ADVERTISEMENT

ಕಲಬುರಗಿ: ಯುಜಿಸಿ ಹೊಸ ನಿಯಮ ಜಾರಿಗೆ ಆಗ್ರಹಿಸಿ ಫೆ.9ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:22 IST
Last Updated 3 ಫೆಬ್ರುವರಿ 2026, 5:22 IST
ಡಿ.ಜಿ.ಸಾಗರ
ಡಿ.ಜಿ.ಸಾಗರ   

ಕಲಬುರಗಿ: ‘ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಮೇಲೆ ಧರ್ಮ–ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ, ಕಿರುಕುಳ, ದೌರ್ಜನ್ಯ ತಡೆಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಸಂಘಟನೆ ಸ್ವಾಗತಿಸುತ್ತದೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆದರೆ ನಿಯಮಗಳಿಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಕೇಂದ್ರ ಸರ್ಕಾರ ತಡೆಯಾಜ್ಞೆ ತೆರವುಗೊಳಿಸಬೇಕು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರತ್ಯೇಕ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿ ಫೆ.9ರಂದು ಬೆಳಿಗ್ಗೆ 11.30ಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಜಾತಿ ತಾರತಮ್ಯ ಮತ್ತು ಕಿರುಕುಳ ಕಾರಣದಿಂದಾಗಿ ಮೇಲ್ವರ್ಗದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿಲ್ಲ. ಆದರೆ ಕೆಳವರ್ಗದವರು ಆತ್ಮಹತ್ಯೆ ಮಾಡಿಕೊಂಡಿರುವ ನೂರಾರು ಉದಾಹರಣೆಗಳಿವೆ. ಹೈದರಾಬಾದ್‌ ಕೇಂದ್ರೀಯ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ ವೇಮುಲ, ವೈದ್ಯಕೀಯ ವಿದ್ಯಾರ್ಥಿನಿ ಪಾಯ‌ಲ್‌, ಬಾಂಬೆ ಐಐಟಿ ವಿದ್ಯಾರ್ಥಿ ದರ್ಶನ ಸೋಳಂಕಿ ಸೇರಿದಂತೆ ಸಾಕಷ್ಟು ವಿದ್ಯಾರ್ಥಿಗಳ ಪಟ್ಟಿಯೇ ಇದೆ. 2007ರಿಂದ 2011ರ ಅವಧಿಯಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವೇ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಂಕಿ ಅಂಶಗಳಲ್ಲಿ ತಿಳಿಸಿದೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಯುಜಿಸಿ ತಂದಿರುವ ನಿಯಮದ ವಿರುದ್ಧ ಮೇಲ್ವರ್ಗದವರು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಅನೇಕ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಹೋರಾಟಕ್ಕಿಳಿದಿದ್ದಾರೆ. ಇಂತಹ ನಾಟಕೀಯ ಬೆಳವಣಿಗೆಗಳನ್ನು ಕಂಡು ತರ್ಕಿಸದೇ ಸುಪ್ರೀಂ ಕೋರ್ಟ್‌ ನಿಯಮಗಳಿಗೆ ತಡೆಯಾಜ್ಞೆ ನೀಡಿದ್ದು, ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಹೀಗಾಗಿ ಹಿಂದುಳಿದ ವಿದ್ಯಾರ್ಥಿಗಳ ಹಿತಕಾಯುವುದಕ್ಕಾಗಿ ‘ರೋಹಿತ ವೇಮುಲ’ ಕಾಯ್ದೆಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು. 

ದಸಂಸ ಮಾರ್ಗದರ್ಶಕ ಎಸ್‌.ಪಿ.ಸುಳ್ಳದ, ರಾಜ್ಯ ಖಜಾಂಚಿ ಬಿ.ಸಿ.ವಾಲಿ, ಜಿಲ್ಲಾ ಮುಖಂಡರಾದ ಸುರೇಶ ಹಾದಿಮನಿ, ಉಮೇಶ ನರೋಣ, ಎಚ್‌.ಶಂಕರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.