
ಕಲಬುರಗಿ: ನಿರೀಕ್ಷೆಯಂತೆ ಕಲಬುರಗಿ–ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಅವಿರೋಧ ಆಯ್ಕೆ ನಡೆದಿದೆ.
ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪೇಠ ಅಮ್ಮಾಪುರದ ವಿಠಲ ಯಾದವ ಹಾಗೂ ಉಪಾಧ್ಯಕ್ಷರಾಗಿ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕಾನಾಗಡ್ಡಾದ ಶಂಕರ ಚಂದ್ರಶೇಖರ ಭೂಪಾಲ್ ಆಯ್ಕೆಯಾಗಿದ್ದಾರೆ.
ನಗರದ ಐವಾನ್–ಎ–ಶಾಹಿ ಅತಿಥಿಗೃಹದಲ್ಲಿ ಬೆಳಿಗ್ಗೆ ನಡೆದ ಸಚಿವರು, ಶಾಸಕರ, ಮುಖಂಡರ ಸಭೆಯಲ್ಲಿ ‘ಒಮ್ಮತ’ದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಉಭಯ ಸ್ಥಾನಗಳಿಗೂ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು.
‘ಅಧ್ಯಕ್ಷ–ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ’ ಎಂದು ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣಾ ಅಧಿಕಾರಿಯಾಗಿರುವ ಕೆಕೆಆರ್‌ಡಿಬಿ ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ ಪ್ರಕಟಿಸಿದರು.
ವಿಠಲ್ ಯಾದವ ಯಾದಗಿರಿ ಜಿಲ್ಲೆಯ ಸುರಪುರ ಪಿಕೆಪಿಎಸ್ ಕ್ಷೇತ್ರದಿಂದ ಗೆದ್ದು ಡಿಸಿಸಿ ಬ್ಯಾಂಕ್ ಪ್ರವೇಶಿಸಿದ್ದರು. ಶಂಕರ್ ಭೂಪಾಲ್ ಅವರು ಸೇಡಂ ಪಿಕೆಪಿಎಸ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ನ.9ರಂದು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಮತದಾನ ನಡೆದಿತ್ತು. ಅದರಲ್ಲಿ ಆರು ಕಾಂಗ್ರೆಸ್ ಬೆಂಬಲಿತರು ಗೆಲುವಿನ ನಗೆ ಬೀರಿದ್ದರು. ಇನ್ನುಳಿದ ಎರಡು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ ಒಂದು ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದರು. ಚುನಾವಣೆಗೂ ಮುನ್ನವೇ ನಾಲ್ಕು ಕ್ಷೇತ್ರಗಳಿಂದ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರಿಂದ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು.
ವಿಜಯೋತ್ಸವ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಬೆನ್ನಲ್ಲೇ ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರನ್ನು ಶಾಲು ಹೊದಿಸಿ, ಹಾರ ಹಾಕಿ ಬೆಂಬಲಿಗರು ಸನ್ಮಾನಿಸಿದರು.
