ADVERTISEMENT

ದೇಶದ ಭವಿಷ್ಯ ಸಂವಿಧಾನದಲ್ಲಿದೆ: ಪ್ರವೀಣ ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:42 IST
Last Updated 18 ಫೆಬ್ರುವರಿ 2026, 5:42 IST
ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿಯನ್ನು ಪ್ರವೀಣ ಗುತ್ತೇದಾರ ಉದ್ಘಾಟಿಸಿದರು
ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿಯನ್ನು ಪ್ರವೀಣ ಗುತ್ತೇದಾರ ಉದ್ಘಾಟಿಸಿದರು   

ಅಫಜಲಪುರ: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ 17ನೇ ವಿಧಿಯ ಮೂಲಕ ಅಸ್ಪೃಶ್ಯತೆಯನ್ನು ಕಾನೂನು ಬಾಹಿರಗೊಳಿಸಿದರು ಮತ್ತು ದಲಿತರಿಗೆ ಸಮಾನತೆ, ಶಿಕ್ಷಣ ಹಾಗೂ ರಾಜಕೀಯ ಮೀಸಲಾತಿ ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಅವಿರತವಾಗಿ ಶ್ರಮಿಸಿದರು’ ಎಂದು ಹಿರಿಯ ಮುಖಂಡರಾದ ಪ್ರವೀಣ ಗುತ್ತೇದಾರ ತಿಳಿಸಿದರು.

ತಾಲ್ಲೂಕಿನ ಅತನೂರ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಾಮ್ರಾಟ ಅಶೋಕ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ದೇಶದ ಭವಿಷ್ಯ ಸಂವಿಧಾನದಲ್ಲಿದೆ. ಎಲ್ಲರೂ ಕಾನೂನು ಚೌಕಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಬೇಕು. ಸಮಾಜಕ್ಕೆ ಅಂಟಿಕೊಂಡಿರುವ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಯುವಕರು ಮುಂದಾಗಬೇಕು’ ಎಂದು ಕರೆ ನೀಡಿದರು.

ADVERTISEMENT

ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಹಾಗೂ ಶಿಕ್ಷಕ ರಾಜೇಸಾಬ್ ಕಸಾಯಿ ಮಾತನಾಡಿ, ‘ಭಾರತದಲ್ಲಿ ಅಸ್ಪೃಶ್ಯತೆಯು ಒಂದು ಗಂಭೀರ ಸಾಮಾಜಿಕ ಪಿಡುಗಾಗಿದೆ. ಯಾವುದೇ ಕಾನೂನು ಕಟ್ಟಳೆಗಳಿಂದ ಅಸ್ಪೃಶ್ಯತೆ ನಿವಾರಣೆ ಮಾಡುವುದು ಕಷ್ಟ. ಸಾರ್ವಜನಿಕರ ಸಹಕಾರ, ಬೀದಿ ನಾಟಕ ಮತ್ತಿತರ ಚಟುವಟಿಕೆಗಳ ಮೂಲಕ ಜನರ ಮನಸ್ಸನ್ನು ಬದಲಾಯಿಸಲು ಸಾಧ್ಯವಿದೆ’ ಎಂದರು.

ಸಿದ್ದರಾಮಪ್ಪಗೌಡ ಪಾಟೀಲ ಅಸ್ಪೃಶ್ಯತೆ ನಿರ್ಮೂಲನೆ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಶರಣಬಸು ಕಲಬುರಗಿ ಸಂವಿಧಾನದ ಪೀಠಿಕೆ ಪ್ರತಿಗಳನ್ನು ಬಿಡುಗಡೆ ಮಾಡಿದರು.

ನಿವೃತ್ತ ಶಿಕ್ಷಕ ಮಲ್ಲೇಶಪ್ಪ ಈರಣ್ಣ ಜಮಾದಾರ, ಶಿಕ್ಷಕರಾದ ಈಶ್ವರ ಪೂಜಾರಿ, ರೂಬಿನಾ ನದಾಫ್, ಮಲ್ಲು ಚವ್ಹಾಣ, ವಂದನಾ, ಗುರು ಶಾಂತಪ್ಪ ಪವಾಡೆ, ಚಂದ್ರಕಾಂತ ಹೂಗಾರ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಪಾಲಕ ವಿಜಯಕುಮಾರ, ರಾಜಲಕ್ಷ್ಮೀ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷೆ ಸರಸ್ವತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಭಾಗಣ್ಣ ಕಟ್ಟಿ ಕೋಳಕೂರ ನಿರೂಪಿಸಿದರು. ಅರುಣಕುಮಾರ ಇನಾಂದಾರ್‌ ಸ್ವಾಗತಿಸಿದರು. ಶಶಿಕುಮಾರ ಶಹಬಾದ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.