
ಯಡ್ರಾಮಿ: ‘ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖ ಮತ್ತು ಶಾಂತಿಗೆ ಧರ್ಮ ಪರಿಪಾಲನೆ ಬಹಳ ಮುಖ್ಯ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಈ ನಾಡಿನ ಮಠಗಳು ಭಕ್ತರಿಗೆ ಸಂಸ್ಕಾರ ಕೊಡುವ ಜ್ಞಾನ ಕೇಂದ್ರಗಳಾಗಿವೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಹೇಳಿದರು.
ತಾಲ್ಲೂಕಿನ ಮಾಗಣಗೆರೆಯಲ್ಲಿ ಭಾನುವಾರ ರುದ್ರಮುನೀಶ್ವರ ಹಿರೇಮಠದ ಶ್ರೀಗುರು ಪಟ್ಟಾಧಿಕಾರ ಅಂಗವಾಗಿ ನಡೆದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘130 ವರ್ಷದಿಂದ ನಿಂತು ಹೋಗಿದ್ದ ಮಾಗಣಗೆರೆ ರುದ್ರಮುನೀಶ್ವರ ಹಿರೇಮಠಕ್ಕೆ ದಾನಯ್ಯ ದೇವರನ್ನು ನಿಯುಕ್ತಿಗೊಳಿಸಿ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಪಟ್ಟಾಧಿಕಾರ ನೆರವೇರಿಸಿ ಏಕಾಕ್ಷರ ಶಿವಾಚಾರ್ಯ ಸ್ವಾಮೀಜಿ ಎಂಬ ಪಂಚ ಮುದ್ರಾ ಅನುಗ್ರಹಿಸಿ ಆಶೀರ್ವದಿಸಲಾಗಿದೆ’ ಎಂದರು.
ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಾತನಾಡಿ, ‘ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದ ಧರ್ಮ. ಜೀವ ಶಿವನಾಗಲು, ಅಂಗ ಲಿಂಗವಾಗಲು, ನರ ಹರನಾಗಲು, ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಈ ಧರ್ಮದ ಸಂವಿಧಾನದಿಂದ ಅರಿಯಲು ಸಾಧ್ಯವಿದೆ’ ಎಂದರು.
ನೂತನ ಪಟ್ಟಾಧ್ಯಕ್ಷ ಏಕಾಕ್ಷರ ಶಿವಾಚಾರ್ಯ ಸ್ವಾಮೀಜಿ,‘ವೀರಶೈವ ಧರ್ಮ ಪರಂಪರೆಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಯೋಗ್ಯ ಗುರುವಿನಿಂದ ಭಕ್ತರ ಕಲ್ಯಾಣ ಸಾಧ್ಯ. ರಂಭಾಪುರಿ ಶ್ರೀಗಳ ಆಶೀರ್ವಾದ ಬಲದಿಂದ ಮಠದ ಭಕ್ತರಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡುತ್ತೇನೆ ಎಂದರು.
ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ‘ಶಿವಪಥ ಅರಿಯಲು ಗುರುವಿನ ಮಾರ್ಗದರ್ಶನ ಮುಖ್ಯ. ಮಾಗಣಗೆರೆ ರುದ್ರಮುನೀಶ್ವರ ಹಿರೇಮಠಕ್ಕೆ ನೂತನ ಶ್ರೀಗಳವರು ಆಗಮಿಸಿರುವುದು ಈ ಭಾಗದ ಭಕ್ತರಿಗೆ ಬಹಳಷ್ಟು ಸಂತೋಷವಾಗಿದೆ ಎಂದರು.
ಮಾಗಣಗೆರೆ ಬೃಹನ್ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆಲೂರು ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯ, ಹಿರೇಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಬಡದಾಳ, ಸಿದ್ಧರಬೆಟ್ಟ, ನಾಗಣಸೂರು, ಕಾರಭೋಸಗಾ, ಶಖಾಪುರ, ಕಡಕೋಳ, ಆಲಮೇಲ, ಐನಾಪುರ, ಯಂಕಂಚಿ, ಕೊಣ್ಣೂರು ಶ್ರೀಗಳವರು ಉಪಸ್ಥಿತರಿದ್ದರು.
ಶಾಸಕ ಡಾ.ಅಜಯ ಸಿಂಗ್, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಶಿವರಾಜ್ ಪಾಟೀಲ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.