‘ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವೆ’
‘ಉಭಯ ಜಿಲ್ಲೆಗಳ ಸಚಿವರು ಶಾಸಕರು ಬ್ಯಾಂಕ್ ನಿರ್ದೇಶಕರ ಸಹಕಾರದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಅಪೆಕ್ಸ್ ಬ್ಯಾಂಕ್ ನಬಾರ್ಡ್ ನೆರವು ಪಡೆದು ಉಭಯ ಜಿಲ್ಲೆಗಳ ರೈತರಿಗೆ ಅನುಕೂಲ ಕಲ್ಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ’ ಎಂದು ಕೆ–ವೈ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ವಿಠಲ ಯಾದವ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹುಸಿಯಾದ ನಿರೀಕ್ಷೆ; ‘ಮೌನ’ ಅಸಮಾಧಾನ
‘ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಆಯ್ಕೆಯಲ್ಲಿ ಹಿರಿಯರನ್ನು ಪರಿಗಣಿಸುವ ನಿರೀಕ್ಷೆ ಹುಸಿಯಾಗಿದೆ. ‘ಅನುಭವ’ಕ್ಕಿಂತಲೂ ‘ಹೊಸ ಮುಖ’ಗಳಿಗೆ ಆದ್ಯತೆ ನೀಡಲಾಗಿದೆ’ ಎಂಬ ಅಸಮಾಧಾನ ಗುಪ್ತಗಾಮಿನಿಯಾಗಿದೆ. ನೂತನ ಅಧ್ಯಕ್ಷರಾಗಿರುವ ವಿಠಲ ಯಾದವ ಎರಡನೇ ಬಾರಿಗೆ ಗೆದ್ದು ಡಿಸಿಸಿ ಬ್ಯಾಂಕ್ ಪ್ರವೇಶಿಸಿದ್ದಾರೆ. ಮೊದಲ ಸಲ ಗೆದ್ದಿರುವ ಶಂಕರ ಭೂಪಾಲ ಅವರಿಗೆ ಉಪಾಧ್ಯಕ್ಷ ಹುದ್ದೆ ಒಲಿದಿದೆ. ‘ಅಚ್ಚರಿಯ ಅಭ್ಯರ್ಥಿ’ಯಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಸುನೀಲಕುಮಾರ ದೊಡಮನಿ ಅವರಿಗೆ ‘ಅಪೆಕ್ಸ್ ಬ್ಯಾಂಕ್ ನಿರ್ದೇಶಕ’ರಾಗುವ ಅವಕಾಶ ಧಕ್ಕಿದೆ.
ಅಪೆಕ್ಸ್ ಬ್ಯಾಂಕ್‌ಗೆ ಸುನೀಲ ಪ್ರತಿನಿಧಿ
ನೂತನ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯ ಬೆನ್ನಲ್ಲೆ ನೂತನ ಅಧ್ಯಕ್ಷ ವಿಠಲ ಯಾದವ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಮೊದಲ ಸಭೆ ನಡೆಯಿತು. ಮೊದಲ ಸಲ ಗೆದ್ದು ಡಿಸಿಸಿ ಬ್ಯಾಂಕ್ ಪ್ರವೇಶಿಸಿರುವ ಚಿತ್ತಾಪುರದ ಸುನೀಲಕುಮಾರ ದೊಡಮನಿ ಅವರನ್ನು ‘ಅಪೆಕ್ಸ್ ಬ್ಯಾಂಕ್’ ಪ್ರತಿನಿಧಿ ಮಾಡುವ ನಿರ್ಧಾರವನ್ನು ಸಭೆ ಕೈಗೊಂಡಿತು. ‘ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಗೋನಾಯಕ ಅವರು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಹುದ್ದೆಗೆ ಸುನೀಲಕುಮಾರ ಹೆಸರು ಸೂಚಿಸಿದರು. ಇನ್ನುಳಿದ ನಿರ್ದೇಶಕರ ಅದನ್ನು ಸರ್ವಾನುಮತದಿಂದ ಅನುಮೋದಿಸಿದರು’ ಎಂದು ಮೂಲಗಳು ಹೇಳಿವೆ. ಸುನೀಲಕುಮಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಂಬಂಧಿ. ಸುನೀಲ ಅವರು ಚಿತ್ತಾಪುರ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗುಂಡಗುರ್ತಿ ಪಿಕೆಪಿಎಸ್ ಅಧ್ಯಕ್ಷರಾಗಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ನಗೆ ಬೀರಿದ್ದರು. ಇದೀಗ ಮೊದಲ ಗೆಲುವಿನ ಬೆನ್ನಲ್ಲೆ ಅವರ ಇದೀಗ ಅಪೆಕ್ಸ್ ಬ್ಯಾಂಕ್ ‘ಪ್ರತಿನಿಧಿ’ಯಾಗುವ ಅವಕಾಶ ಒಲಿದಿದೆ.
ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷನಾಗಿರುವುದು ಸಂತಸ ತಂದಿದೆ. ಬ್ಯಾಂಕ್‌ನಿಂದ ರೈತರಿಗೆ ಅನುಕೂಲ ಮಾಡಿಕೊಡುವುದರ ಮೂಲಕ ನನ್ನ ಜವಾಬ್ದಾರಿ ನಿಭಾಯಿಸುವೆ–ಶಂಕರಭೂಪಾಲ ಪಾಟೀಲ, ಕೆ–ವೈ ಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.