
ವಾಡಿ: ‘ಬಂಡವಾಳ ಶಾಹಿ ವ್ಯವಸ್ಥೆಯ ಕಪಿಮುಷ್ಠಿಗೆ ಸಿಲುಕಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ತತ್ತರಿಸಿ ಹೋಗುತ್ತಿವೆ. ದುಡ್ಡಿದ್ದರೆ ಬದುಕು ಇಲ್ಲದಿದ್ದರೆ ಮಸಣ ಸೇರು ಎಂಬ ತಿರುಳು ಹೊಂದಿರುವ ಈ ವ್ಯವಸ್ಥೆಯ ರೂವಾರಿಗಳಾದ ರಾಜಕೀಯ ಪಕ್ಷಗಳು ಸಂತಸ ಹೆಚ್ಚಿಸುವ ಮಾತನಾಡುತ್ತಾ ಸಂಕಟ ತಂದೊಡ್ದುತ್ತವೆ’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್ ಹೇಳಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವಾಡಿ ಘಟಕದ ವತಿಯಿಂದ ಭಾನುವಾರ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಶಾಲೆಯ ಸಭಾಂಗಣದಲ್ಲಿ ಜನಪರ ಶಿಕ್ಷಣ ನೀತಿಗಾಗಿ ಜನ ಸಂಸತ್ತು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಕೆಪಿಎಸ್ ಮ್ಯಾಗ್ನೇಟ್ ಶಾಲೆ ಹೆಸರಲ್ಲಿ ರಾಜ್ಯದ 40 ಸಾವಿರ ಶಾಲೆಗಳ ಮಾರಣಹೋಮ ನಡೆಸಲು ಹೊರಟಿರುವ ಸರ್ಕಾರದ ಷಡ್ಯಂತ್ರ ಸೋಲಿಸಲು ಜನತೆ ಹೋರಾಟದ ಕಣಕ್ಕೆ ಧುಮುಕಬೇಕು’ ಎಂದು ಕರೆ ನೀಡಿದರು.
‘ಪ್ರತಿ ಪಂಚಾಯತಿಗೊಂದರಂತೆ 6 ಸಾವಿರ ಕೆಪಿಎಸ್ ಶಾಲೆ ತೆರೆದು ಅವುಗಳ ನಿರ್ವಹಣೆ ಖಾಸಗಿಯವರಿಗೆ ನೀಡಲಾಗುವುದು ಎಂದು ಸರ್ಕಾರ ಬಹಿರಂಗವಾಗಿ ಹೇಳಿದ್ದು, ಲಕ್ಷಾಂತರ ಶಿಕ್ಷಕರ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಅಮೇರಿಕದಲ್ಲಿ ವಿಫಲವಾಗಿರುವ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಹೊರಟಿರುವುದು ಅತ್ಯಂತ ಜನದ್ರೋಹದ ಕೆಲಸವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ ಮಾತನಾಡಿ, ‘ನೂತನ ಶಿಕ್ಷಣ ಪದ್ಧತಿ ತೆಗೆದು ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅವುಗಳನ್ನು ಯಥಾವತ್ತಾಗಿ ಮತ್ತಷ್ಟು ಕರಾಳವಾಗಿ ಜಾರಿ ಮಾಡುವ ಮೂಲಕ ಜನಕ್ಕೆ ಮೋಸ ಮಾಡುತ್ತಿದೆ. ನಾಗರಿಕ ಹಕ್ಕುಗಳಿಗಾಗಿ ಜನಹೋರಾಟ ಬೆಳೆದು ದುಷ್ಟ ರಾಜಕಾರಣ ಸೋಲಿಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಸದಸ್ಯೆ ಪದ್ಮರೇಖಾ ಆರ್.ಕೆ.ಮಾತನಾಡಿ, ಸರ್ಕಾರಗಳೆ ಜನರನ್ನು ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ದಬ್ಬುವ ಹಾಗೇ ಮಾಡಿ ದಾಖಲಾತಿ ಕುಸಿಯುವಂತೆ ಮಾಡಿದೆ. ಈಗ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹರಾಜಿಗೆ ಇಡಲಾಗುತ್ತಿದೆ ಎಂದು ಕಿಡಿಕಾರಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಈರಣ್ಣ ಯಲಗಟ್ಟಿ, ಸಾಯಬಣ್ಣ ನಾಟೇಕಾರ, ಶೇಖ್ ಅಲ್ಲಾಭಕ್ಷ, ರಜನಿ ಪಾಟೀಲ, ಶರಣು ಹೆರೂರು, ಕವಿತಾ ಪಾಟೀಲ, ರಾಜೇಶ್ವರಿ ಇಸಾಫ, ಭೀಮರೆಡ್ಡಿ, ಅಶೋಕ ಹೂಗಾರ ಇನ್ನಿತರರು ಇದ್ದರು. ಶರಣಕುಮಾರ ದೋಶೆಟ್ಟಿ ಸ್ವಾಗತಿಸಿದರು. ಸೀತಾ ಹೇರೂರ ನಿರೂಪಿಸಿದರು. ಸಾಯಬಣ್ಣ ನಾಟೇಕಾರ ವಂದಿಸಿದರು.
ಸಮಿತಿ ರಚನೆ ರಮೇಶ ಮಾಶಾಳಕರ (ಅಧ್ಯಕ್ಷ) ಸಾಯಬಣ್ಣ ನಾಟೇಕಾರ(ಉಪಾಧ್ಯಕ್ಷ) ಶರಣುಕುಮಾರ ದೋಶೆಟ್ಟಿ (ಕಾರ್ಯದರ್ಶಿ) ಸದಸ್ಯರಾಗಿ ಪದ್ಮರೇಖಾ ಆರ್.ಕೆ.ಸೀತಾಬಾಯಿ ಹೆರೂರು ಶ್ರೀಶರಣ ಗೋದಾವರಿ ಕಾಂಬ್ಳೆ ಜಯಶ್ರೀ ರಾಠೋಡ ಶ್ರೀದೇವಿ ಮಲಕಂಡಿ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಅಶೋಕ ಹೂಗಾರ ಭೀಮರೆಡ್ಡಿ ಕವಿತಾ ಪಾಟೀಲ ಒಳಗೊಂಡ ನೂತನ ಸಮಿತಿ ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.