ADVERTISEMENT

ಕಲಬುರಗಿ ಮುಖೇನ ವಿಸ್ಟಾಡೋಮ್ ಬೋಗಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 19:48 IST
Last Updated 11 ಆಗಸ್ಟ್ 2022, 19:48 IST
ಪುಣೆ-ಸಿಕಂದರಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲ್ವೆಯ ವಿಸ್ಟಾಡೋಮ್‌ ಬೋಗಿ
ಪುಣೆ-ಸಿಕಂದರಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲ್ವೆಯ ವಿಸ್ಟಾಡೋಮ್‌ ಬೋಗಿ   

ಕಲಬುರಗಿ: ರೈಲ್ವೆ ಪ್ರವಾಸೋದ್ಯಮ ಉತ್ತೇಜಿಸಲು ಹೊಸ ವಿನ್ಯಾಸದೊಂದಿಗೆ ಪರಿಚಯಿಸಲಾದ ವಿಸ್ಟಾಡೋಮ್‌ ಬೋಗಿಯ ರೈಲೊಂದು ಕಲಬುರಗಿ ಮಾರ್ಗದಲ್ಲಿ ಸಂಚರಿಸುತ್ತಿದೆ.

ಮಧ್ಯ ರೈಲ್ವೆ ವಲಯದ ಐದನೇ ವಿಸ್ಟಾಡೋಮ್‌ ಬೋಗಿಯನ್ನು ಸೋಲಾಪುರ, ಕಲಬುರಗಿ, ವಾಡಿ, ವಿಕರಾಬಾದ್‌ ನಡುವೆ ಸಂಚರಿಸುವ ಪುಣೆ - ಸಿಕಂದರಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಜೋಡಿಸಲಾಗಿದೆ. ಮಂಗಳವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಸಂಚರಿಸುತ್ತಿದೆ. ಪ್ರಯಾಣಿಕರು ರೈಲು ಪ್ರಯಾಣದ ವೇಳೆ ರಸ್ತೆಯ ರಮಣೀಯ ದೃಶ್ಯಗಳನ್ನು ಆನಂದಿಸಬಹುದು.

ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪುಣೆಯಿಂದ ಬೆಳಿಗ್ಗೆ 6ಕ್ಕೆ ಹೊರಟ ಶತಾಬ್ದಿ ಎಕ್ಸ್‌ಪ್ರೆಸ್ ಅದೇ ದಿನ 10.38ಕ್ಕೆ ಕಲಬುರಗಿ ಹಾಗೂ ಮಧ್ಯಾಹ್ನ 2.20ಕ್ಕೆ ಸಿಕಂದರಾಬಾದ್ ತಲುಪಲಿದೆ. ಸಿಕಂದರಾಬಾದ್‌ನಿಂದ ಮಧ್ಯಾಹ್ನ 2.45ಕ್ಕೆ ಹೊರಟು ಅದೇ ದಿನ ಸಂಜೆ 5.57ಕ್ಕೆ ಕಲಬುರಗಿ ಹಾಗೂ ರಾತ್ರಿ 11.10ಕ್ಕೆ ಪುಣೆ ತಲುಪಲಿದೆ.

ADVERTISEMENT

‘ಮಧ್ಯ ರೈಲ್ವೆ ವಲಯದ ಸಿಎಸ್‌ಎಂಟಿ-ಮಡಗಾಂವ್ ನಡುವೆ ಜನ ಶತಾಬ್ದಿ, ಪ್ರಗತಿ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್ ಮತ್ತು ಡೆಕ್ಕನ್ ಎಕ್ಸ್‌ಪ್ರೆಸ್‌ನ ವಿಸ್ಟಾಡೋಮ್‌ಗೆ ಪ್ರಯಾಣಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 31,821 ಪ್ರಯಾಣಿಕರು ವಿಸ್ಟಾಡೋಮ್‌ನಲ್ಲಿ ಪ್ರಯಾಣಿಸಿದ್ದು, ₹3.99 ಕೋಟಿ ಆದಾಯ ದಾಖಲಾಗಿದೆ. ಇದರಿಂದ ಪ್ರೇರಣೆಗೊಂಡು ಪುಣೆ–ಸಿಕಂದರಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಪ್ರಾಯೋಗಿಕವಾಗಿ ಒಂದು ಬೋಗಿ ಅಳವಡಿಸಲಾಗಿದೆ’ ಎಂದು ಸೋಲಾಪುರ ವಿಭಾಗದ ಮಾಧ್ಯಮ ವಕ್ತಾರ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಸ್ಟಾಡೋಮ್‌ ಅನ್ನು ಐದನೇ ಮಾರ್ಗವಾದ ಪುಣೆ–ಸಿಕಂದರಬಾದ್‌ ನಡುವೆ ಮಂಗಳವಾರ ಹೊರತುಪಡಿಸಿ ಸಂಚರಿಸಲಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಾದರೆ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.

