಯೇಷನ್ ಅಕಾಡೆಮಿಗಳು ತರಬೇತಿ ಕೇಂದ್ರ ಆರಂಭಿಸಲು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದವು.

ವಿಮಾನ ನಿಲ್ದಾಣದಲ್ಲಿ ತರಬೇತಿಗಾಗಿ 5 ಸಾವಿರ ಚದರ ಮೀಟರ್ ಜಾಗ ಬಳಸಿಕೊಳ್ಳಲಿದ್ದು, ಇದರ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಸಂಸ್ಥೆಗಳೇ ಮಾಡಲಿವೆ. 30 ವರ್ಷಗಳ ಬಳಿಕ ವಿಮಾನ ನಿಲ್ದಾಣಕ್ಕೆ ಹಸ್ತಾಂತರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ADVERTISEMENT

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಕೇಂದ್ರ ಕಚೇರಿ ಹೊಂದಿರುವ ಏಷ್ಯಾ ಪೆಸಿಫಿಕ್ ವಿಮಾನ ತರಬೇತಿ ಅಕಾಡೆಮಿಯು ಜಿಎಂಆರ್‌ ಸಮೂಹಕ್ಕೆ ಸೇರಿದೆ. ವಿಮಾನ ನಿಲ್ದಾಣವನ್ನೂ ಜಿಎಂಆರ್‌ ನಿರ್ವಹಣೆ ಮಾಡುತ್ತಿದೆ. ಹಲವು ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪೈಲಟ್‌ ತರಬೇತಿ ನೀಡುತ್ತಿದೆ.

ಪ್ರೈವೇಟ್ ಪೈಲಟ್ ಲೈಸೆನ್ಸ್, ಕಮರ್ಷಿಯಲ್ ಪೈಲಟ್ ಲೈಸೆನ್ಸ್, ಮಲ್ಟಿ ಎಂಜಿನ್ ರೇಟಿಂಗ್, ಇನ್ಸ್ಟ್ರುಮೆಂಟ್ ರೇಟಿಂಗ್, ಅಸಿಸ್ಟಂಟ್ ಇನ್‌ಸ್ಟ್ರಕ್ಟರ್ ರೇಟಿಂಗ್, ಫ್ಲೈಟ್ ಇನ್‌ ಸ್ಟ್ರಕ್ಟರ್ ರೇಟಿಂಗ್, ಟೈಪ್ ರೇಟಿಂಗ್ ಕೋರ್ಸ್‌ಗಳನ್ನು ಸಂಸ್ಥೆ ಕಲಿಸಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.