ಶತಾಬ್ದಿ ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಉಜನಿ ಹಿನ್ನೀರು ಮತ್ತು ಭಿಗ್ವಾನ್ ಬಳಿಯ ಅಣೆಕಟ್ಟೆಯ ವಿಹಂಗ ನೋಟ ಸವಿಯಬಹುದು. ವಲಸೆ ಹಕ್ಕಿಗಳಿಗೆ ಹೆಸರುವಾಸಿಯಾದ ವಿಕಾರಾಬಾದ್ ಸಮೀಪದ ಅನಂತಗಿರಿ ಬೆಟ್ಟಗಳ ಕಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಕಲಬುರಗಿ– ಮರತೂರು ನಡುವೆ ಆಗಾಗ ಕಾಣಿಸಿಕೊಳ್ಳುವ ನವಿಲುಗಳನ್ನು ಸಹ ವೀಕ್ಷಿಸಬಹುದು.

ವಿಸ್ಟಾಡೋಮ್ ವಿಶೇಷತೆ ಏನು?

ವಿಸ್ಟಾಡೋಬ್‌ ಬೋಗಿಯ ಬಹುತೇಕ ಭಾಗ ಪಾರದರ್ಶಕವಾಗಿ ಇರಲಿದೆ. 360 ಡಿಗ್ರಿ ತಿರುಗುವ 44 ಆಸನಗಳು, ಆಕರ್ಷಕ ಒಳಾಂಗಣ ವಿನ್ಯಾಸ, ವೈಫೈ ಸವಲತ್ತು, ಸಿಸಿಟಿವಿ, ಪ್ರತಿ ಸೀಟ್‌ಗೆ ಮೊಬೈಲ್‌ ಚಾರ್ಜರ್‌, ಜಿಪಿಎಸ್‌ ವ್ಯವಸ್ಥೆ, ಫ್ರಿಡ್ಜ್‌, ಸೀಟ್‌ಗಳಿಗೆ ಮಡಚುವ ಟೇಬಲ್ ವ್ಯವಸ್ಥೆ, ಎಲ್‌ಇಡಿ ಪರದೆ, ಲಗೇಜ್ ಬಾಕ್ಸ್, ಕಾಫಿ ತಯಾರಿಕೆ ಯಂತ್ರ, ವಾಶ್‌ಬೇಸಿನ್ ಸೌಕರ್ಯಗಳು ಇರಲಿವೆ.

ಸ್ಟಾಡೋಮ್‌ ಬೋಗಿಗಳು ವಿಶಿಷ್ಟವಾಗಿದ್ದು, ಪ್ರಯಾಣಿಕರು ಹಾಗೂ ಪ್ರವಾಸಿಗರನ್ನು ಬಹುವಾಗಿ ಸೆಳೆಯುತ್ತವೆ. ಪ್ರಯಾಣಿರು ಕುಳಿತಲ್ಲೇ 360 ಡಿಗ್ರಿ ಸುತ್ತಿ ಸುತ್ತಲ್ಲಿನ ಸೌಂದರ್ಯ ನೋಡಬಹುದು. ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

ಎಸ್‌. ಮೋನಿ, ಕಲಬುರಗಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ

ಹಿಂದುಳಿದ ಭಾಗ ಎಂಬ ಹಣೆಪಟ್ಟಿಯಿಂದ ಹೊರ ಬರಲು ಇಂತಹ ಅತ್ಯಾಧುನಿಕ ಸಾರಿಗೆ ಸೌಕರ್ಯಗಳು ಇನ್ನಷ್ಟು ಹೆಚ್ಚಾಗಬೇಕು. ಬೆಂಗಳೂರು ಮಾರ್ಗದ ರೈಲ್ವೆಗೂ ವಿಸ್ಟಾಡೋಮ್‌ ಅಳವಡಿಸಿದರೆ ಹೆಚ್ಚು ಅನುಕೂಲವಾಗಲಿದೆ.
ಅನಿಲ್‌ಕುಮಾರ ಜಾಧವ, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.